ಹಳಿಯಾಳ: ತಾಲೂಕಿನ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯನ್ನು ತಹಶೀಲ್ದಾರ್ ಅವರು ಮಧ್ಯಪ್ರವೇಶಿಸಿ ಸರಿಪಡಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಎದುರಾಗಲಿದೆ ಎಂದು ಕಬ್ಬು ಬೆಳೆಗಾರ ಸಂಘದ ಹಿರಿಯ ಮುಖಂಡ ಎನ್.ಎಸ್.ಜಿವೋಜಿ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ತೇರಗಾಂವ ಗ್ರಾಮದಲ್ಲಿ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ರೈತರಿಗೆ ನೀಡಿದ ಭರವಸೆ ಈಡೇರಿಸಿಲ್ಲ ಹಾಗೂ ಕಬ್ಬು ಕಟಾವು ಗ್ಯಾಂಗ್ ಸಮಸ್ಯೆ, ಹೆಚ್ಚುವರಿ ಕಟಾವು ಹಣ ಲಗಾನಿ ಸೇರಿ ಕಾರ್ಖಾನೆ ಝೋನ್ ಏರಿಯಾ ಬಿಟ್ಟು ಹೊರಗಡೆಯಿಂದ ಕಬ್ಬು ತಂದು ತಾಲೂಕಿನ ಕಬ್ಬನ್ನು ಸಾಗಿಸಲು ಹಿಂದೆಟು ಹಾಕುತ್ತಿರುವ ಕುರಿತು ಮತ್ತು ರೈತರ ಕುಂದು ಕೊರತೆ ಬಗ್ಗೆ ಕಬ್ಬು ಬೆಳೆಗಾರ ಸಂಘಟನೆ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕಬ್ಬು ಕಟಾವು ಗ್ಯಾಂಗ್ ಸಮಸ್ಯೆ, ಕಾರ್ಖಾನೆಯ ಫೀಲ್ಡ್ ಮನ್‌ಗಳಿಂದ ಆಗುತ್ತಿರುವ ಸಮಸ್ಯೆ, ಆದ್ಯತೆ ಪಟ್ಟಿಯಂತೆ ಕಬ್ಬು ಸಾಗಿಸಲು ಅವಕಾಶ ನೀಡದೆ ಇರುವುದು. ಹಳಿಯಾಳದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ತನ್ನ ವ್ಯಾಪ್ತಿ ಮೀರಿ ಹೊರಗಡೆಯಿಂದ ಕಬ್ಬು ಆಮದು ಮಾಡಿಕೊಳ್ಳುತ್ತಿದ್ದು, ಕ್ಷೇತ್ರದಲ್ಲಿ ಕಬ್ಬು ಸಕಾಲಕ್ಕೆ ಕಟಾವು ಆಗದೆ ಬಿಸಿಲಿಗೆ ಒಣಗುತ್ತಿರುವ ಬಗ್ಗೆ ರೈತರಿಂದ ದೂರುಗಳು ಕೇಳಿ ಬಂದವು.
ಅಲ್ಲದೇ ತೇರಗಾಂವ ಗ್ರಾಮದಲ್ಲಿ 600 ರೈತರಲ್ಲಿ ಈಗ 37ನೇ ರೈತನಿಗೆ ಕಟಾವಿಗೆ ಬಂದಿದ್ದು, ಹಳಿಯಾಳ ತಾಲೂಕಿನಲ್ಲಿ ಶೇ 30ರಷ್ಟು ಕಬ್ಬನ್ನು ಕಟಾವು ಮಾಡಲಾಗಿಲ್ಲ ಎಂಬ ಬಗ್ಗೆ ಚರ್ಚೆಯಾಗಿ ಕಾರ್ಖಾನೆಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿವೋಜಿ, ತಹಶೀಲ್ದಾರ್ ಅವರು ಆಡಳಿತ ಸೌಧದಲ್ಲಿ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆಯ ಸಭೆ ನಡೆಸಿ ಕಾರ್ಖಾನೆಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕು. ಇಲ್ಲವಾದಲ್ಲಿ ಈ ಬಾರಿ ಗ್ರಾಮಾಂತರ ಭಾಗದಿಂದ ಹೋರಾಟ ಆರಂಭಿಸಲಾಗುವುದು ಎಂದು ತಾಲೂಕಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಬ್ಬು ಬೆಳೆಗಾರ ಸಂಘಟನೆ ತಾಲೂಕಾಧ್ಯಕ್ಷ ಶಂಕರ ಕಾಜಗಾರ, ರಾಜ್ಯ ಉಪಾಧ್ಯಕ್ಷ ಎಮ್.ವಿ.ಘಾಡಿ ಪ್ರಮುಖರಾದ ಅಶೋಕ ಮೇಟಿ, ಮೋಹನ ಹಳದುಕರ, ಸುಭಾಷ ಸಾವಂತ ಇತರರು ಇದ್ದರು.