ಕಾರವಾರ: ಇಲ್ಲಿನ ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಉಪಾಧ್ಯಕ್ಷ ರಾಜೇಶ ಜಿ.ನಾಯ್ಕ ಸಾರಥ್ಯದಲ್ಲಿ, ಗುರುಪ್ರಸಾದ ಹೆಗಡೆ ವಿರಚಿತ ದ್ವಿತೀಯ ಕೃತಿ ‘ಕಲಿಯುಗದ ಕ್ರಾಂತಿವೀರ’ ಅರ್ಥಾತ್ ‘ಬಡವನ ಬಾಳಲ್ಲಿ ಬೀಸಿದ ಬಿರುಗಾಳಿ’ ಹಸ್ತಪ್ರತಿ ಉದ್ಘಾಟನಾ ಕಾರ್ಯಕ್ರಮವು ತಾಲೂಕಿನ ತೋಡುರ ಕಾಲೋನಿಯ ಕುವೆಂಪು ಶಾಲೆಯ ಎದುರುಗಡೆ ನಡೆಯಿತು.
ಹಸ್ತಪ್ರತಿಯನ್ನ ಊರ ಪುರೋಹಿತ ನಾಗರಾಜ ಕಟಗಿ ಉದ್ಘಾಟಿಸಿ, ನಾಟಕವು ಸಮಾಜಮುಖಿಯ ಸಂಕೇತವೆಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಕಾರವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಮಾ ನಾಯ್ಕ, ಇಂದಿನ ದಿನಗಳಲ್ಲಿ ಯುವ ಲೇಖಕರು ನೈಜ ಕಲೆಯನ್ನು ಬಿಂಬಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ಬಾಬು ಶೇಖ್ ಮಾತನಾಡಿ, ಯುವ ಕಲಾವಿದರಿಗೆ ಯಾವತ್ತೂ ನಮ್ಮ ಸಹಾಯ- ಸಹಕಾರ ಇದೆ ಎಂದು ನುಡಿದರು. ತೋಡುರ ಗ್ರಾಮ ಪಂಚಾಯತಿಯ ಅಧ್ಯಕ್ಷ ಪೇರು ಗೌಡ, ಇಲ್ಲಿನ ಯುವಕರು ಸಾಂಸ್ಕೃತಿಕ ಕಲೆಯಲ್ಲಿ ತುಂಬಾ ಪರಿಣಿತ ಹೊಂದಿರುವುದರಿಂದ ನಾಟಕವನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಲೇಖಕ ಗುರುಪ್ರಸಾದ ಹೆಗಡೆ, ಕಾರವಾರ ರಂಗಭೂಮಿ ಕಲಾವಿದರ ವೇದಿಕೆ ಕೋಶಾಧ್ಯಕ್ಷ ಜ್ಞಾನೇಶ್ವರ ನಾಯ್ಕ, ಉಪಾಧ್ಯಕ್ಷ ಸುರೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಅಂಚೇಕರ, ತೋಡುರ ಗ್ರಾಮ ಪಂಚಾಯತಿ ಸದಸ್ಯರುಗಳಾದ ಚಂದ್ರಕಾಂತ ಚಿಂಚಣಕರ, ಸಂತೋಷ ನಾಯ್ಕ, ವಿಮಲಾ ಆಗೇರ, ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಸಂಘಟನಾ ಕಾರ್ಯದರ್ಶಿ ಅಭಿಷೇಕ ಕಳಸ, ಜನಾರ್ಧನ ನಾಯ್ಕ, ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ, ಅಂಕೋಲಾ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ನಾಗರಾಜ ಜಾಂಬ್ಳೇಕರ ಹಾಜರಿದ್ದು, ಸಾಂದರ್ಭಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಕಲಾವಿದರು ಹಾಗೂ ಸಾಧಕರಿಗೆ ಸನ್ಮಾನಿಸಲಾಯಿತು. ಸಹಾಯ ಸಹಕಾರ ನೀಡಿದ ಸರ್ವರಿಗೂ ಕಾರ್ಯಕ್ರಮದ ಸಂಘಟಕ ರಾಜೇಶ ನಾಯ್ಕ ಧನ್ಯವಾದಗಳನ್ನು ಅರ್ಪಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ತೋಡುರಿನ ಶ್ರೀನಾಗದೇವತಾ ನವತರುಣ ನಾಟ್ಯ ಮಂಡಳಿ ಕಲಾವಿದರಿಂದ ನಾಟಕದ ಪ್ರಥಮ ಪ್ರಯೋಗ ಯಶಸ್ವಿಯಾಗಿ ನಡೆಯಿತು.