ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರದಾರ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ಏನು ಮಾಡಿಲ್ಲ ಎನ್ನುವ ಸುಳ್ಳಿನ ಸರದಾರ, ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿರುವ ಬಿಜೆಪಿಯವರು ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದಾರಾ ಎಂದು ಹೇಳಲಿ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದರು.
ಹೊಸಪೇಟೆಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಳ್ಳಾರಿ ಅವಿಭಾಜ್ಯ ಜಿಲ್ಲೆ ಇದ್ದಾಗ ಸಕ್ಕರೆ, ಎಣ್ಣೆ, ಜವಳಿ ಹಾಗೂ ಬಿಸ್ಕೆಟ್ ಕಾರ್ಖಾನೆ ಇದ್ದ ಊರು. ಈಗ ಎಲ್ಲವೂ ಬಂದ್ ಮಾಡಿ ನಿರುದ್ಯೋಗ ಹೆಚ್ಚಿಸಿರುವುದೆ ಬಿಜೆಪಿ ಸರಕಾರದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ತುಂಗ ಭದ್ರಾ ಆಣೆಕಟ್ಟಿನ ಶಂಕುಸ್ಥಾಪನೆ ಮಾಡಿದ್ದು ಪ್ರಥಮ ಪ್ರಧಾನಿ ನೆಹರು. ಆದರೆ ಮೋದಿ ಹಾಗೂ ಬಿಜೆಪಿ ಸರಕಾರ ಯಾವುದಾದರೂ ಒಂದು ಆಣೆಕಟ್ಟಿಗೆ ಅಡಿಗಲ್ಲು ಹಾಕಿದ್ದಾರಾ? ಬಿಜೆಪಿ ಸರಕಾರ ಕಾಂಗ್ರೆಸ್ ಪಕ್ಷ ಕಟ್ಟಿದ ಎಲ್ಲ ಸಾರ್ವಜನಿಕ ಉದ್ಯಮಗಳನ್ನು ಖಾಸಗಿ ಮಾಡಿ ತನ್ನ ಸಾಲಗಾರ ಉದ್ಯಮಿ ಸ್ನೇಹಿತರ ಜೇಬು ತುಂಬಿಸುತ್ತಿದೆ. ಈ ರಾಷ್ಟ್ರದ ಶೇ.40ರಷ್ಟು ಸಂಪತ್ತು ದೇಶದ ಶೇ.1 ಭಾಗದಷ್ಟು ಜನರ ಬಳಿ ಇದೆ. ಈ ರಾಷ್ಟ್ರದ 70ರಷ್ಟು ಸಂಪತ್ತು ಕೇವಲ ಶೇ.10ರಷ್ಟು ಜನರ ಬಳಿ ಇದೆ ಎಂದು ಹರಿಪ್ರಸಾದ್ ಹೇಳಿದರು.
ಈ ಹಿಂದೆ ಬಹುಮತ ಬಾರದೆ ಬಿಜೆಪಿಯನ್ನು ಜನ ತಿರಸ್ಕರಿಸಿದ್ದಾಗ ನಾವು ಸಮ್ಮಿಶ್ರ ಸರಕಾರವನ್ನು ಮಾಡಿದ್ದೆವು. ಆದರೆ ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮ ಸ್ವಾಭಿಮಾನ ಸೇರಿದಂತೆ ಎಲ್ಲವನ್ನು ಮಾರಾಟ ಮಾಡಿರುವ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ? ಈ ಶಾಸಕರಿಗೆ ನೀವು ಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದು ಅವರು ಕರೆ ನೀಡಿದರು.
ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಜನರ ಆರೋಗ್ಯ, ಶಿಕ್ಷಣ, ಉದ್ಯೋಗದ ಬಗ್ಗೆ ಮಾತನಾಡುತ್ತೇವೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದುರಂತದಂತೆ ಜಾತಿ, ಧರ್ಮ, ಭಾಷೆ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ ಎಂದು ಪಡೆದಿದ್ದ ಕೀರ್ತಿಯನ್ನು ಮತ್ತೆ ಪುನಃಸ್ಥಾಪಿಸಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು ಎಂದು ಹರಿಪ್ರಸಾದ್ ಮನವಿ ಮಾಡಿದರು.