ಯಲ್ಲಾಪುರ: ಅರಣ್ಯದಿಂದ ನಾಯಿಗಳು ಅಟ್ಟಿಸಿಕೊಂಡು ಬಂದ ಕಾರಣಕ್ಕೆ ತೋಟದ ಮನೆಯ ಗೋಬರ್ ಗ್ಯಾಸ್ ಪ್ಲಾಂಟ್ ನಲ್ಲಿ ಅಡಗಿ ಕುಳಿತಿದ್ದ ಕಾಳಿಂಗ ಸರ್ಪವನ್ನು ದೆಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಹಳ್ಳಿ ಬೀಟ್ ಪಾರೇಸ್ಟರ್ ಸಂಗಮೇಶ ಸುಂಕದ ರಕ್ಷಣೆ ಮಾಡಿದ್ದಾರೆ.
ಸುಮಾರು 8ರಿಂದ 10 ಅಡಿ ಉದ್ದದ ಕಾಳಿಂಗ ಸರ್ಪ(ಕಿಂಗ್ ಕೋಬ್ರಾ) ಕಟ್ಟಿಗೆ ಗ್ರಾಮದ ಶ್ರೀಪಾದ ಕಟ್ಟಿಗೆ ಚಿಕ್ಕದಂಡೆ ಅವರ ತೋಟದ ಅಂಚಿನ ಅರಣ್ಯದಲ್ಲಿ ಓಡಾಡಿಕೊಂಡಿತು. ಕಾಳಿಂಗ ಸರ್ಪವನ್ನು ಕಂಡ ನಾಯಿಗಳು ತೋಟಕ್ಕೆ ಹಾವನ್ನು ಅಟ್ಟಿಸಿಕೊಂಡು ಬಂದಿವೆ. ನಾಯಿಯಿಂದ ತಪ್ಪಿಸಿಕೊಂಡು ತೋಟದ ಮನೆಯ ಸಮೀಪವಿದ್ದ ಗೋಬರ್ ಗ್ಲಾಸ್ ಪ್ಲಾಂಟಿನ ಒಳಗೆ ಅಡಗಿ ಕುಳಿತಿದ್ದ ಕಾಳಿಂಗವನ್ನು ದೆಹಳ್ಳಿ ಬೀಟ್ ಫಾರೆಸ್ಟರ್, ಸಂಗಮೇಶ ಸುಂಕದ ಕೂಡಲೇ ಸ್ಥಳಕ್ಕಾಗಮಿಸಿ ಹತ್ತು ನಿಮಿಷದಲ್ಲಿ ಅದನ್ನು ರಕ್ಷಿಸಿದ್ದಾರೆ.
ಶಿವಪುರ ತೂಗು ಸೇತುವೆಯ ಅಂಚಿನ ಜನ ಸಂಚಾರವಿಲ್ಲದ ಒಳ ಅರಣ್ಯದಲ್ಲಿ ಯಲ್ಲಾಪುರ ಆರ್‌ಫ್‌ಓ ಎಲ್.ಎ.ಮಠ ಹಾಗೂ ದೆಹಳ್ಳಿ ಡಿಆರ್‌ಎಫ್‌ಒ ಶಿವಾನಂದ ಕಡಹಟ್ಟಿ ಸಮ್ಮುಖದಲ್ಲಿ ಬಿಟ್ಟಿದ್ದಾರೆ. ಸುರಕ್ಷಿತವಾಗಿ ಕಾಡಿಗೆ ಬಿಟ್ಟಿರುವ ಸಂಗಮೇಶ್ ಸುಂಕದ ಅವರ ಕಾರ್ಯಕ್ಕೆ ಸ್ಥಳೀಯರಾದ ಶ್ರೀಪಾದ ಕಟ್ಟೆಗದ್ದೆ ಶ್ಲಾಘಿಸಿದ್ದಾರೆ.
7 ವರ್ಷದಿಂದ ಹಾವುಗಳನ್ನು ರಕ್ಷಿಸುತ್ತಿರುವ ಸಂಗಮೇಶ್
ಕಳೆದ ಏಳು ವರ್ಷಗಳಿಂದ ಕಿಂಗ್ ಕೋಬ್ರಾ ಸೇರಿದಂತೆ ಕಾಮನ್ ಕ್ರೇಟ್(ಕಟ್ಟಾವು) ನಾಗರಹಾವು ಕೆರೆ ಹಾವು ಇನ್ನಿತರ ಹಾವುಗಳನ್ನು ಸಂಗಮೇಶ ಸುಂಕದ ರಕ್ಷಣೆ ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿಯ ಶರಾವತಿ ವನ್ಯಜೀವಿ ಅಭಯಾರಣ್ಯದಲ್ಲಿ ಹಾವುಗಳ ರಕ್ಷಣೆಗೆ ತೊಡಗಿಸಿಕೊಂಡ ಅವರು ಇದುವರೆಗೂ ವಿಷಯುಕ್ತ ಐವತ್ತಕ್ಕೂ ಹೆಚ್ಚು ಹಾವುಗಳ ರಕ್ಷಣೆ ಮಾಡಿದ್ದಾರೆ. ಅದರಲ್ಲಿ 15 ಕಾಳಿಂಗ ಸರ್ಪಗಳು ಸೇರಿವೆ. ಮೂರು ವರ್ಷದ ಹಿಂದೆ ಯಲ್ಲಾಪುರದ ದೆಹಳ್ಳಿ ಬೀಟ್ ಗಾರ್ಡಾಗಿ ಸೇವೆ ಸಲ್ಲಿಸಲು ಪ್ರಾರಂಭವಾದ ನಂತರ, ಮೂರು ಕಿಂಗ್ ಕೋಬ್ರಾ, ಹತ್ತಕ್ಕೂ ಹೆಚ್ಚು ವಿಷಯುಕ್ತ ನಾಗರಹಾವುಗಳನ್ನು ರಕ್ಷಿಸಿದ್ದಾರೆ. ಹಾವುಗಳ ರಕ್ಷಣೆಯ ನಂತರ ಮೊಬೈಲ್ ಅಥವಾ ಕ್ಯಾಮೆರಾ ಮುಂದೆ ಇವರು ಪ್ರದರ್ಶನ ಮಾಡುವುದಿಲ್ಲ. ನಮ್ಮ ಪ್ರಚಾರಕ್ಕಾಗಿ ಈ ರೀತಿ ಪ್ರದರ್ಶನ ಮಾಡಿದರೆ, ಹಾವುಗಳು ಕೆರಳಿ ಸಾರ್ವಜನಿಕರ ಮೇಲೆ ದಾಳಿ ಮಾಡುವ ಅವಕಾಶಗಳಿರುತ್ತದೆ ಎಂದು ಅವರು ಹೇಳುತ್ತಾರೆ.