ಅಂಕೋಲಾ: ಕ್ಷೇತ್ರದ ಹಲವು ರಸ್ತೆಗಳು ದುಸ್ಥಿತಿಯಲ್ಲಿರುವುದನ್ನು ನೋಡಿ ಬೇಸರವಾಗಿತ್ತು. ಈಗ ಬಹುತೇಕ ರಸ್ತೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ಶೀಘ್ರದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು.
ತಾಲ್ಲೂಕಿನ ವಾಸರಕುದ್ರಗಿ, ಡೋಂಗ್ರಿ, ಅಚವೆ, ಹಿಲ್ಲೂರು ಹಾಗೂ ಮೊಗಟಾ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಸಲುವಾಗಿ ಹಲವರು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಅದರಂತೆ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಮಾನವೀಯತೆ ಆಧಾರದಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು. ಪರಸ್ಪರ ಸಹಾಯ ಸಹಕಾರದಿಂದ ಯಶಸ್ಸು ಸಾಧ್ಯವಾಗುತ್ತದೆ. ಯಾವುದೇ ಸಾರ್ವಜನಿಕ ಸಮಸ್ಯೆ, ಬೇಡಿಕೆ, ಮನವಿಗಳಿದ್ದರೆ ನೇರವಾಗಿ ಬಂದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಹಿಲ್ಲೂರು: ಕ್ಷೇತ್ರದ ಜನರ ಅನುಕೂಲಕ್ಕಾಗಿ ಕಾಮಗಾರಿಗಳು ಆಗುತ್ತಿದೆ. ರಸ್ತೆಗಳೆ ಕಾಣದ ಗ್ರಾಮಗಳಿಗೆ ಸರ್ವಋತು ರಸ್ತೆ ನಿರ್ಮಾಣ ಮಾಡಲಾಗಿದೆ. ಇನ್ನೂ ಹಲವು ಜನರಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಅನುದಾನವನ್ನು ನೀಡಲಾಗಿದೆ. ಈ ಭಾಗದ ರಸ್ತೆ, ಶಾಲೆ, ಸಭಾಭವನ ಹಾಗೂ ಸೇರಿದಂತೆ ಮೂಲ ಸೌಲಭ್ಯಗಳು ನೀಡಿದ ಸಂತೃಪ್ತಿ ಇದೆ ಎಂದು ಹೇಳಿದರು. ಅಚವೆ ಗ್ರಾಮದ ವಿವಿಧ ಭಾಗದಲ್ಲಿ ರಸ್ತೆ ನಿರ್ಮಾಣವನ್ನು ಮಾಡಲಾಗಿದೆ. ಇನ್ನೂ ಅವಶ್ಯಕವಾಗಿರುವ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ಇಲ್ಲಿಯ ಕೆಲವು ಮನೆಗಳಿಗೆ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ಗಮನಕ್ಕೆ ಇದೆ. ಶೀಘ್ರದಲ್ಲಿ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಡೋಂಗ್ರಿ: ಇಲ್ಲಿಯ ಜನರು ರಸ್ತೆಯಲ್ಲಿ ಓಡಾಡುವುದಕ್ಕೆ ಪಡುತ್ತಿದ್ದ ಕಷ್ಟವನ್ನು ಕಂಡಿದ್ದೇನೆ. ಇಲ್ಲಿ ಸುಮಾರು 56 ಕೋಟಿ ಅನುದಾನವನ್ನು ಈ ಪಂಚಾಯತಿಗೆ ಒದಗಿಸಿದ್ದೇನೆ. ಇಲ್ಲಿ ಆಗಿರುವ ಕಾಮಗಾರಿಗಳು ಜನರ ಕಣ್ಣಿಗೆ ಕಾಣುತ್ತಿದೆ. ಸರಾಗ ಸಂಪರ್ಕಕ್ಕೆ ಸಹಕಾರಿಯಾಗಿದೆ ಎಂದರು. ಈ ಗ್ರಾಮ ನನ್ನ ಮನೆ. ಇಲ್ಲಿಯ ಜನರ ಸಂಕಷ್ಟಕ್ಕೆ ನಾನು ನಿಮ್ಮೊಂದಿಗೆ ಇರುತ್ತೇನೆ. ಈಗಾಗಲೇ ರಾಮನಗುಳಿ ಸೇತುವೆ, ತೂಗು ಸೇತುವೆಗೆ ಅನುದಾನವನ್ನು ಒದಗಿಸಿದ್ದು, ಕಾಮಗಾರಿಗಳ ಪ್ರಗತಿಯಾಗುತ್ತಿದೆ. ಎರಡು ಮೂರು ತಿಂಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳುವ ವಿಶ್ವಾಸವಿದೆ. ಜನರ ಬಳಕೆಗೆ ಸಿಗಲಿದೆ ಎಂದರು. ಕಲ್ಲೇಶ್ವರ ಗ್ರಾಮದಲ್ಲಿ ಅಡಿಕೆ ಮರದ ಮೇಲಿನಿಂದ ಬಿದ್ದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವಾರಕುದ್ರಗಿ: ಯಾವುದೇ ಕಾರ್ಯಗಳು ಆಗಬೇಕು ಎಂದು ದೇವರು ನಿಶ್ಚಯಿಸಿರುತ್ತದೆ. ಅದು ಆಗಿಯೇ ತೀರುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯಾದರೆ ಜನರ ಅಭಿವೃದ್ಧಿಯಾಗುತ್ತಾರೆ. ರಸ್ತೆ, ದೇವಸ್ಥಾನ, ಶಾಲಾ ಕಟ್ಟಡ ಮೂಲಭೂತ ಸೌಕರ್ಯವನ್ನು ನೀಡಲು ಶ್ರಮಿಸಿದ್ದೇನೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಏತ ನೀರಾವರಿ ಯೋಜನೆಗೆ ಅನುದಾನ ಬಿಡುಗಡೆಯಾಗಿದೆ ಎಂದರು. ನನಗೆ ಯಾರ ಬಗ್ಗೆಯೂ ಬೇಧವಿಲ್ಲ. ನಾನು ಎಲ್ಲರಿಗೂ ಶಾಸಕಿಯಾಗಿದ್ದೇನೆ. ಯಾರೇ ಬೇಡಿಕೆ ಮನವಿಯನ್ನು ಮಾಡಿದರೆ ಆ ಭಾಗದ ಜನರ ಕಷ್ಟ ನಿವಾರಣೆಗೆ ಸ್ಪಂದಿಸಿದ್ದೇನೆ. ಬಸ್ ನಿಲುಗಡೆಗೆ ಮನವಿ ಮಾಡಿದ್ದು, ಸಾರಿಗೆ ವಿಭಾಗದ ವ್ಯವಸ್ಥಾಪಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಬಸ್ ನೀಲುಗಡೆ ಮಾಡುವಂತೆ ಸೂಚಿಸಿ ಸಮಸ್ಯೆ ಇತ್ಯರ್ಥಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರು, ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ದೇವಸ್ಥಾನ ಆಡಳಿತ ಮಂಡಳಿಯ ಪ್ರಮುಖರು, ಅಧಿಕಾರಿಗಳು, ಊರಿನ ಮುಖಂಡರು, ಸಾರ್ವಜನಿಕರು ಇದ್ದರು.