ದಾಂಡೇಲಿ: ನದಿ ತೀರದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಿದ್ದರೂ ಹಾಗೂ ಮೊಸಳೆಯಿಂದಾದ ದುರ್ಘಟನೆಯ ನಡುವೆಯು ನಗರದ ಕುಳಗಿ ಸೇತುವೆಯ ಕೆಳಗಡೆ ನದಿಗಿಳಿದು ಮೀನು ಹಿಡಿಯುತ್ತಿದ್ದ ವ್ಯಕ್ತಿಯನ್ನು ಅರಣ್ಯಾಧಿಕಾರಿಗಳು ಹಿಡಿದು, ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಬರೆಸಿಕೊಂಡಿರುವ ಘಟನೆ ನಡೆದಿದೆ.
ನಗರದ ಕುಳಗಿ ಸೇತುವೆಯ ಕೆಳಗಡೆ ನದಿಗಿಳಿದು ಮೀನು ಹಿಡಿಯುತ್ತಿದ್ದ ಸ್ಥಳೀಯ ನಿವಾಸಿ ಫಕ್ರುದ್ದೀನ್ ಎಂಬಾತನನ್ನು ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿಯವರ ನೇತೃತ್ವದ ತಂಡ ಅವನನ್ನು ಹಿಡಿದು, ಎಚ್ಚರಿಕೆ ನೀಡಿ, ತಪ್ಪೊಪ್ಪಿಗೆ ಪತ್ರ ಬರೆಸಿಕೊಂಡಿದೆ. ಇನ್ನು ಈತ ಮೀನು ಹಿಡಿಯುತ್ತಿದ್ದ ಸನಿಹದಲ್ಲೆ ಮೂರ್ನಾಲ್ಕು ಮೊಸಳೆಗಳು ಇದ್ದರೂ, ದುಸ್ಸಾಹಸಕ್ಕೆ ಕೈ ಹಾಕಿರುವುದು ಸಾಬೀತಾಗಿದೆ.
ಮೊಸಳೆಯಿಂದ ಈಗಾಗಲೆ ದುರ್ಘಟನೆಗಳು ಸಂಭವಿಸುತ್ತಿದ್ದು, ಇವೆಲ್ಲವು ಗೊತ್ತಿದ್ದರೂ ನದಿಗಿಳಿದು ದುಸ್ಸಾಹಸ ಮಾಡುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದ್ದಲ್ಲಿ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಜನಿಕರು ನದಿಗಿಳಿದಿರುವುದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ವಲಯಾರಣ್ಯಾಧಿಕಾರಿ ಅಪ್ಪಾರವ್ ಕಲಶೆಟ್ಟಿಯವರು ತಿಳಿಸಿದ್ದಾರೆ.