ಶಿರಸಿ: ಯಾವುದೇ ವಿಶೇಷ ಟ್ಯೂಷನ್ ಇಲ್ಲದೆ ರೈತನ ಮಗನೊಬ್ಬ ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಶೇ.93ರಷ್ಟು ಫಲಿತಾಂಶ ದಾಖಲಿಸುವ ಮೂಲಕ ವಿಶೇಷ ಸಾಧನೆ ಮಾಡಿದ್ದಾನೆ.
ತಾಲೂಕಿನ ಮತ್ತಿಹಳ್ಳಿಯ ಕೃಷಿ ಕುಟುಂಬದ ರಮೇಶ್ ನಾಯ್ಕ್ ಮತ್ತು ಪುಷ್ಪಾ ನಾಯ್ಕ್ ದಂಪತಿಯ ಪುತ್ರ ರಾಹುಲ್ ನಾಯ್ಕ್ ಎಮ್ಇಎಸ್ ಚೈತನ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಶುಕ್ರವಾರ ಪ್ರಕಟಗೊಂಡ ದ್ವಿತೀಯು ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾನೆ. ಕನ್ನಡದಲ್ಲಿ 96, ಇಂಗ್ಲಿಷ್ನಲ್ಲಿ 91, ಭೌತವಿಜ್ಞಾನದಲ್ಲಿ 94, ರಸಾಯನವಿಜ್ಞಾನದಲ್ಲಿ 92, ಗಣಿತದಲ್ಲಿ 97 ಹಾಗೂ ಜೀವವಿಜ್ಞಾನದಲ್ಲಿ 90, ಒಟ್ಟು 560 ಅಂಕ ಪಡೆಯುವ ಮೂಲಕ ಪಾಲಕರ ನಿರೀಕ್ಷೆಯನ್ನ ಸಫಲ ಮಾಡಿದ್ದಾನೆ.
ಈ ಬಗ್ಗೆ ಸಂತಸ ಹಂಚಿಕೊಂಡ ರಾಹುಲ್, ‘ನನ್ನ ಹೆತ್ತವರ ಕನಸನ್ನು ನನಸು ಮಾಡಿದ್ದೇನೆ ಎನ್ನುವ ತೃಪ್ತಿ ನನಗೆ ತಂದಿದೆ. ನನ್ನ ಕನಸನ್ನ ನನಸಾಗಿಸಿಕೊಳ್ಳುವ ಹಂಬಲ ಇನ್ನಷ್ಟು ಹೆಚ್ಚಾಗಿದೆ. ನನ್ನ ಕುಟುಂಬ ಮೂಲತಃ ಕೃಷಿಯನ್ನೇ ಅವಲಂಬಿಸಿದೆ. ನನ್ನ ತಾಯಿ ಪ್ರತಿನಿತ್ಯ ಹೇಳುತ್ತಿದ್ದರು, ನಾವು ಪಡುವ ಕಷ್ಟವೆಲ್ಲ ನಿಮಗಾಗಿ. ಹೀಗಾಗಿ ಚೆನ್ನಾಗಿ ಓದು ಎನ್ನುವ ಸಲಹೆ ನೀಡುತ್ತಿದ್ದರು. ಇಂದು ನನ್ನ ಫಲಿತಾಂಶ ಬಂದಾಗ ನನ್ನ ತಂದೆ ಕಣ್ಣಲ್ಲಿ ಆನಂದ ಭಾಷ್ಪ ಬಂದಿರುವುದನ್ನು ನಾನು ಗಮನಿಸಿದೆ. ಮುಂದೆ ಇನ್ನುಷ್ಟು ಚೆನ್ನಾಗಿ ಓದಿ ಒಳ್ಳೆಯ ಕೆಲಸ ಸೇರುತ್ತೇನೆ’ ಎಂದರು.
‘ಪ್ರತಿನಿತ್ಯ ನಾನು 6 ಗಂಟೆಯನ್ನು ಓದಲು ಮೀಸಲಿಡುತ್ತಿದ್ದೆ. ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ಓದು ಸಮಯ 8 ತಾಸಿಗೆ ಹೆಚ್ಚಿಸಿಕೊಂಡಿದ್ದೆ. ನಾನು ಯಾವುದೇ ಟ್ಯೂಶನ್ ತೆಗದುಕೊಂಡಿಲ್ಲ. ನನಗೆ ಬಂದಿರುವ ಅನುಮಾನಗಳನ್ನು ತರಗತಿಯಲ್ಲಿಯೇ ಕೇಳಿ ತಿಳಿದುಕೊಳ್ಳುತ್ತಿದ್ದೆ. ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಮುಂದಿನ ಶಿಕ್ಷಣದ ಕುರಿತಾಗಿ ಯೋಚನೆ ಮಾಡುತ್ತಿದ್ದೇವೆ’ ಎಂದು ರಾಹುಲ್ ಸಾಧನೆಯ ಹಿಂದಿನ ಪರಿಶ್ರಮದ ಬಗ್ಗೆ ತೆರೆದಿಟ್ಟರು.