ಮುಂಡಗೋಡ: ಗುರುಗಳು ಹಾದಿ ತಪ್ಪಿದರೆ ಲಕ್ಷ ಜನರ ಭವಿಷ್ಯಕ್ಕೆ ಮಾರಕವಾಗುತ್ತದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ ಹೇಳಿದರು.
ಅವರು ಲೊಯೋಲಾ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ, ಗುರು ಗೌರವಾರ್ಪಣಾ ಸಮಾರಂಭ, ನಿವೃತ್ತ ಶಿಕ್ಷಕರಿಗೆ ಗೌರವಾರ್ಪಣೆ ಮತ್ತು ಪ್ರsತಿಭಾ ಪುರಸ್ಕಾರ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭಾರತದಲ್ಲಿ ಗುರುವಿಗೆ ಹಿಂದಿನ ಕಾಲದಿಂದಲೂ ಶ್ರೇಷ್ಠ ಸ್ಥಾನಮಾನ ನೀಡಲಾಗಿದೆ. ಒಬ್ಬ ಗುರುವಿನಿಂದ ಲಕ್ಷಕ್ಕೂ ಹೆಚ್ಚು ಶಿಷ್ಯರು ತಯಾರಾಗುತ್ತಾರೆ. ಗುರುವಿನ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕವರು ಅದನ್ನು ಉಳಿಸಿಕೊಳ್ಳಕೊಂಡು ಹೋಗಬೇಕು. ಗುರುವಿನ ಸ್ಥಾನ ಬಂದಾಗ ಎಲ್ಲವನ್ನೂ ಮರೆತು ಎಲ್ಲರಿಗೂ ಸಮಾನಾಂತರ ಶಿಕ್ಷಣ ನೀಡಬೇಕು. ನಾವು ಎಷ್ಟೇ ಉನ್ನತ ಸ್ಥಾನಮಾನಕ್ಕೇರಲಿ, ಕಲಿಸಿದ ಗುರುಗಳಿಗೆ, ಇಲ್ಲವೇ ಗುರುಗಳ ಸ್ಥಾನದಲ್ಲಿದ್ದವರಿಗೆ ಗೌರವ ಕೊಡುವುದನ್ನು ಮರೆಯಬಾರದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ ಶಂಕರ ಗೌಡಿ ಮಾತನಾಡಿ, ಶಿಕ್ಷಣದ ಮುಖ್ಯ ಉದ್ದೇಶ ವಿದ್ಯಾರ್ಥಿಯಲ್ಲಿ ಅಡಗಿರುವಂಥ ಪ್ರತಿಭೆಯನ್ನು ಗುರುತಿಸಿ ಅದನ್ನು ಹೊರಗೆ ತರಬೇಕೆಂದು ಸ್ವಾಮಿ ವಿವೇಕಾನಂದರು ಹೇಳುತ್ತಾರೆ. ಆದರೆ ಇಂದಿನ ಶಿಕ್ಷಣ ವಿದ್ಯಾರ್ಥಿಯ ನಿಜವಾದ ಪ್ರತಿಭೆಯನ್ನು ಹೊರಗೆ ತೆಗೆಯುವ ಪ್ರಕ್ರಿಯೆಗಿಂತ ಹೊರಗಿನ ವಿಷಯಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ಹೇರಿ, ಎಲ್ಲೆಲ್ಲಿಗೋ ಕರೆದುಕೊಂಡು ಹೋಗುವಂಥ ಪದ್ದತಿ ಅನುಸರಿಸುತ್ತಿದ್ದೇವೆ. ಆ ಮೂಲಕ ಮಗುವಿನ ಸಹಜ ಪ್ರತಿಭೆಯನ್ನು ತಡೆಯುವಂಥ ಪ್ರಯತ್ನ ಇಂದಿನ ಶಿಕ್ಷಣ ವ್ಯವಸ್ಥೆ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಲ್ಯಾಪ್‌ಟಾಪ್ ನೀಡಲಾಯಿತು. ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಿ.ಎನ್.ನಾಯಕ್ ಸ್ವಾಗತಿಸಿದರು. ಬಿ.ಬಿ.ಬೆಂಡಲಟ್ಟಿ, ಕುದ್ಸಿಯಾ ಬೇಗಂ ಕಾರ್ಯಕ್ರಮ ನಿರೂಪಣೆ ಮಾಡಿದರು. ಕೆ.ಕೆ.ಕರುವಿನಕೊಪ್ಪ ವಂದನಾರ್ಪಣೆ ಮಾಡಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಎಲ್.ಟಿ.ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಎಸ್.ಪಟಗಾರ, ಲೊಯೋಲಾ ಕೇಂದ್ರೀಯ ಶಾಲೆಯ ಪ್ರಾಂಶುಪಾಲರಾದ ಮೆಲ್ವಿನ್ ಲೋಬೋ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಯಾನಂದ ನಾಯಕ್ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಮೂರ್ತಿ, ಪಟ್ಟಣ ಪಂಚಾಯತಿ ಎಫ್‌ಡಿಸಿ ಪ್ರದೀಪ ಹೆಗಡೆ ಇದ್ದರು.