ಕುಮಟಾ: ಬಾಳೆಗೊನೆ ಸಾಗಿಸುತ್ತಿದ್ದ ಲಗೇಜ್ ಆಟೋದಲ್ಲಿ ಕಡವೆ ಕೊಂಬುಗಳನ್ನು ಸಾಗಿಸುತ್ತಿರುವಾಗ ತಾಲೂಕಿನ ಕತಗಾಲ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ ಕತಗಾಲ ವಲಯ ಅರಣಾಧಿಕಾರಿಗಳು ಇಬ್ಬರು ಆರೋಪಿಗಳನ್ನು ಬಂಧಿಸಿ, ಕಡವೆ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಿರಸಿಯ ಕಸ್ತೂರ ಬಾ ನಗರದ ನಿವಾಸಿ ಚಾಲಕ ಮಹಮ್ಮದ್ ಅಸ್ಲಾಂ ಬಾಬಜಾನ್ ಕರ್ಕಿಮಕ್ಕಿ ಮತ್ತು ಶಿರಸಿಯ ಅಂಜೂ ಫರ್ನಿಚರ್ ಮಾಲೀಕ ಅಂಥೋನಿ ಬಿ ನೊರೋನಾ ಬಂಧಿತ ಆರೋಪಿಗಳು. ಇವರಿಬ್ಬರು ಅಶೋಕ ಲೇಲ್ಯಾಂಡ್ ಲಗೇಜ್ ಆಟೋ ವಾಹನದಲ್ಲಿ ಕಡವೆ ಕೊಂಬುಗಳ ಜೊತೆಗೆ ಬಾಳೆಗೊನೆಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕತಗಾಲ ವಲಯ ಅರಣಾಧಿಕಾರಿಗಳು ಕತಗಾಲ್ ಚೆಕ್ ಪೋಸ್ಟ್ ಬಳಿ ವಾಹನಗಳ ಪರಿಶೀಲನಾ ಕಾರ್ಯ ತೀವ್ರಗೊಳಿಸಿದ್ದರು.
ಬುಧವಾರ ಬೆಳಗಿನ ಜಾವ ಬಾಳೆಗೊನೆ ತುಂಬಿಕೊಂಡು ಶಿರಸಿಯಿಂದ ಕತಗಾಲ್ ಕಡೆಗೆ ಬರುತ್ತಿದ್ದ ಲಗೇಜ್ ಆಟೋವನ್ನು ಆರ್‌ಎಫ್‌ಒ ಕಚೇರಿ ಎದುರಿಗೆ ತಡೆದು, ಪರಿಶೀಲಿಸಿದಾಗ, ಕಡವೆಯ ನಾಲ್ಕು ಕೊಂಬುಗಳು ದೊರೆತ್ತಿದೆ. ಅಲ್ಲದೇ ಜಂಗ್ಲಿ ಜಾತಿಯ ನಗಗಳು ಕೂಡ ಪತ್ತೆಯಾಗಿವೆ. ತಕ್ಷಣ ಅವನ್ನೆಲ್ಲ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳ ತಂಡ ವಾಹನದಲ್ಲಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳಸಾಗಾಣಿಕೆಗೆ ಬಳಸಲಾದ ವಾಹನದ ಜೊತೆಗೆ 8 ಕ್ವಿಂಟಲ್ ಬಾಳೆಗೊನೆಯನ್ನು ಜಫ್ತು ಮಾಡಲಾಗಿದೆ. ಬಂಧಿತ ಆರೋಪಿಗಳನ್ನು ಕುಮಟಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯು ಹೊನ್ನಾವರ ಡಿಎಫ್‌ಒ ಪ್ರಶಾಂತ ಕುಮಾರ ಮಾರ್ಗದರ್ಶನದಲ್ಲಿ ಕುಮಟಾ ಎಸಿಎಫ್ ಗುರುದತ್ತ ಶೇಟ್ ಸಹಭಾಗಿತ್ವದಲ್ಲಿ ಕತಗಾಲ್ ಆರ್‌ಎಫ್‌ಒ ದೀಪಕ ನಾಯ್ಕ ನೇತೃತ್ವದಲ್ಲಿ ಫಾರೆಸ್ಟರ್ ಬಿ.ಎನ್.ಬಂಕಾಪುರ, ಅರಣ್ಯ ರಕ್ಷಕರಾದ ಮಹೇಶ ಹವಳೆಮ್ಮನವರ್, ಗಣೇಶ ನಾಯಕ, ಸದಾಶಿವ ಪುರಾಣಿಕ, ಚಾಲಕ ವಸಂತ ನಾಯ್ಕ, ಸಿಬ್ಬಂದಿಯಾದ ನಾಗೇಶ ಪಟಗಾರ, ಶಂಕರ ಗೌಡ, ಕಿರಣ ನಾಯ್ಕ ಪಾಲ್ಗೊಂಡಿದ್ದರು.