ಅಂಕೋಲಾ: ಮುಖಕ್ಕೆ ಅಂಟಿಕೊoಡಿದ್ದ ಪ್ಲಾಸ್ಟಿಕ್ ಡಬ್ಬ ತೆಗೆಯಲಾಗದೆ ಅಸಹಾಯಕ ಸ್ಥಿತಿಯಲ್ಲಿದ್ದ ಬೀದಿ ನಾಯಿಗೆ ಬಸ್ ಚಾಲಕ ಹಾಗೂ ನಿರ್ವಾಹಕಿ ಜೀವದಾನ ಮಾಡಿದ ಘಟನೆ ನಡೆದಿದೆ.
ಅಂಕೊಲಾದಿoದ ಬೆಳಂಬಾರಕ್ಕೆ ಹೋಗುವ ರಸ್ತೆಯಲ್ಲಿ ಬೀದಿ ನಾಯಿಯೊಂದು ಮುಖಕ್ಕೆ ಪ್ಲಾಸ್ಟಿಕ್ ಡಬ್ಬ ಸಿಕ್ಕಿಸಿಕೊಂಡು ದಾರಿ ಕಾಣದೆ ಮುಖ್ಯ ರಸ್ತೆಗೆ ಅಡ್ಡಲಾಗಿ ಅಸಹಾಯಕ ಸ್ಥಿತಿಯಲ್ಲಿ ಕುಳಿತಿತ್ತು. ಇದರಿಂದ ರಸ್ತೆ ಸಂಚಾರ ಸಹ ಸ್ಥಬ್ಧವಾಗಿತ್ತು. ಇದನ್ನು ಕಂಡ ಕ.ರಾ.ರ.ಸಾ.ಸಂ. ಅಂಕೋಲಾ ಘಟಕದ ಚಾಲಕ ಅನಂದು ಹುಲಸ್ವಾರ್ ಹಾಗೂ ನಿರ್ವಾಹಕಿ ರಾಜಮ್ಮ ಬಸ್ ನಿಂದ ಇಳಿದು ನಾಯಿಗೆ ಸಿಕ್ಕಿಕೊಂಡಿದ್ದ ಡಬ್ಬವನ್ನು ಹರಸಾಹಸಪಟ್ಟು ತೆಗೆದಿದ್ದಾರೆ.
ಹಸಿವೆಯಿಂದ ಬಳಲುತ್ತಿದ್ದ ನಾಯಿ ಒಂದು ಪ್ಲಾಸ್ಟಿಕ್ ಡಬ್ಬದಲ್ಲಿ ಆಹಾರವನ್ನು ಕಂಡಿದೆ. ಹಸಿವು ನೀಗಿಸಿಕೊಳ್ಳುವ ತರಾತುರಿಯಲ್ಲಿ ನೇರವಾಗಿ ತನ್ನ ಮುಖವನ್ನು ಡಬ್ಬದಲ್ಲಿ ಹಾಕಿದೆ. ಡಬ್ಬದ ಬಾಯಿ ಸ್ವಲ್ಪ ಚಿಕ್ಕದಾಗಿದ್ದರಿಂದ ನಾಯಿಯ ಮುಖ ವಾಪಸ್ ತೆಗೆಯಲಾಗಿದೆ ಡಬ್ಬದಲ್ಲಿಯೆ ಸಿಲುಕಿಕೊಂಡಿದೆ. ಇದನ್ನು ಕಂಡ ಸರಕಾರಿ ಬಸ್ ಚಾಲಕ ಆನಂದು ಹುಲಸ್ವಾರ್ ತಕ್ಷಣ ಬಸ್ ನಿಂದ ಇಳಿದು ಡಬ್ಬವನ್ನು ತೆಗೆಯಲು ಪ್ರಯತ್ನಪಟ್ಟರೂ ಸಾಧ್ಯವಾಗಿಲ್ಲ. ತನ್ನ ಸಹಾಯಕ್ಕೆ ಯಾರೋ ಬಂದಿರುವುದನ್ನು ಅರಿತ ನಾಯಿ ಅಲುಗಾಡದೆ ಸುಮ್ಮನೆ ನಿಂತಿತ್ತು. ಆಗ ಅದೇ ಬಸ್ ನಲ್ಲಿದ್ದ ವಾರದ ವಿಶ್ರಾಂತಿಯಲ್ಲಿದ್ದ ನಿರ್ವಾಹಕಿ ರಾಜಮ್ಮ ಹೋಗಿ ಚಾಲಕನಿಗೆ ಸಹಾಯ ಮಾಡಿದ್ದಾರೆ.
ಇಬ್ಬರ ಸಹಕಾರದಿಂದ ಕೊನೆಗೂ ಡಬ್ಬವನ್ನು ತೆಗೆದು ನಾಯಿಯನ್ನು ಸ್ವತಂತ್ರಗೊಳಿಸಿದ್ದು, ಇವರ ಪ್ರಾಣಿಪ್ರೇಮಕ್ಕೆ ಶ್ಲಾಘನೆ ದೊರೆತಿದೆ.