ಶಿರಸಿ : ಸೋಂದಾ ಸ್ವರ್ಣವಲ್ಲೀ ಸಸ್ಯಲೋಕ ಹೆಸರಿನ ಬೃಹತ್ ಜೀವ ವೈವಿಧ್ಯ ವನದಲ್ಲಿ ಜೂನ 5 ರಂದು ವೃಕ್ಷಾರೋಪಣ ಕಾರ್ಯಕ್ರಮ ನಡೆಯಿತು. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪವಿತ್ರ ವೃಕ್ಷಾರೋಪಣ ಮಾಡಿ, ಒಂದು ಕಿ.ಮೀ ಪರಿಸರ ಪಾದಯಾತ್ರೆ ನಡೆಸಿದರು. ಸಸ್ಯಲೋಕದಲ್ಲೇ ಕುಳಿತು ಜೀವ ವೈವಿಧ್ಯ ಸಮಾಲೋಚನಾ ಸಭೆ ನಡೆಸಿದರು.
ಸ್ವರ್ಣವಲ್ಲೀ ಮಹಾಸಂಸ್ಥಾನ, ಸೋಂದಾ ಗ್ರಾಮ ಪಂಚಾಯತ, ಜಾಗೃತ ವೇದಿಕೆ, ವೃಕ್ಷ ಲಕ್ಷ ಆಂದೋಲನ ಅರಣ್ಯ ಇಲಾಖೆ ಸಹಯೋಗದಲ್ಲಿ ಹಸಿರು ಸಮಾರಂಭ ನಡೆಯಿತು. ಶ್ರೀ ರಾಜರಾಜೇಶ್ವರಿ ಸಂಸ್ಕೃತ ಮಹಾ ವಿದ್ಯಾಲಯದ ಎನ್ಎಸ್ಎಸ್ ವಿದ್ಯಾರ್ಥಿಗಳು ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಿಡ ನೆಟ್ಟು ಖುಶಿಪಟ್ಟರು. ಹುಲೇಕಲ್ ವಲಯ ಅರಣ್ಯ ಇಲಾಖೆ ಜೀಜದುಂಡೆ ಕಾರ್ಯಕ್ರಮವನ್ನು ಏರ್ಪಡಿಸಿತ್ತು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಹಸಿರು ಸಂಭ್ರಮದಲ್ಲಿ ಪಾಲ್ಗೊಂಡರು. ಪೂಜ್ಯ ಸ್ವರ್ಣವಲ್ಲೀ ಸ್ವಾಮೀಜಿಯವರು “ಸಸ್ಯಲೋಕ ಈಗ ಯೌವನಕ್ಕೆ ಕಾಲಿಟ್ಟಿದೆ. ಇಲ್ಲಿ ಪವಿತ್ರ ವೃಕ್ಷಗಳಿವೆ, ಹಣ್ಣಿನ, ಔಷಧಿ ಸಸ್ಯಗಳು ತುಂಬಿವೆ”. ಎಂದು ಸಂತಸ ವ್ಯಕ್ತ ಪಡಿಸಿದರು. ಬೆಟ್ಟ ಅಭಿವೃದ್ಧಿ ಬಗ್ಗೆ ರೈತರು ಇನ್ನಷ್ಟು ಕಾಳಜಿ ವಹಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯ ಪಟ್ಟರು. ಕೇಂದ್ರದ ಅರಣ್ಯ ಸಂರಕ್ಷಣಾ ಕಾಯಿದೆ ತಿದ್ದು ಪಡಿ ಮಸೂದೆ ಬಗ್ಗೆ ಚರ್ಚೆ ಆಗಬೇಕು. “ನಾಡಿನ ಅರಣ್ಯಗಳ ರಕ್ಷಣೆಗೆ ಕಾಯಿದೆ ಬಲವಾಗಿರಬೇಕು ಸಡಿಲವಾಗಬಾರದು ಅಭಿವೃದ್ಧಿ ಸುಸ್ಥಿರವಾಗಿರಲಿ” ಎಂದು ಪರಿಸರ ಸಂದೇಶ ನೀಡಿದರು.
ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸಸ್ಯಲೋಕ ಬೆಳೆದು ಬಂದ ದಾರಿಯ ಅವಲೋಕನ ಮಾಡಿದರು. ಉಪಅರಣ್ಯ ಸಂರಕ್ಷಣಾ ಅಧಿಕಾರಿ ಡಾ. ಅಜ್ಜಯ್ಯ ಅವರು ನಾಡಿಗೇ ಮಾದರಿ ಸಸ್ಯಲೋಕ ಎಂದು ಉದ್ಗಾರ ತೆಗೆದು, ಬೆಟ್ಟ ಅಭಿವೃದ್ಧಿ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸುತ್ತೇವೆ ಎಂದರು.
ಪಂಚಾಯತ ಅಧ್ಯಕ್ಷೆ ಮಮತಾ ಜೈನ್ ಹಾಗೂ ಸದಸ್ಯರು ಎಸಿಎಫ್ ರಘು, ಆರ್.ಎಫ್.ಓ ಉಷಾ ಜಾಗೃತಿ ವೇದಿಕೆಯ ಅಧ್ಯಕ್ಷ ರತ್ನಾಕರ, ಕೃಷಿ ಪ್ರತಿಷ್ಠಾನದ ಆರ್.ಎನ್. ಹೆಗಡೆ, ಪ್ರಾಧ್ಯಾಪಕ ಡಾ.ಮಹಾಬಲೇಶ್ವರ ಕೃಷಿ ಸಮಿತಿಯ ನೀರ್ನಳ್ಳಿ ಸೀತಾರಾಂ ಆಡಳಿತ ಮಂಡಳಿ ಕಾರ್ಯದರ್ಶಿ ಜಿ.ವಿ. ಹೆಗಡೆ, ಮಹಾಬಲೇಶ್ವರ ಗುಮ್ಮಾನಿ, ಗಣಪತಿ ಬಿಸಲಕೊಪ್ಪ ಮುಂತಾದವರು ಪಾಲ್ಗೊಂಡರು.