ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 10530 ಅರ್ಜಿಗಳು ತಿರಸ್ಕಾರವಾಗಿದ್ದು ಅರಣ್ಯವಾಸಿಗಳಿಗೆ ಹಕ್ಕನ್ನು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಫೆಬ್ರವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಸಿದ್ಧಾಪುರ ತಾಲೂಕಿನ ದೊಡ್ಮನೆ, ವಾಜಗೋಡ, ಕ್ಯಾದಗಿ, ಇಟಗಿ, ಹಲಗೇರಿ, ಬಿದ್ರಕಾನ್, ಕೋಲಸಿರ್ಸಿ, ಕವಂಚೂರು ಮತ್ತು ಮನಮನೆ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಂಘಟಿಸಿದ ಸಂದರ್ಭದಲ್ಲಿ ಹೇಳಿದರು.
ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿಯನ್ನೇ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಅನಿವಾರ್ಯ. ಇಲ್ಲದಿದ್ದಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುತ್ತಾರೆಂದು ಹೇಳಿದರು.
ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ:
ಅರಣ್ಯ ಭೂಮಿ ಹಕ್ಕನ್ನು ಪಡೆಯಲು ಅರಣ್ಯ ಹಕ್ಕು ಕಾಯಿದೆಯಿಂದ ಮಾತ್ರ ಸಾಧ್ಯ. ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಅರ್ಜಿಗಳು ತಿರಸ್ಕಾರವಾಗುತ್ತಿದ್ದು, ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖಂಡ, ಜೆ.ಪಿ. ನಾಯ್ಕ ಕಡಕೇರಿ, ಕೃಷ್ಣಪ್ಪ ನಾಯ್ಕ, ದಿನೇಶ್ ನಾಯ್ಕ ಬೇಡ್ಕಣಿ, ರಾಘು ನಾಯ್ಕ ಕವಂಚೂರು, ವಿದ್ಯಾ ಪ್ರಕಾಶ ನಾಯ್ಕ, ಮಾರುತಿ ನಾಯ್ಕ ಹಲಗೇರಿ, ಶಾಂತಕುಮಾರ ಪಾಟೀಲ್, ಗೋವಿಂದ ಗೌಡ ಕಿಲ್ಲಾರ, ವಿನಾಯಕ ಮರಾಠಿ ಕೋಡಿಗದ್ದೆ, ಗಣಪತಿ ನಾಯ್ಕ, ಧನಂಜಯ್ ನಾಯ್ಕ ಕೋಡಿಗದ್ದೆ ಮುಂತಾದವರು ಉಪಸ್ಥಿತರಿದ್ದರು.