ಜೊಯಿಡಾ: ತಾಲೂಕಿನ ಜನರು ಸೂಪಾ ಜಲಾಶಯ ನಿರ್ಮಿಸಲು ತಮ್ಮ ಜಮೀನು, ಮನೆಯನ್ನು ತ್ಯಾಗ ಮಾಡಿದ್ದಾರೆ. ನಮ್ಮ ತಾಲೂಕಿನಿಂದ ರಾಜ್ಯ, ಹೊರ ರಾಜ್ಯಗಳಿಗೆ ವಿದ್ಯುತ್ ನೀಡಲಾಗುತ್ತದೆ. ತಾಲೂಕಿನ ನೀರಿನಿಂದ ಇಲ್ಲಿಯ ಕಾರ್ಖಾನೆಯವರು ಉದ್ಯಮ ನಡೆಸುತ್ತಿದ್ದಾರೆ. ಆದರೆ ತಾಲೂಕಿನ ರೈತರಿಗೆ ಮಾತ್ರ ಕಾಳಿ ನದಿ ನೀರಿನ ಯಾವ ಉಪಯೋಗವು ಸಿಗುತ್ತಿಲ್ಲ. ಮೊದಲು ತಾಲೂಕಿನ ಜನರಿಗೆ ನೀರು ಸಿಗವಂತೆ ಸರ್ಕಾರ ಮಾಡಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಬ್ಬು ಬೆಳೆಯುವ ರೈತರು ಕಡಿಮೆ ಪ್ರಮಾಣದಲ್ಲಿ ಇದ್ದಾರೆ. ಇದ್ದ ರೈತರ ಕಬ್ಬುಗಳನ್ನು ಮೊದಲು ಕಟಾವು ಮಾಡಲು ಕಾರ್ಖಾನೆಯವರು ಮುಂದಾಗಬೇಕು. ಇಲ್ಲಿನ ರೈತರಿಗೆ ಕಾಳಿ ನದಿ ನೀರನ್ನು ಕೃಷಿಗೆ ನೀಡುವ ಮೂಲಕ ರೈತರಿಗೆ ಸರ್ಕಾರ ಸಹಾಯ ಮಾಡಬೇಕು. ಇಲ್ಲಿನ ಜನರಿಗೆ ಕಬ್ಬು ಬೆಳೆಯಲು ಸರ್ಕಾರ ಪ್ರೋತ್ಸಾಹ ಮಾಡಬೇಕು. ತಾಲೂಕು ಕಾಡಿನಿಂದ ಕೂಡಿದ ಪ್ರದೇಶವಾದ್ದರಿಂದ ಕಬ್ಬು ಬೆಳೆಗೆ ಹಾನಿಯಾಗದಂತೆ ಅರಣ್ಯ ಇಲಾಖೆ ರೈತರ ಕಬ್ಬಿನ ಗದ್ದೆಗಳಿಗೆ ಬೇಲಿ ವ್ಯವಸ್ಥೆ ಮಾಡಿ, ಕಾಡುಪ್ರಾಣಿಗಳ ಹಾವಳಿಯನ್ನು ತಪ್ಪಿಸಬೇಕು. ರಾಜ್ಯದ ಎಲ್ಲಾ ಕಬ್ಬು ಬೆಳೆಗಾರರ ಕಬ್ಬಿಗೆ ಸಿಗುವ ಹಣದ ಮೌಲ್ಯದಷ್ಟೇ ನಮ್ಮ ಜಿಲ್ಲೆಯ ರೈತರಿಗೂ ಸಿಗಬೇಕು. ಇಲ್ಲಿನ ಎಲ್ಲಾ ಪಕ್ಷದ ರಾಜಕಾರಣಿಗಳು ರಾಜಕೀಯ ದೃಷ್ಟಿಯಿಂದ ರೈತರನ್ನು ಬಳಸಿಕೊಳ್ಳದೇ. ರೈತರ ಸಂಕಷ್ಟ ಕಾಲದಲ್ಲಿಯೂ ರೈತರ ಬೆನ್ನಲುಬಾಗಿ ನಿಲ್ಲಬೇಕು. ಕೇವಲ ಭರವಸೆಗಳನ್ನು ನೀಡುವುದು ಬಿಟ್ಟು ಕಬ್ಬು ಬೆಳೆಗಾರರಿಗೆ ಯೋಗ್ಯ ದರವನ್ನು ಸಿಗುವಂತೆ ಮಾಡಿ ರೈತರಿಗೆ ಅನುಕೂಲ ಮಾಡಬೇಕಿದೆ. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಯೋಗ್ಯ ದರ ಮತ್ತು ಸರಿಯಾದ ಸಮಯದಲ್ಲಿ ಕಟಾವಿನ ಬಗ್ಗೆ ಸರ್ಕಾರ ಎಚ್ಚೆತ್ತು ರೈತರ ಸಮಸ್ಯೆಗೆ ನ್ಯಾಯ ಸಿಗುವಂತೆ ಮಾಡಬೇಕಿದೆ ಎಂದರು.
ತಾಲೂಕಿನ ರಾಮನಗರ, ಮೌಳಂಗಿ, ಜಗಲಬೇಟ ಇನ್ನಿತರ ಭಾಗದಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದ್ದು, ಕಾಡು ಪ್ರಾಣಿಗಳ ಕಾಟ ಮತ್ತು ಬೆಳೆಯನ್ನು ಕಾರ್ಖಾನೆಗಳಿಗೆ ಸರಿಯಾದ ಸಮಯದಲ್ಲಿ ಒಯ್ಯಲು ವ್ಯವಸ್ಥೆ ಇಲ್ಲದ ಕಾರಣ ಮತ್ತು ಯೋಗ್ಯದರ ಇಲ್ಲದ ಕಾರಣ ತಾಲೂಕಿನ ರೈತರು ಕಬ್ಬು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ತಾಲೂಕಾ ಆಡಳಿತ, ಜಿಲ್ಲಾಡಳಿತ ರೈತರ ಸಮಸ್ಯೆಗೆ ಸ್ಪಂದಿಸಬೇಕು. ಡಿ.23ರಂದು ಧಾರವಾಡದಲ್ಲಿ ರಾಜ್ಯ ಮಟ್ಟದ ವಿಶ್ವ ರೈತ ದಿನಾಚರಣೆಗೆ ನಡೆಯುತ್ತಿದೆ. ತಾಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದರು.
ಈ ಸಂದರ್ಭದಲ್ಲಿ ರೈತ ಸಂಘದ ಪರಶುರಾಮ ಹಟ್ಟಿಕರ, ಸುಭಾಷ್ ಸಾವಂತ, ಪರಶುರಾಮ ಎಳಗುಕರ, ಸತೀಶ್ ನಾಯ್ಕ ಹುಡಸಾ, ಕಾಳಿ ಬ್ರಿಗೇಡ್‌ನ ಅಧ್ಯಕ್ಷ ರವಿ ರೇಡ್ಕರ್, ಆಗ್ನೇಯ ಡಿಸೋಜಾ ಇತರರು ಇದ್ದರು.