ಕಾರವಾರ: 77ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದ ಆರ್ಥಿಕ ಸಾರ್ವಭೌಮತೆ, ಸಂವಿಧಾನದ ಕನಸಾದ ಕಲ್ಯಾಣ ಕಾರ್ಯಕ್ರಮಗಳು ಗಗನ ಕುಸುಮವಾಗುತ್ತಿವೆ. ಭಾರತದಲ್ಲಿ ಮನುಷ್ಯನ ಜೀವಿಸುವ ಹಕ್ಕು, ಘನತೆಯ ಬದುಕಿನ ಹಕ್ಕು, ಸಮಾನತೆಯ ಹಕ್ಕು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ ಬಂದಿದೆ. ಆದ್ದರಿಂದ ರಾಜ್ಯದ ದುಡಿಯುವ ಜನರು ಒಂದಾಗಿ ಆ.14ರವರೆಗೆ ದೇಶವ್ಯಾಪಿ ಪ್ರಚಾರಾಂದೋಲನ ಮತ್ತು 14ರ ಮಧ್ಯರಾತ್ರಿ ಧ್ವಜಾರೋಹಣ, ಅಹೋರಾತ್ರಿ ವೈವಿಧ್ಯಮಯ ಆಚರಣೆ ನಡೆಸಲು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಮಿತಿಗಳು ಕರೆನೀಡಿವೆ.
ಜನತೆಯ ಬದುಕು ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಜನರ ದಿಕ್ಕನ್ನು ಬದಲಾಯಿಸುವ ನಿಟ್ಟಿನಲ್ಲಿ ಕೋಮುವಾದಿ ಶಕ್ತಿಗಳು ಧರ್ಮದ ಆಧಾರದಲ್ಲಿ ಜನರ ಐಕ್ಯತೆಯನ್ನು ಒಡೆಯುವ, ಆ ಮೂಲಕ ದೇಶದ ಐಕ್ಯತೆಗೆ ದಕ್ಕೆಯುಂಟು ಮಾಡುತ್ತಿವೆ. ಇಂತಹ ಅಪಾಯಕಾರಿ ಕೋಮುವಾದವನ್ನು ಸೋಲಿಸಬೇಕಿದೆ. ಇಂದು ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳು ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲಾ ಎನ್ನುವುದು ಅವರ ಮೇಲೆ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ ಮತ್ತು ಕೊಲೆಗಳ ಮೂಲಕ ಪದೇ ಪದೇ ಸಾಬೀತಾಗುತ್ತಿದೆ. ರಾಜ್ಯದ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಇದುವರೆಗೂ ಪತ್ತೆ ಹಚ್ಚಿ ಶಿಕ್ಷಿಸದಿರುವುದು ಆಳುವ ವರ್ಗ ಎಷ್ಟು ಲಿಂಗಸಂವೇದನೆಯಿಂದ ಕೂಡಿದೆ ಎಂಬುದು ಗೊತ್ತಾಗುತ್ತಿದೆ. ರಾಜ್ಯದಲ್ಲಿ ಆಹೋರಾತ್ರಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ನಮ್ಮ ಸ್ವಾತಂತ್ರ್ಯವನ್ನು ಉಳಿಸಲು ಜನತೆಯ ಹೋರಾಟಗಳನ್ನು ಮುನ್ನಡೆಸಲು ಪಣತೊಡಲು ನಾವೆಲ್ಲ ಮುಂದಾಗೋಣ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.