ಸಿದ್ದಾಪುರ: ತಾಲೂಕಿನ ಭಾನ್ಕುಳಿ ಶ್ರೀ ರಾಮದೇವಮಠ-ಗೋಸ್ವರ್ಗದಲ್ಲಿ ಏಪ್ರಿಲ್ 23ರಿಂದ ಮೂರು ದಿವಸಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ ಭವವ ಕಳೆವ ಬ್ರಹ್ಮಭಾವ ವೈಭವವಾಗಿ ಶಂಕರಪಂಚಮಿ ಉತ್ಸವ ನಡೆಯಲಿದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ, ಶಂಕರಪಂಚಮೀ ಉತ್ಸವ ಸಮಿತಿ ಗೌರವಾಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಹೇಳಿದ್ದಾರೆ.
ಅವರು ಭಾನ್ಕುಳಿ ಶ್ರೀರಾಮದೇವಮಠದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಏ.23 ರಂದು ಹವ್ಯಕ ಮಹಾಮಂಡಲ ಆಯೋಜನೆಯಲ್ಲಿ ‘ಪ್ರತಿಭಾ ಪ್ರದರ್ಶನ’ ಕಾರ್ಯಕ್ರಮ ಪ್ರಾರಂಭವಾಗಲಿದೆ. ಮಾತೆಯರಿಂದ ಕುಂಕುಮಾರ್ಚನೆ, ಸಂಜೆ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಪುರಪ್ರವೇಶ ನಡೆಯಲಿದೆ. 24 ರಂದು ಗುರುವಂದನೆ, ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ, ದೇವತಾ ನಾಂದಿ, ಋತ್ವಿಗ್ವರಣ, ಮಹಾಸಂಕಲ್ಪ, ಬ್ರಹ್ಮಕೂರ್ಚಹವನ, ಶ್ರೀಮಹಾಗಣಪತಿ ಹವನ, ಶ್ರೀರಾಮತಾರಕ ಹವನ, ಚಂಡಿಹವನ, ಆದಿತ್ಯ ಹವನ, ಕುಂಕುಮಾರ್ಚನೆ, ಪ್ರತಿಭಾ ಪ್ರದರ್ಶನ ಕಾರ್ಯಕ್ರಮದ ಸಮಾರೋಪ, ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ. 25ರಂದು ಶಂಕರಪಂಚಮೀ, ಘನರುದ್ರ ಪಾರಾಯಣ, ಶತರುದ್ರ ಹವನ, ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ವೇದೋ ನಿತ್ಯಮಧೀಯತಾಂ ವಿಷಯವನ್ನಾಧರಿಸಿ ಪ್ರವಚನ ನಡೆಯಲಿದೆ. ಸಂಜೆ ಕುಂಭಾಷಿ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ(ರಿ) ಕೊಂಡದಕುಳಿ ಅವರಿಂದ ಯಕ್ಷಗಾನ ಪ್ರದರ್ಶನವಿದೆ. ಘನರುದ್ರ ಪಾರಾಯಣದಲ್ಲಿ ನಾಡಿನ ಹೆಸರಾಂತ ಘನಪಾಠಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಶಂಕರಪಂಚಮಿ ಸಮಿತಿಯ ಅಧ್ಯಕ್ಷ ಕೆ.ಎನ್.ಮಂಜುನಾಥ ಭಟ್ಟ ಕವ್ಲಮನೆ, ಭಾನ್ಕುಳಿ ಮಠದ ಅಧ್ಯಕ್ಷ ಎಂ.ಎಂ.ಹೆಗಡೆ ಮಗೇಗಾರು, ವಿವಿಧ ಸಮಿತಿಗಳ ಪ್ರಮುಖರಾದ ಎಂ.ಜಿ.ರಾಮಚಂದ್ರ ಮರ್ಡುಮನೆ, ಎಂ.ವಿ.ಹೆಗಡೆ ಮುತ್ತಿಗೆ, ರಾಮಮೂರ್ತಿ ಗೋಳಗೋಡ, ಎಸ್.ಜಿ.ಹೆಗಡೆ ಭತ್ತಗೆರೆ, ಹರ್ಷ ಭಟ್ಟ ಗುಂಜಗೋಡ, ಚಂದನ ಶಾಸ್ತ್ರಿ, ಚಿದಂಬರ ಗೋಳಿಕೈ, ಎನ್.ಎನ್. ಶಾಸ್ತ್ರಿ, ಪಿ.ವಿ.ಹೆಗಡೆ ಪೇಟೆಸರ, ರಾಘವೇಂದ್ರ ಹೆಗಡೆ ಇತರರು ಉಪಸ್ಥಿತರಿದ್ದು ಹೆಚ್ಚಿನ ಮಾಹಿತಿ ನೀಡಿದರು.