ಅಂಕೋಲಾ: ತಾಲೂಕಿನ ಜನತೆಯ ಆರಾಧ್ಯ ದೈವ ಶ್ರೀಶಾಂತಾದುರ್ಗೆ ದೇವಿಯ ಮೂಲ ದೇವಸ್ಥಾನ ಶಿರಕುಳಿಯಲ್ಲಿರುವ ಶ್ರೀಕಾನದೇವಿಯ ಜೀರ್ಣೋದ್ಧಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರಾರಂಭಿಕವಾಗಿ ಜ.13ರಂದು ಎರಡು ಮುಷ್ಠಿಯಲ್ಲಿ ನಾಣ್ಯ ಸಮರ್ಪಿಸುವ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಾಡಿನ ಹಾಗೂ ತಾಲೂಕಿನ ಆಸ್ತಿಕ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಶ್ರೀ ಕಾನದೇವಿ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಅಧ್ಯಕ್ಷ ಸತೀಶ ಮಾದೇವ ನಾಯ್ಕ ವಿನಂತಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಕುಳಿಯಲ್ಲಿರುವ ಶ್ರೀ ಕಾನದೇವಿಗೆ ತನ್ನದೇ ಆದ ಪರಂಪರೆಯ ಇತಿಹಾಸಿಕ ಐತಿಹ್ಯವಿದೆ. ಶ್ರೀ ದೇವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಗ್ರಾಮದ ಜನತೆ ಸಭೆ ಸೇರಿ ಜೀರ್ಣೋದ್ಧಾರ ನಡೆಸುವಂತೆ ತಿರ್ಮಾಸಲಾಗಿತ್ತು. ಇದಕ್ಕೆ ಶ್ರೀ ಶಾಂತಾದುರ್ಗಾ ದೇವಸ್ಥಾನ ಟ್ರಸ್ಟ್ನವರು ಸಹ ತುಂಬು ಹೃದಯದಿಂದ ಸಹಕರಿಸಿ ನಮ್ಮ ಕಾರ್ಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.
ಶಿರಕುಳಿ, ಅಂಬಾರಕೊಡ್ಲ, ಅಸ್ಲಗದ್ದೆ, ಬೊಗ್ರಿಬೈಲ, ಕಂತ್ರಿಯ ಸುತ್ತಮುತ್ತಲಿನ ಗ್ರಾಮದ ಆಸ್ತಿಕ ಭಕ್ತಾಧಿಗಳು ದೇವಸ್ಥಾನವನ್ನು ಭವ್ಯವಾಗಿ ನಿರ್ಮಿಸುವ ಸದುದ್ದೇಶದಿಂದ ದೇವಸ್ಥಾನದ ರೂಪುರೇಷೆಯನ್ನು ಸಿದ್ಧಪಡಿಸಲಾಗಿದೆ. ಯಲ್ಲಾಪುರದ ಗೋಪಾಲಕೃಷ್ಣ ಹಂಡರಮನೆ ಭಟ್ ಅವರ ವೈದಿಕ ಸೂಚನೆಯ ಮೇರೆಗೆ ಜೀರ್ಣೋದ್ಧಾರದ ಪ್ರಾರಂಭಿಕ ಧಾರ್ಮಿಕ ಕಾರ್ಯಕ್ರಮವಾಗಿ ಜ. 13 ರ ಶುಕ್ರವಾರದಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಎರಡು ಮಷ್ಠಿಯಲ್ಲಿ ನಾಣ್ಯ ಸಮರ್ಪಿಸುವ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಎಲ್ಲ ಆಸ್ತಿಕ ಭಕ್ತಾಧಿಗಳು ಶ್ರೀ ದೇವರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಧನ್ಯತೆ ಸಮರ್ಪಿಸಬೇಕಾಗಿ ಕೇಳಿಕೊಳ್ಳುತ್ತೇವೆ ಎಂದರು.
ಟ್ರಸ್ಟ್ನ ಗೌರವಾಧ್ಯಕ್ಷ ರಮೇಶ ವಿ.ನಾಯ್ಕ ಮಾತನಾಡಿ ಆಸ್ತಿಕ ಭಕ್ತಾಧಿಗಳ ತುಂಬು ಹೃದಯದ ಸಹಕಾರದಲ್ಲಿ 70 ರಿಂದ 80 ಲಕ್ಷ ರೂ ವೆಚ್ಚದಲ್ಲಿ ದೇವಸ್ಥಾನವನ್ನು ತಾಮ್ರದ ಹೊದಿಕೆಯ ನೀಲನಕ್ಷೆಯೊಂದಿಗೆ ಸುಂದರವಾಗಿ ಕಂಗೊಳಿಸುವoತೆ ಯೋಜನೆ ರೂಪಿಸಲಾಗಿದೆ. ಇಂಜಿನಿಯರ್ ಬೊಬ್ರಾವಾಡದ ಪ್ರಭಾಕರ ನಾಯ್ಕ ಅವರು ಆಕರ್ಷಕವಾಗಿ ನೀಲ ನಕ್ಷೆ ಸಿದ್ಧಪಡಿಸಿದ್ದಾರೆ. ಪೌರಾಣಿಕ ಹಾಗೂ ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಶ್ರೀ ಕಾನದೇವಿಯ ಭವ್ಯ ದೇವಸ್ಥಾನದ ನಿರ್ಮಾಣದ ಕಾರ್ಯದಲ್ಲಿ ಅನೇಕರು ತಮ್ಮ ಕೊಡುಗೆಳನ್ನು ನೀಡಿ ಸಹಕರಿಸಿದ್ದಾರೆ. ಹಾಗೆ ಇನ್ನು ಸಹ ಶ್ರೀ ದೇವರ ಭಕ್ತಾಧಿಗಳು ತನು-ಮನ-ಧನದಿಂದ ಜೊತೆಯಾಗಿ ದೇವಸ್ಥಾನವನ್ನು ನಿರ್ಮಿಸಲು ಕಾರಣಿಕರ್ತರಾಗಿ ಎಂದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಕಾರ್ಯದರ್ಶಿ ಪರುಶರಾಮ ವಿ.ನಾಯ್ಕ, ಉಪಾಧ್ಯಕ್ಷ ಮಾರುತಿ ಡಿ.ನಾಯ್ಕ, ಸದಸ್ಯ ಸುಧಾಕರ ಡಿ.ನಾಯ್ಕ, ಊರ ಹಿರಿಯರಾದ ಬೀರಪ್ಪಾ ನಾಯ್ಕ, ಪುರಸಭೆಯ ಸದಸ್ಯರು, ಗ್ರಾಮದವರು ಆದ ಶ್ರೀಧರ ನಾಯ್ಕ, ಸದಸ್ಯ ಮೋಹನ ನಾಗಪ್ಪ ನಾಯ್ಕ, ಸದಸ್ಯ ಪ್ರವೀಣ ಟಿ. ಗೌಡ, ಸಂತೋಷ ರಾಯ್ಕರ ಸೇರಿದಂತೆ ಇನ್ನಿತರ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.