ಶಿರಸಿ: ಮಲೆನಾಡು ಹಾಗೂ ಕರಾವಳಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕಾಡಿನಬೆಂಕಿಯನ್ನು ನಿಯಂತ್ರಿಸಲು ಆದ್ಯತೆಯಲ್ಲಿ ಕ್ರಮಕೈಗೊಳ್ಳುವಂತೆ ವೃಕ್ಷಲಕ್ಷ ಆಂದೋಲನ ಮುಖ್ಯಮಂತ್ರಿಗಳಿಗ ಪತ್ರ ಬರೆದಿದೆ.
ಕಳೆದ ಕೆಲವು ವರ್ಷಗಳಿಂದ ರಾಜ್ಯದ ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಬೇಸಿಗೆಯಲ್ಲಿ ಘಟಿಸುವ ಕಾಡಿನಬೆಂಕಿ ನಿಯಂತ್ರಣದಲ್ಲಿತ್ತು. ಆದರೆ, ಈ ವರ್ಷ ಕಾಡಿನಬೆಂಕಿ ತೀವ್ರವಾಗಿ ತಲೆದೋರಿದೆ. ಕಳೆದ ನವೆಂಬರ್ ತಿಂಗಳ ನಂತರ ಮಳೆ ಬಂದಿಲ್ಲವಾದ್ದರಿಂದ, ಕಾಡಿನ ಮೇಲ್ಮೈ ಪರಿಸರದಲ್ಲಿ ತೇವಾಂಶವು ಕುಸಿದಿರುವದೇ ಇದಕ್ಕೆ ಕಾರಣವೆಂದು ತಜ್ನರು ಅಭಿಪ್ರಾಯಪಟ್ಟಿದ್ದಾರೆ. ಚಾಮರಜನಗರದಿಂದ ಬೆಳಗಾಂವ ಜಿಲ್ಲೆಯವರೆಗೆ, ಮಲೆನಾಡು ಹಾಗೂ ಕರಾವಳಿ ಪ್ರದೇಶದ ಎಲ್ಲ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಾಡಿನಬೆಂಕಿ ಕಾಣಿಸಿಕೊಂಡಿದ್ದು, ಅಪಾರ ನಷ್ಟ ಉಂಟಾಗುತ್ತಿದೆ. ಕಾಡಿನ ಅಮೂಲ್ಯ ಮರಮಟ್ಟುಗಳು, ಗಿಡಮೂಲಿಕಾ ವೈವಿಧ್ಯ ನಾಶವಾಗುತ್ತಿದೆ. ವನ್ಯಪ್ರಾಣಿ ಸಂಕುಲಗಳು ಸಾಯುತ್ತಿವೆ. ನದಿ-ಕೆರೆಗಳು ಒಣಗುತ್ತಿವೆ. ಇದರಿಂದಾಗಿ, ಕಾಡಿನ ಅಕ್ಕಪಕ್ಕದ ವನವಾಸಿಗಳು ಹಾಗೂ ರೈತರ ಜೀವಕ್ಕೆ, ಸಾಕುಪ್ರಾಣಿಗಳಿಗೆ ಹಾಗೂ ಬೆಳೆಗಳಿಗೆ ಅಪಾಯ ಎದುರಾಗುತ್ತಿದೆ. ಆದ್ದರಿಂದ, ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ಕ್ರಮಕೈಗೊಳ್ಳಬೇಕೆಂದು ವಿನಂತಿಸಿಕೊಳ್ಳಲಾಗಿದೆ.
ಅಲ್ಲದೇ ಈ ಬಗ್ಗೆ ಕೆಲವು ಸಲಹೆಗಳನ್ನು ನೀಡಿರುವ ಸಮಿತಿ, ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ, ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾಮಟ್ಟದ ಅವಘಡ ನಿರ್ವಹಣಾ ಪ್ರಾಧಿಕಾರವನ್ನು ಕ್ರಿಯಾಶೀಲಗೊಳಿಸಬೇಕು. ಪ್ರತಿಯೊಂದು ಜಿಲ್ಲೆಯ ಪ್ರತಿ ಅರಣ್ಯವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿಗಳನ್ನು ಅವರ ಅಧಿಕಾರವ್ಯಾಪ್ತಿ ಪ್ರದೇಶದ ಬೆಂಕಿ ನಿಯಂತ್ರಣ ಕಾರ್ಯದ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಿ, ಅವರಿಗೆ ಅವಘಡ ನಿರ್ವಹಣಾ ಪ್ರಾಧಿಕಾರದಿಂದ ಸಂಪೂರ್ಣ ಮಾರ್ಗದರ್ಶನ ಹಾಗೂ ಸಹಕಾರ ದೊರೆಯುವಂತಾಗಬೇಕು. ಸ್ಥಳದಲ್ಲಿ ಬೆಂಕಿ ಆರಿಸುವ ಸಿಬ್ಬಂದಿ ಹಾಗೂ ನಾಗರಿಕರಿಗೆ, ಸೂಕ್ತ ಸುರಕ್ಷತಾ ಸಲಕರಣೆ, ಪ್ರಥಮ ಚಿಕಿತ್ಸೆ ಸೌಲುಭ್ಯ, ಕುಡಿಯುವ ನೀರು ಇತ್ಯಾದಿ ಅವಶ್ಯ ಸಂಗತಿಗಳನ್ನು ಪೂರೈಸುವ ವ್ಯವಸ್ಥೆಯಾಗಬೇಕು ಎಂದು ತಿಳಿಸಿದೆ.
ಪ್ರತಿ ಅರಣ್ಯವಲಯದಲ್ಲಿ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ತುರ್ತು ಸಮಾಲೋಚನೆ ಸಭೆ ನಡೆಸಿ, ಸ್ಥಳೀಯರ ಸಹಕಾರ ಪಡೆಯುವ ಪ್ರಯತ್ನ ಮಾಡಬೇಕು. ಸ್ಥಳೀಯ ಗ್ರಾಮ ಅರಣ್ಯ ಸಮಿತಿಗಳು, ಸ್ವಸಹಾಯ ಗುಂಪುಗಳು, ಸಹಕಾರಿ ಸಂಘಗಳು, ಯುವಕ ಮಂಡಲಗಳು- ಇವರೆಲ್ಲರ ಸಹಕಾರ ಕೋರಬೇಕು. ತ್ವರಿತ ಸಂಪರ್ಕ ಸಾಧಿಸಲು ಗ್ರಾಮೀಣ ಪೋಲಿಸ್ ಇಲಾಖೆ ಹಾಗೂ ಬೆಂಕಿ ಆರಿಸಲು ಸ್ಥಳೀಯ ಅಗ್ನಿಶಾಮಕ ದಳವು ಸಂಪೂರ್ಣ ಸಹಕಾರ ನೀಡುವಂತೆ ಸೂಕ್ತ ಆದೇಶ ಹೊರಡಿಸಬೇಕು. ಸಾರ್ವಜನಿಕರ ಸಹಭಾಗಿತ್ವ ದೊರಕಿಸುವ ದೃಷ್ಟಿಯಿಂದ, ಸ್ಥಳೀಯ ಸ್ವಯಂ ಸೇವಾಸಂಸ್ಥೆಗಳು, ನಾಗರಿಕ ಸೇವಾ ಸಮಿತಿಗಳು, ಸ್ಥಳೀಯ ಮಾಧ್ಯಮಗಳು ಮುಂತಾದವರ ಸಹಕಾರ ಪಡೆಯಬೇಕು. ಈ ಕುರಿತು ಎದುರಾಗುವ ತುರ್ತು ಹೆಚ್ಚುವರಿ ವೆಚ್ಚವನ್ನು ನಿಭಾಯಿಸುವ ಅಗತ್ಯವಿದ್ದಲ್ಲಿ, ಅರಣ್ಯ ಇಲಾಖೆಗೆ ಜಿಲ್ಲಾಧಿಕಾರಿಗಳ ತುರ್ತುನಿಧಿ ಹಾಗೂ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಲ್ಲಿ ಲಭ್ಯವಿರುವ ನಿಧಿಯನ್ನು ಬಳಸಿಕೊಳ್ಳಲು ಸೂಕ್ತ ಆಡಳಿತಾತ್ಮಕ ನಿರ್ದೇಶನ ನೀಡಬೇಕು. ಈ ಎಲ್ಲ ಅಂಶಗಳನ್ನು ಆದ್ಯತೆಯಲ್ಲಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಂಡು, ಕಾಡಿನಬೆಂಕಿ ನಿಯಂತ್ರಣ ಕಾರ್ಯ ಸಾಧಿಸಬೇಕಾಗಿ ಮನವಿ ಮಾಡಿಕೊಳ್ಳಲಾಗಿದೆ.