ಗೋಕರ್ಣ: ಇಲ್ಲಿಯ ಕಂಡಗಾರ ರಸ್ತೆಯು ಅಪೂರ್ಣಗೊಂಡಿರುವುದರಿ0ದ ಈಗ ಅಲ್ಲಿ ಜೋರಾಗಿ ಮಳೆನೀರು ಹರಿಯುತ್ತಿದೆ. ಇದರಿಂದಾಗಿ ವಾಹನದ ಮೂಲಕ ಗ್ರಾಮಕ್ಕೆ ತೆರಳಲಾಗದೇ ಸ್ಥಳೀಯರು ಸಂಕಷ್ಟ ಅನುಭವಿಸುವಂತಾಗಿದೆ.
ಮಿರ್ಜಾನ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಈ ಗ್ರಾಮವು ದಟ್ಟ ಅರಣ್ಯದಿಂದ ಕೂಡಿದ್ದು, ಈ ಹಿಂದೆ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ನಡೆಸಿದ್ದರು. ಆದರೆ ಇಲ್ಲಿಯ ನೀರಿನಿಂದ ತಮಗೆ ಸಮಸ್ಯೆ ಉಂಟಾಗುತ್ತದೆ, ನೀರು ಹೋಗಲು ಪರ್ಯಾಯ ವ್ಯವಸ್ಥೆ ಮಾಡಿ ಎಂದು ಸ್ಥಳೀಯರು ಹೇಳಿದ್ದರಿಂದಾಗಿ ಈ ಕಾಮಗಾರಿ ಅರ್ಧಕ್ಕೆ ನಿಂತಿದೆ ಎಂದು ಸ್ಥಳೀಯರಾದ ರಾಜೇಶ ನಾಯಕ, ರೋಶನ ನಾಯಕ, ಶಾಂತಾರಾಮ ನಾಯಕ, ಮಂಜು ಪಟಗಾರ ಆರೋಪಿಸಿದ್ದಾರೆ.
ಕಳೆದ 6 ತಿಂಗಳ ಹಿಂದೆ ರಸ್ತೆಯಲ್ಲಿರುವ ಹಳ್ಳಕ್ಕೆ ಸೇತುವೆ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ 4.5 ಲಕ್ಷ ರೂ. ಮಂಜೂರಿಯಾಗಿತ್ತು. ಹಾಗೇ ಕಾಮಗಾರಿಯೂ ಕೂಡ ಆರಂಭಗೊoಡಿತ್ತು. ಆದರೆ ಖಾಸಗಿ ಜಾಗದವರು ಇಲ್ಲಿ ತಕರಾರು ಮಾಡಿದ್ದರಿಂದಾಗಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಇಲ್ಲಿ ಸೇತುವೆ ನಿರ್ಮಿಸುವುದಕ್ಕಾಗಿ ಹಳೆಯ ಸೇತುವೆಯನ್ನು ಕೂಡ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ತಕರಾರು ಬಂದ ಹಿನ್ನೆಲೆಯಲ್ಲಿ ಇಲಾಖೆಯವರು ಕೆಲಸ ಸ್ಥಗಿತಗೊಳಿಸಿದ್ದಾರೆ. ಹೀಗಾಗಿ ನಮಗೆ ಸಮಸ್ಯೆ ಉಂಟಾಗಿದ್ದು, ಲೋಕೋಪಯೋಗಿ ಮತ್ತು ತಾಲೂಕು ಆಡಳಿತದವರು ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.