ಹೊನ್ನಾವರ: ನಾಟ್ಯಗುರು ಡಿ.ಡಿ.ನಾಯ್ಕ ಅವರು ಭರತನಾಟ್ಯದ ಎಲ್ಲ ಹೂರಣಗಳನ್ನು ಅರಿತಿರುವ ಪ್ರಬುದ್ಧ ಕಲಾವಿದರಾಗಿದ್ದರು ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದರು.
ಪಟ್ಟಣದ ಪ್ರಭಾತನಗರದ ಕಸಾಪ ಕಚೇರಿಯಲ್ಲಿ ಭರತನಾಟ್ಯ ಗುರು ಡಿ.ಡಿ. ನಾಯ್ಕ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಭಾನುವಾರ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುತ್ತಿದ್ದರು. ಅವರಂಥ ಗುರುಗಳು ದೊರಕಿರುವುದು ಭಾಗ್ಯ ಎನ್ನುತ್ತಾರೆ. ಅವರ ವಿದ್ಯಾರ್ಥಿಗಳು ಇಂದು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಸ್.ಎಚ್.ಗೌಡ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗಳಿಗೆ ಭರತನಾಟ್ಯ ಕಲಿಸಿದ ಗುರು ಡಿ.ಡಿ.ನಾಯ್ಕ ಅವರು ಅಗಲುವಿಕೆ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರಿಗೆ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇವೆ ಎಂದರು. ಶಿಕ್ಷಕರಾದ ಎಂ.ಡಿ.ನಾಯ್ಕ, ಸಾಧನಾ ಬರ್ಗಿ ಮಾತನಾಡಿದರು. ಕಸಾಪ ಗೌರವ ಕಾರ್ಯದರ್ಶಿ ಎಚ್.ಎಂ. ಮಾರುತಿ, ಕೋಶಾಧ್ಯಕ್ಷ ನಾರಾಯಣ ಹೆಗಡೆ ಉಪಸ್ಥಿತರಿದ್ದರು.