ಶಿರಸಿ: ಮೂಲಭೂತ ಸೌಕರ್ಯಗಳಾದ ರಸ್ತೆ, ಕಾಲುಸಂಕ, ಕುಡಿಯುವ ನೀರು, ವಸತಿ ಯೋಜನೆ, ಅರಣ್ಯ ಭೂಮಿ ಹಕ್ಕು ತೀವ್ರ ಸಮಸ್ಯೆಗಳಿದ್ದಾಗಲೂ ಸ್ವತಂತ್ರ ಸಿಕ್ಕಿ 75 ವರ್ಷಗಳಾದರೂ ಸೌಲಭ್ಯದಿಂದ ವಂಚಿತವಾಗಿರುವ ಕುರಿತು ಮಂಜಗುಣಿಯಲ್ಲಿ ಬೃಹತ್ ಹಳ್ಳಿ ಕಡೆ ನಡಿಗೆ ಕಾರ್ಯಕ್ರಮದ ಮೂಲಕ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಮಂಜಗುಣಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಇಂದು ಭೂಮಿ ಹಕ್ಕು ಮತ್ತು ಮೂಲಭೂತ ಸೌಕರ್ಯಕ್ಕಾಗಿ ಹಳ್ಳಿ ಕಡೆ ನಡಿಗೆ ಪ್ರಯುಕ್ತ 10 ಕೀ.ಮೀ ಪಾದಯಾತ್ರೆ ಜರುಗಿದ ನಂತರ ಗ್ರಾಮ ಪಂಚಾಯತ ಆವರಣದಲ್ಲಿ ಜರುಗಿದ ಸಭೆಯಲ್ಲಿ ಹೋರಾಟಗಾರರಾದ ಪ್ರವೀಣ್ ಗೌಡ ತೆಪ್ಪಾರ, ದೇವರಾಜ ಮರಾಠಿ, ಪುಟ್ಟು ಮರಾಠಿ ನೆಕ್ಕರಕಿ, ನಾರಾಯಣ ಮಡಿವಾಳ, ವೆಂಕಟ ಮರಾಠಿ ಸವಲೆ, ಕಿರಣ ಮರಾಠಿ ದೇವನಳ್ಳಿ, ಕೃಷ್ಣ ಮುಂಡಗಾರ, ರಾಮಚಂದ್ರ ಮರಾಠಿ, ನಾಗು ಗೌಡ ಮುಂತಾದವರಿಂದ ತೀವ್ರ ಆಕ್ಷೇಪ ವ್ಯಕ್ತವಾದವು.
ಪಂಚಾಯತ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ ಪೂರಕವಾದ ಯೋಜನೆ ಜಾರಿಗೆ ಬರದೇ ಇರುವುದು, ಪ್ರವಾಸೋದ್ಯಮ ದಿಶೆಯಲ್ಲಿ ವೆಂಕಟರಮಣ ದೇವಾಲಯ ಅಭಿವೃದ್ದಿಗೆ ಸಹಕರಿಸದೇ ಇರುವುದು ಹಾಗೂ ಸಂಪರ್ಕ ಕೊರತೆ, ಶಾಲಾಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಹಳ್ಳಿ ಕಡೆ ನಡಿಗೆ ಕಾರ್ಯಕ್ರಮದ ನೇತೃತ್ವವನ್ನು ಧುರೀಣರಾದ ಕೃಷ್ಣ ಮರಾಠಿ ಸವಲೆ, ಮೀಟು ಚಂದು ನೆಕ್ಕರಿಕೆ, ರಾಮಚಂದ್ರ ತಿಮ್ಮ, ಭಾಸ್ಕರ ದುಗ್ಗು ಸವಲೆ, ಅನಂತ ಕಲಗಾರ, ವೆಂಕಟರಮಣ ಭಂಡಾರಿ ಬಕ್ಕಳಗದ್ದೆ, ಪರಶುರಾಮ ಭಂಡಾರಿ, ಬಾಲಚಂದ್ರ ನೆಕ್ಕರಿಕೆ ಮುಂತಾದವರು ವಹಿಸಿದ್ದರು.
ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆ ಪ್ರವೀಣ್ ಗೌಡ ತೆಪ್ಪಾರ ನಿರ್ವಹಿಸಿದರು ಮತ್ತು ಗ್ರಾಮ ಪಂಚಾಯತ ಪಿಡಿಓ ಸೌಮ್ಯ ಹೆಗಡೆ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಚಲವಾದಿ ಮನವಿಯನ್ನು ಸ್ವೀಕರಿಸಿದರು.
ಹಿಂದುಗಳು ವಾಸಿಸುವ ಪ್ರದೇಶದ ಸೌಕರ್ಯ ತಾತ್ಸಾರ:
ಚುನಾವಣೆಯಲ್ಲಿ ಹಿಂದೂ ಭಾವನೆ ಕೆರಳಿಸಿ ಮತಪಡೆಯುವರು. ಚುನಾವಣೆ ಫಲಿತಾಂಶದ ನಂತರ ಹಿಂದೂ ಮತದಾರರ ಪ್ರದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಆಸಕ್ತಿ ತೋರಿಸದೇ ಇರುವುದು ಖೇದಕರ. ಇದಕ್ಕೆ ಶಿರಸಿ ತಾಲೂಕಾ ಪಶ್ಚಿಮ ಭಾಗದ ಗ್ರಾಮಸ್ಥರೇ ಸಾಕ್ಷಿ. ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಭಾವನಾತ್ಮಕ ಭಾವನೆ ತುಂಬಿ, ರಾಜಕೀಯ ಭವಿಷ್ಯ ನಿರ್ಮಿಸಿಕೊಳ್ಳುವ ಇಂದಿನ ರಾಜಕೀಯ ತಂತ್ರಗಾರಿಕೆಯಲ್ಲಿ ಅಭಿವೃದ್ಧಿಯಲ್ಲಿ ತಾರತಮ್ಯ ಕಂಡುಬರುವ ಇಂದಿನ ರಾಜಕೀಯ ಚಿತ್ರಣದಲ್ಲಿ ಆರ್ಥೀಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಹಿಂದೂಗಳ ಮೂಗಿಗೆ ತುಪ್ಪ ಸವರುವ ಕಾರ್ಯ ಜರುಗುತ್ತಿರುವುದು ಖೇದಕರ ಎಂದು ಅಧ್ಯಕ್ಷ ರವೀಂದ್ರ ಖಾರವಾಗಿ ಪ್ರತಿಕ್ರಿಯಿಸಿದರು.