ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಿರ್ದಿಷ್ಟ ಗುರಿಯತ್ತ ಪ್ರಯತ್ನಶೀಲರಾಗಬೇಕು ಎಂದು ಉದ್ಯಮಿ ಗೋವಿಂದ ಗೌಡ ಹೇಳಿದರು.
ತಾಲೂಕಿನ ಕೂಜಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಸೇವಾ ಶಿಬಿರದ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಎನ್‌ಎಸ್‌ಎಸ್ ತರಬೇತಿ ಮಕ್ಕಳಲ್ಲಿ ಶಿಸ್ತು, ಸಂಯಮವನ್ನು ಕಲಿಸುತ್ತದೆ. ಇದು ಜೀವನದಲ್ಲಿ ಬದುಕು ಸಾಗಿಸಲು ಆಸರೆಯಾಗುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಶಾರದಾ ಭಟ್ ಮಾತನಾಡಿ, ಮನುಷ್ಯ ಜೀವನದಲ್ಲಿ ಸಂಸ್ಕೃತಿಯ ಮಹತ್ವವನ್ನು ಸ್ವ ಅನುಭವಗಳೊಂದಿಗೆ ವರ್ಣಿಸಿದರು. ಶಿಕ್ಷಕ ಚಿದಾನಂದ ಭಂಡಾರಿ ಅವರು, ವಿದ್ಯಾರ್ಥಿ ಜೀವನ, ಹಾಗೂ ಸಾಮರ್ಥ್ಯದ ಕುರಿತು ವಿಶೇಷ ಉಪನ್ಯಾಸ ನೀಡಿದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಸ್.ಕೆ. ಹೆಗಡೆ ಮಾತನಾಡಿ, ಯುವಜನತೆ ಮತ್ತು ಭಾರತೀಯತೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಜಳ್ಳಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಗೌರಿ ಶ್ರೀಧರ್ ಗೌಡ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕುಪ್ಪು ಗೌಡ, ಕಾರ್ಯಕ್ರಮಾಧಿಕಾರಿ ಡಾ. ಎಸ್ ಡಿ ಬುಲ್ಲಾ, ಎನ್‌ಎಸ್‌ಎಸ್ ಕಾರ್ಯದರ್ಶಿ ಶೋಭಿತ್ ಗೌಡ, ಗೌತಮಿ ಪೈ ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.