ಬೆಂಗಳೂರು: ತುರ್ತು ಆರೋಗ್ಯ ಪರಿಸ್ಥಿತಿಯ ಸಂದರ್ಭದಲ್ಲಿ ಆಸ್ಪತ್ರೆಗಳು ರೋಗಿಯಿಂದ ಯಾವುದೇ ದಾಖಲೆಗಳನ್ನು ಕೇಳದೆ ಮೊದಲು ಚಿಕಿತ್ಸೆಯನ್ನು ನೀಡಬೇಕು ಎಂದು ರಾಜ್ಯ ಸರ್ಕಾರ ಸೂಚನೆ ಹೊರಡಿಸಿದೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ತಾಯಿ ಮತ್ತು ಅವಳಿ ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಸರ್ಕಾರ ಈ ಸೂಚನೆಯನ್ನು ಹೊರಡಿಸಿದೆ. ಇಲ್ಲಿ ತಾಯಿ ಕಾರ್ಡ್ ಇಲ್ಲ ಎನ್ನುವ ನೆಪೋಟಿ ಗರ್ಭಿಣಿಗೆ ಚಿಕಿತ್ಸೆಯನ್ನು ನಿರಾಕರಿಸಿದ ಪರಿಣಾಮ 3 ಸಾವುಗಳು ಸಂಭವಿಸಿದ್ದವು.
ಇನ್ನು ಮುಂದೆ ಯಾವುದೇ ಆಸ್ಪತ್ರೆಗಳು ತಾಯಿ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ. ಒಂದು ವೇಳೆ ನಿರಾಕರಿಸಿದರೆ ವೈದ್ಯಾಧಿಕಾರಿಗಳನ್ನು, ಸಿಬ್ಬಂದಿ ಮತ್ತು ನೌಕರರನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಲಾಗುವುದು. ಅಲ್ಲದೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ತುರ್ತು ಆರೋಗ್ಯ ಸೇವೆ ನೀಡುವುದು ಆರೋಗ್ಯ ಕೇಂದ್ರಗಳ ಕರ್ತವ್ಯ. ದಾಖಲೆ ಇಲ್ಲದಿದ್ದರೂ ಆರೋಗ್ಯ ಸೇವೆ ನೀಡಲೇಬೇಕು. ಚಿಕಿತ್ಸೆ ನೀಡಲು ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ನೋಡುವ ಅಗತ್ಯವಿಲ್ಲ. ರೋಗಿಯ ಸಂಕಷ್ಟವನ್ನು ನೋಡಿ ಚಿಕಿತ್ಸೆ ನೀಡಬೇಕು. ತುರ್ತು ಸಂದರ್ಭದಲ್ಲಿ ಯಾವುದೇ ದಾಖಲೆಗಳಿಗಾಗಿ ರೋಗಿಯನ್ನು ಪೀಡಿಸಬಾರದು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಲಾಗಿದೆ
ಕೃಪೆ :http://news13.in