ಶಿರಸಿ: ತಾಲೂಕಿನ ಉಳ್ಳಾಲ ಮತ್ತು ಕೊಪ್ಪ ಗ್ರಾಮಗಳನ್ನು ಒಳಗೊಂಡು ಉಳ್ಳಾಲಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಳ್ಳಾಲ ಗ್ರಾಮವು ಈ ಮೊದಲು ಮುಂಡಗೋಡ ತಾಲೂಕಿನ ಜಂಬೇಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಉಪಕೇಂದ್ರವಾಗಿ ಕಾರ್ಯ ನಿರ್ವಹಿಸಿತ್ತಾ ಬಂದಿದ್ದುಇದೀಗ ಈ ಭಾಗದ ಜನರಿಗೆ ಅನುಕೂಲವಾಗುವಂತೆ ಸ್ವತಂತ್ರವಾಗಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವಾಗಿ ಪ್ರಾರಂಭವಾಗಿದೆ ಎಂದರು. ನಾವು ಈ ಭಾಗದ ರೈತರನ್ನು ಸಹಕಾರ ವ್ಯವಸ್ಥೆಗೆ ತರಬೇಕು ಎಂಬ ಉದ್ದೇಶದಿಂದ ಹಾಲು ಉತ್ಪಾದಕ ರೈತರ ಜೊತೆ ಸಭೆ ನಡೆಸಿ ಸರಕಾರ ಹಾಗೂ ಒಕ್ಕೂಟದ ಸೌಲಭ್ಯಗಳ ಕುರಿತಾಗಿ ಮಾಹಿತಿ ನೀಡಿ ರೈತರ ಮನವೊಲಿಸಿ ಉಳ್ಳಾಲದಲ್ಲಿ ಒಂದು ಹಾಲು ಉತ್ಪಾದಕರ ಸಹಕಾರ ಸಂಘವನ್ನು ಪ್ರಾರಂಭಿಸಲಾಯಿತು ಎಂದರು. ಹಾಲು ಉತ್ಪಾದಕ ರೈತರು ಹೆಚ್ಚು ಹಾಲು ಉತ್ಪಾದನೆಯ ಜೊತೆಯಲ್ಲಿ ಮುಖ್ಯವಾಗಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸುವಲ್ಲಿ ಹೆಚ್ಚಿನ ಗಮನ ನೀಡಬೇಕು, ಜಿಲ್ಲೆಯ ಸಹಕಾರ ವ್ಯವಸ್ಥೆಯ ಅಡಿಯಲ್ಲಿ ಹಾಲು ಉತ್ಪಾದನಾ ಕ್ಷೇತ್ರ ಬೆಳೆಯುತ್ತಿರುವುದರಿಂದ ತಾವೆಲ್ಲರೂ ಇದರ ಜೊತೆ ಕೈ ಜೋಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾಗಬೇಕು ಎಂದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿಯೊಂದಿಗೆ ನಾವು ಹೊರಟಿದ್ದೇವೆ ಅದಕ್ಕಾಗಿ ತಾವುಗಳು ಮನೆಗೊಂದು ಹಸು ಕಟ್ಟಿ ಹಾಲು ಉತ್ಪಾದನಾ ಕ್ಷೇತ್ರವನ್ನುಇನ್ನಷ್ಟು ಬಲ ಪಡಿಸಬೇಕೆಂದು ವಿನಂತಿಸಿಕೊಂಡರು. ನಮ್ಮ ಜಿಲ್ಲೆಯ ಹಾಲನ್ನು ಇಲ್ಲೆಯೇ ಪ್ಯಾಕ್ ಮಾಡಿ ಗ್ರಾಹಕರಲ್ಲಿಗೆ ತಲುಪಿಸುವ ವ್ಯವಸ್ಥೆ ಜಾರಿಗೆ ಬಂದಿರುವುದರಿಂದ ಜಿಲ್ಲೆಯ ಮಾರುಕಟ್ಟೆಯ ಬೇಡಿಕೆಯನ್ನು ಸರಿದೂಗಿಸಲು ಈಗಿರುವ ಹಾಲು ಶೇಖರಣೆಗಿಂತ ಪ್ರತೀ ದಿನಕ್ಕೆ ಇನ್ನೂ 20ಸಾವಿರ ಲೀಟರ್ನಷ್ಟು ಅಧಿಕ ಹಾಲಿನ ಅವಶ್ಯಕತೆಯಿದ್ದು ತಾವುಗಳು ಹೈನುಗಾರಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೈನುಗಾರಿಕೆಯನ್ನು ಉಪಕಸುಬಾಗಿಸದೇ ಅದನ್ನು ಮುಖ್ಯ ಕಸುಬಾಗಿ ಪರಿಗಣಿಸಿಕೊಂಡು ಉತ್ತಮ ಗುಣಮಟ್ಟದ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡುವಂತೆ ಕರೆ ನೀಡಿದರು. ಹಾಗೂ ಸಂಘದಿಂದ ಸಿಗಬಹುದಾದ ಎಲ್ಲಾ ಸೌಕರ್ಯಗಳನ್ನು ಕೊಡಿಸಲು ನಾನು ಸದಾ ನಿಮ್ಮೊಂದಿಗೆ ಇರುತ್ತೇನೆಂದು ತಿಳಿಸಿ, ಶುಭಕೋರಿದರು.
ಈ ಕಾರ್ಯಕ್ರಮದಲ್ಲಿ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕರಾದ ಶಂಕರ ಪರಮೇಶ್ವರ ಹೆಗಡೆ, ಉಳ್ಳಾಲಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಿರುಮಲ ಸೂರ್ಯನಾರಾಯಣ ಭಟ್, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿಯ ನಿರ್ದೇಶಕ ತಿಮ್ಮಯ್ಯ ಹೆಗಡೆ, ಗ್ರಾಮ ಪಂಚಾಯಿತಿ ಬಿಸಲಕೊಪ್ಪದ ಅಧ್ಯಕ್ಷ ರಾಘವೇಂದ್ರ ಮಂಜುನಾಥ ನಾಯ್ಕ, ಸದಸ್ಯ ವಿದ್ಯಾದರ ಭಟ್, ನೇತ್ರಾವತಿ ಭೋವಿವಡ್ಡರ, ಸಂಘದ ಆಡಳಿತ ಮಂಡಳಿಯ ಸದಸ್ಯರುಗಳು, ಹಾಲು ಉತ್ಪಾದಕ ರೈತರು, ಧಾರವಾಡ ಸಹಕಾರ ಹಾಲು ಒಕ್ಕೂಟದ ಉತ್ತರ ಕನ್ನಡ ಜಿಲ್ಲೆಯ ಶೇಖರಣೆ ಮತ್ತು ತಾಂತ್ರಿಕ ವಿಭಾಗ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಸಹಾಯಕವ್ಯವಸ್ಥಾಪಕ ಡಾ. ವಿವೇಕ್ ಎಸ್ ಆರ್, ವಿಸ್ತರಣಾಧಿಕಾರಿ ಮೌನೇಶ ಎಂ. ಸೋನಾರ ಉಪಸ್ಥಿತರಿದ್ದರು. ಶ್ರೀಧರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಉಳ್ಳಾಲಕೊಪ್ಪ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ರಮೇಶ ಬುದ್ದಿವಂತ ಪೂಜಾರಿ ವಂದಿಸಿದರು.