ಸಿದ್ದಾಪುರ: ತಾಲೂಕಿನ ಬೇಡ್ಕಣಿ ತ್ಯಾರ್ಸಿಯ ಐತಿಹಾಸಿಕ ವಿವೇಕಾನಂದ ಕ್ರೀಡಾಂಗಣದಲ್ಲಿ ದೈವಜ್ಞ ಗೆಳೆಯರ ಬಳಗ ಬೇಡ್ಕಣಿ ಹಾಗೂ ಊರ ನಾಗರಿಕರ ಸಹಯೋಗದಲ್ಲಿ ನಡೆದ ದ್ವಿತೀಯ ವರ್ಷದ ರಾಜ್ಯ ಮಟ್ಟದ ಬೇಡ್ಕಣಿ ದೈವಜ್ಞ ಕ್ರಿಕೆಟ್ ಕ್ರೀಡಾಕೂಟದಲ್ಲಿ ಹೊನ್ನಾವರ ವಾಹಿನಿ ತಂಡವು ಚಾಂಪಿಯನ್ ಟ್ರೋಫಿ ಪಡೆದಿದ್ದು, ರನ್ನರ್ಸ್ ಅಪ್ ಟ್ರೋಫಿಯನ್ನು ಸಾಗರದ ದೈವಜ್ಞ ದೀಪ ಪರಿವಾರ ಪಡೆದುಕೊಂಡಿದೆ.
ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತಾರಾಮ ವಿ.ಶೇಟ್ ಉದ್ಘಾಟಿಸಿ ಮಾತನಾಡಿ, ಇದು ರಾಜ್ಯಮಟ್ಟದ ಸಮಾಜದ ಕ್ರಿಕೆಟ್ ಕ್ರೀಡಾಕೂಟವಾಗಿದೆ. ಎಲ್ಲಾ ಕ್ರೀಡಾಭಿಮಾನಿಗಳು ತಮ್ಮ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸಮಾಜದ ಅಭಿಮಾನದಿಂದ ಭಾಗವಹಿಸಿ ಸಹಕರಿಸಿದ್ದೀರಿ. ಇದು ಸಮಾಜದ ಅಭಿವೃದ್ಧಿಗೆ ಮತ್ತು ಕ್ರೀಡಾ ಪ್ರೋತ್ಸಾಹಕ್ಕೆ ಉತ್ತಮ ವೇದಿಕೆ ಎಂದರು.
ಸಿದ್ದಾಪುರ ದೈವಜ್ಞ ಬ್ರಾಹ್ಮಣ ಯುವಕ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಡಿ.ಶೇಟ್ ಮಾತನಾಡಿ, ಕ್ರೀಡೆ ಮಾನವ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆ ಅಳವಡಿಸಿಕೊಂಡಲ್ಲಿ ಆರೋಗ್ಯಕರವಾಗಿ, ದೈಹಿಕವಾಗಿ ಸದೃಢವಾಗಿ ಮತ್ತು ಸುಖ, ಶಾಂತಿ, ನೆಮ್ಮದಿಯಿಂದ ಇರಲು ಸಹಾಯ ಮಾಡುವುದಲ್ಲದೆ ವ್ಯಕ್ತಿಯ ಪಾತ್ರ ಮತ್ತು ವ್ಯಕ್ತಿತ್ವವನ್ನು ನಿರ್ಮಿಸುವಲ್ಲಿ ಸಹಾಯ ಮಾಡುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ನಾಗರಾಜ ಆರ್.ನಾಯ್ಕ ಮಾತನಾಡಿ, ರಾಜ್ಯಮಟ್ಟದ ಕ್ರೀಡಾಕೂಟ ನಮ್ಮ ಬೇಡ್ಕಣಿಯಲ್ಲಿ ಏರ್ಪಡಿಸಿದ್ದು ಹೆಮ್ಮೆಯ ವಿಷಯ. ಇನ್ನೂ ಈ ರೀತಿಯ ಕ್ರೀಡೆ, ಸಮಾಜಮುಖಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ನಾವು ನಿಮ್ಮ ಜೊತೆ ಯಾವಾಗಲೂ ಬೆನ್ನೆಲುಬಾಗಿ ಸಹಕರಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು ಸತ್ಕರಿಸಲಾಯಿತು.
ಶನೇಶ್ವರ ದೇವಾಲಯದ ಅರ್ಚಕರು ಹಾಗೂ ಹಿರಿಯರಾದ ವೇದಮೂರ್ತಿ ಲಕ್ಷ್ಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೇಡ್ಕಣಿ ಕೋಟೆ ಆಂಜನೇಯ ದೇವಾಲಯದ ಅಧ್ಯಕ್ಷ ವಿ.ಎನ್.ನಾಯ್ಕ, ಗ್ರಾಮ ಪಂಚಾಯತ ಸದಸ್ಯ ಈರಪ್ಪ ಡಿ.ನಾಯ್ಕ, ಸಿದ್ದಾಪುರ ದೈವಜ್ಞ ಶ್ರೀರಾಜರಾಜೇಶ್ವರಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿಜಯಾ ರಾಯ್ಕರ್, ಬೇಡ್ಕಣಿಯ ದೈವಜ್ಞ ಬ್ರಾಹ್ಮಣ ಮಿತ್ರ ಮಂಡಳಿಯ ಅಧ್ಯಕ್ಷ ನಾಗರಾಜ್ ಎಲ್.ಭಟ್. ಹಾಗೂ ಕ್ರೀಡಾಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವ್ಯಶ್ರೀ ಭಟ್ ಪ್ರಾರ್ಥನಾ ಗೀತೆ ಹಾಡಿದರು. ಸಂತೋಷ್ ಕೆ.ಶೇಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಹೇಶ್ ವಿ.ಶೇಟ್ ಕಾರ್ಯಕ್ರಮ ನಿರೂಪಿಸಿದರು.