ಮುಂಡಗೋಡ: ಪಟ್ಟಣದ ಬಸ್‌ನಿಲ್ದಾಣದ ಮೇಲ್ಮಹಡಿಯಲ್ಲಿ ನಾಗರಾಜ ಕಟ್ಟಿಮನಿ ಹಾಗೂ ಎಮ್.ವೆಂಕಟೇಶ ಪ್ರಾರಂಭಿಸಿರುವ ಶ್ರೀಲಕ್ಷ್ಮಿ ವೆಂಕಟೇಶ್ವರ ಅಪ್ಪರ್‌ಲೆಸ್ ಗಾರ್ಮೆಂಟ್ ಫ್ಯಾಕ್ಟರಿಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ನನ್ನ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಉದ್ಯೋಗವಂತರಾಗಬೇಕು. ಅವರು ಆರ್ಥಿಕವಾಗಿ ಸಬಲರಾದರೆ ಕುಟುಂಬ ನಿರ್ವಹಣೆಯ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಹೇಳಿದರು.
ಬೆಂಗಳೂರಲ್ಲಿ ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ರಾತ್ರಿ ಪಾಳಿಯಲ್ಲಿ ಹೆಣ್ಣುಮಕ್ಕಳಿಗೆ ಅವಕಾಶವಿರಲಿಲ್ಲ. ನಾನು ಮಹಿಳಾ ಕಾರ್ಮಿಕರ ಕಷ್ಟಗಳನ್ನು ಅರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಜತೆ ಮಾತನಾಡಿ, ಹೆಣ್ಣು ಮಕ್ಕಳು 3 ಶಿಫ್ಟ್ಗಳಲ್ಲಿ ದುಡಿಯವಂತೆ ಅವಕಾಶವನ್ನು ಹಾಗೂ ರಾತ್ರಿ ಹೊತ್ತಿನಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಕಾನೂನುಬದ್ಧವಾಗಿ ಕಲ್ಪಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಲ್.ಟಿ.ಪಾಟೀಲ್ ಮಾತನಾಡಿ, ಮುಂಡಗೋಡದಲ್ಲಿ ಸ್ಥಳದ ಅಭಾವ ಇದೆ. ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿರುವುದರಿಂದ ಕೈಗಾರಿಕೀಕರಣ ಮಾಡಲು ಸಮಸ್ಯೆ ಉಂಟಾಗುತ್ತಿದೆ ಎಂದರು.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ, ಗಾರ್ಮೆಂಟ್‌ಗಳಲ್ಲಿ ದುಡಿಯುವ ಕಾರ್ಮಿಕರು ಮುತುವರ್ಜಿ ವಹಿಸಿ ಕೆಲಸ ಮಾಡಿದರೆ ಮಾಲಿಕರ ಸ್ಥಿತಿ ಉತ್ತಮವಾಗಲು ಸಾಧ್ಯ ಎಂದರು.
ಪ್ರಾಸ್ತಾವಿಕವಾಗಿ ನಾಗರಾಜ ಕಟ್ಟಿಮನಿ ಮಾತನಾಡಿ, ಗ್ರಾಮಾಂತರದಿಂದ ಗಾರ್ಮೆಂಟ್ ಕೆಲಸಕ್ಕೆ ಬರುವ ಹೆಣ್ಣುಮಕ್ಕಳು ತಮ್ಮ ಕೂಲಿ ಹಣವನ್ನು ಬಸ್ ಚಾರ್ಜ್’ಗೇ ಕೊಡಬೇಕಾಗುತ್ತದೆ. ಇದರಿಂದ ಹಣ ಉಳಿತಾಯವಾಗುವುದೇ ಇಲ್ಲ. ಆದ್ದರಿಂದ ಬೆಂಗಳೂರಲ್ಲಿ ಹೆಣ್ಣು ಮಕ್ಕಳಿಗೆ, ಗಾರ್ಮೆಂಟ್ ಕೆಲಸಗಾರರಿಗೆ ಉಚಿತವಾಗಿ ಬಸ್ ಸೇವೆ ನೀಡುವಂತೆಯೇ ಇಲ್ಲಿಯ ಗಾರ್ಮೆಂಟ್ ಕೆಲಗಾರರಿಗೆ ನೀಡಬೇಕೆಂದು ಸಚಿವರಿಗೆ ವಿನಂತಿಸಿಕೊಂಡರು.
ವೇದಿಕೆ ಮೇಲೆ ತಹಶೀಲ್ದಾರ ಶಂಕರ ಗೌಡಿ, ಶಿರಸಿ ವಿಭಾಗದ ಸಾರಿಗೆ ನಿಯಂತ್ರಣಾಧಿಕಾರಿ ಶ್ರೀನಿವಾಸ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಜಯಸುಧಾ ಭೋವಿವಡ್ಡರ, ಮಂಡಲ ಅಧ್ಯಕ್ಷ ನಾಗಭೂಷಣ ಹಾವಣಗಿ, ಸಾನು, ಗ್ರಾ.ಪಂ ಚಿದಾನಂದ ಹರಿಜನ, ಗಾರ್ಮೆಂಟ್ಸ್ ಉದ್ಯಮ ಪಾಲುದಾರ ಎಂ.ವೆಂಕಟೇಶ ಸೇರಿದಂತೆ ಮುಂತಾದವರು ಇದ್ದರು.