ಶಿಮ್ಲಾ: ಸ್ವತಂತ್ರ ಭಾರತದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮಾಸ್ಟರ್ ಶ್ಯಾಮ್ ಸರನ್ ನೇಗಿ ಅವರು ಇಂದು ವಿಧಿವಶರಾಗಿದ್ದಾರೆ. ನವೆಂಬರ್ 2ರಂದು ನಡೆದ ಹಿಮಾಚಲ ಚುನಾವಣೆಯಲ್ಲಿ ಅವರು 34ನೇ ಬಾರಿಗೆ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದರು. ಇದು ಅವರ ಕೊನೆಯ ಮತದಾನವಾಗಿದೆ.
ಇವರು ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕು ಚಲಾಯಿಸಿದ ಮೊದಲ ಮತದಾರ. ಇವರು ಹಿಮಾಚಲ ಪ್ರದೇಶದ ಬುಡಕಟ್ಟು ಕಿನ್ನೌರ್ ಜಿಲ್ಲೆಯ ನಿವಾಸಿ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರು.
ಭಾರತೀಯ ಚುನಾವಣಾ ಆಯೋಗ ತೆಗೆದುಕೊಂಡ ಉಪಕ್ರಮದ ಬಳಿಕ ನೇಗಿ ಅವರನ್ನು ಸ್ವತಂತ್ರ ಭಾರತದ ಮೊದಲ ಮತದಾರ ಎಂದು 2007ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.
14ನೇ ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆ ಕಲ್ಪದಲ್ಲಿರುವ ತಮ್ಮ ಮನೆಯಲ್ಲಿ ಅಂಚೆ ಮೂಲಕ ಮತದಾನದ ಹಕ್ಕು ಚಲಾಯಿಸಿದ್ದರು.
1917ರ ಜುಲೈನಲ್ಲಿ ಜನಿಸಿದ ನೇಗಿ ಅವರು 1951 ರಲ್ಲಿ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದ್ದರು. ಇವರು ಲೋಕಸಭೆಗೆ 16 ಬಾರಿ ಮತ ಚಲಾಯಿಸಿದ್ದಾರೆ. 1951 ರ ನಂತರ ಪ್ರತಿ ಲೋಕಸಭೆ ವಿಧಾನಸಭೆ ಮತ್ತು ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅವರು ಮತ ಚಲಾಯಿಸುತ್ತಲೇ ಬಂದಿದ್ದರು. ಇಂದು ಇವರು ಹಿಮಾಚಲದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕೃಪೆ :http://news13.in