ಶಿರಸಿ: ಶ್ರಾವಣ ಮಾಸದ ಅಂಗವಾಗಿ ಶಿರಸಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಮುಖ್ಯಕಾರ್ಯನಿರ್ವಾಹಕರು, ಹಾಲು ಉತ್ಪಾದಕ ರೈತ ಮಹಿಳೆಯರು ಹಾಗೂ ತಾಲೂಕಿನ ಇತರೇ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧ್ಯಕ್ಷರು, ಮಹಿಳಾ ಆಡಳಿತ ಮಂಡಳಿಯ ಸದಸ್ಯರು ಮಹಿಳಾ ಮುಖ್ಯಕಾರ್ಯನಿರ್ವಾಹಕರುಗಳಿಗೆ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಅಗಸ್ಟ್.18 ರ ಗುರುವಾರದಂದು ಶಿರಸಿಯ ಟಿ.ಎಂ.ಎಸ್. ಸಭಾಭವನದಲ್ಲಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾರದಾಂಬೆಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದಂತಹ ಶ್ರೀಮತಿ ವೇದಾವತಿ ಹೆಗಡೆ ನೀರ್ನಳ್ಳಿ ಅರಿಶಿಣ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸುರೇಶ್ಚಂದ್ರ ಹೆಗಡೆಯವರು ವಿಶೇಷವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಲ್ಲಿಯವರೆಗೆ ಯಾರೂ ಸಹ ಇತಂಹ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರಲಿಲ್ಲ. ನಮ್ಮೆಲ್ಲರನ್ನು ತಮ್ಮ ಸಹೋದರಿಯರಂತೆ ಪರಿಗಣಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಮಗೆಲ್ಲಾ ಅತ್ಯಂತ ಖುಷಿಯನ್ನು ನೀಡಿದೆ. ಅರಿಶಿಣ ಕುಂಕುಮ ಎಂಬುದು ನಮ್ಮ ಮಾಂಗ್ಯಲದ ಒಂದು ಪವಿತ್ರ ಸಂಕೇತವಾಗಿದ್ದು, ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ. ಹೆಣ್ಣು ಮನೆಯ ಮಗಳಾಗಿ, ಸಹೋದರಿಯಾಗಿ, ಗಂಡನ ಮುದ್ದಿನ ಮಡದಿಯಾಗಿ, ಮನೆಯ ಸೊಸೆಯಾಗಿ, ತಾಯಿಯಾಗಿ ತನ್ನ ಈಡೀ ಜೀವನವನ್ನು ಮುಡಿಪಾಗಿಟ್ಟಿರುತ್ತಾಳೆ. ಹಾಗೆಯೇ ತಾವೆಲ್ಲರೂ ಇವತ್ತು ತಮ್ಮ ತಮ್ಮ ಮನೆಯ ಕೆಲಸಗಳನ್ನು ಮುಗಿಸಿ ಈ ಶುಭ ಕಾರ್ಯಕ್ರಮಕ್ಕೆ ಆಗಮಿಸಿರುವುದು ನನಗೆ ಅತ್ಯಂತ ಖುಷಿಯನ್ನು ನೀಡಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿನ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಶ್ರೀಮತಿ ಭಾಗ್ಯ ಹೆಗಡೆ ಕಗ್ಗುಂಡಿ ಅವರು ಜಗತ್ತೆಲ್ಲಾ ಅಂಧಕಾರದಲ್ಲಿದ್ದಾಗ, ಜ್ಞಾನದ ಹಸಿವಿನಿಂದ ಕಂಗೆಟ್ಟಾಗ ಈಡೀ ಜಗತ್ತಿಗೆ ವಿಶ್ವಗುರುವಾಗಿ ಬೆಳಕಾಗಿದ್ದು ನಮ್ಮ ಭಾರತ ಮಾತೆ. ಅಲ್ಲಿಯೂ ಸಹ ಮಾತೆಯೇ ಮೆರೆದಿದ್ದು, ಮಾತೆಯೇ ಪೂಜಿಸಲ್ಪಟ್ಟಿದ್ದು, ಭಾರತ ಮಾತೆಗೆ ಅತ್ಯಂತ ವಿಶೇಷವಾದ ಶಕ್ತಿಯಿದೆ. ನಾವೂ ಸಹ ಭಾರತ ಹಾಗೂ ಮಾತೆಯಲ್ಲಿ ಅನೇಕ ಸಾಮ್ಯತೆಗಳಿದ್ದು, ಭಾರತ ಹಾಗೂ ಮಾತೆಯನ್ನು ನಾವು ಅತ್ಯಂತ ಪೂಜನೀಯವಾಗಿ ಕಾಣುತ್ತೇವೆ.
ನಮ್ಮ ನದಿಗಳಿಗೆ ತಾಯಿ ಎಂದು ಪೂಜಿಸುತ್ತೇವೆ, ನೆಲವನ್ನು ಪೃಥ್ವಿ ಎಂದು ಆರಾಧಿಸುತ್ತಿದ್ದೇವೆ, ಪ್ರತೀ ಮರಗಳಲ್ಲೂ ದೇವಿಯನ್ನು ಕಾಣುವ ಮಹಾ ಸಂಸ್ಕೃತಿಯವರು ನಾವು ಎಂದರು. ಎಲ್ಲಿ ಮಹಿಳಯರಿಗೆ ಗೌರವ ಮನ್ನಣೆ ಸಿಗಲ್ಪಡುತ್ತದೆಯೋ ಅಲ್ಲಿ ದೇವತೆಗಳು ವಿಹರಿಸುತ್ತಿರುತ್ತಾರೆ ಎಂಬ ಮಾತನ್ನು ನಂಬಿರುವ ಅತ್ಯಂತ ಶ್ರೀಮಂತ ಸಂಸ್ಕೃತಿ ನಮ್ಮದಾಗಿದೆ, ರಾಮ ಕೃಷ್ಣರು ಜನಿಸಿದ ಪುಣ್ಯ ಭೂಮಿ ನಮ್ಮದು ಇಂತಹ ಭೂಮಿಯಲ್ಲಿ ಜನಿಸಿದ ನಾವು ಭಾಗ್ಯವಂತರು, ಯಾರು ತಾಯಿಯ ಗರ್ಭದಿಂದ ಜನಿಸಿರುತ್ತಾರೆಯೋ ಅವರು ಪುಣ್ಯವನ್ನು ಮಾಡಿರುತ್ತಾರೆ ಎಂಬ ಮಾತಿದೆ ನಾವೆಲ್ಲರೂ ನಮ್ಮ ವಾತ್ಸಲ್ಯಮಯಿ ತಾಯಿಗೆ ಅದೆಷ್ಟು ಕೋಟಿ ಕೋಟಿ ನಮನ ಸಲ್ಲಿಸಿದರೂ ಅದು ಕಡಿಮೆಯೇ ಸರಿ. ಈಡೀ ಜಗತ್ತನ್ನೇ ನನ್ನ ಕುಟುಂಬ ಎಂದು ಸಾರುವ ನಮ್ಮ ಭಾರತೀಯ ಸಂಸ್ಕೃತಿ ಮಾತ್ರ. ಪುರಾತನ ಕಾಲದಿಂದಲೂ ಮಹಿಳೆಯರನ್ನು ಅತ್ಯಂತ ಪೂಜನೀಯವಾಗಿ ಕಾಣಲ್ಪಡುತ್ತಿದೆ ಅಂದು ಇಂದು ಮುಂದೆದೂ ಭಾರತೀಯ ಸಂಸ್ಕೃತಿ ಮಹಿಳೆಯರನ್ನು ಸದಾ ಪೂಜಿಸುತ್ತದೆ ಮಾತೆಯರನ್ನು ಸದಾ ಆರಾಧಿಸುತ್ತದೆ. ಗೃಹಿಣಿ ಇಲ್ಲದ ಮನೆ ಕಿಟಕಿ ಇಲ್ಲದ ಮನೆಯಂತೆ ಎಂಬ ಮಾತಿದ್ದು, ಗೃಹಿಣಿಯು ಮನೆಗೆ ಅತ್ಯಾವಶ್ಯಕವಾಗಿ ಬೇಕೆ ಬೇಕು, ಮಹಿಳೆ ಕೇವಲ ಮೆನೆಯ ಕೆಲಸಕ್ಕೆ ಮಾತ್ರ ಸೀಮಿತವಲ್ಲ, ಮನೆಯ ಮನಸ್ಸುಗಳನ್ನು ಜೋಡಿಸುವುದು ಗೃಹಿಣಿಯರಾಗಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಅರಿಶಿಣ ಕುಂಕುಮ ಎಂಬುದು ನಮ್ಮ ಭಾವನೆ, ನಮ್ಮ ಭಾಂದವ್ಯ, ನಮ್ಮ ಬೆಸುಗೆ ಇವೆಲ್ಲದರ ಸಂಕೇತ ಮುತ್ತೈದೆಯ ಪರಮ ಭಾಗ್ಯ ಈ ಅರಿಶಿಣ ಕುಂಕುಮ. ಇದು ಕೇವಲ ನಮ್ಮ ಭಾಂದವ್ಯಕ್ಕೆ ಮಾತ್ರ ಸಿಮೀತವಾಗಿರದೇ ವೈಜ್ಞಾನಿಕವಾಗಿಯೂ ಸಹ ಇದು ನಿಜವೆಂದು ಸಾಬೀತಾಗಿದೆ. ಅರಿಶಿಣಕ್ಕೆ ಔಷಧೀಯ ಗುಣಗಳಿದ್ದು ರೋಗನಿರೋಧಕ ಶಕ್ತಿಯನ್ನು ಹೊಂದಿದೆ, ಅರಿಶಿಣವನ್ನು ನಮ್ಮ ತ್ವಚೆಗೆ ಹಚ್ಚಿಕೊಳ್ಳುವುದರಿಂದ ತ್ವಚೆಗೆ ಯಾವುದೇ ರೋಗಗಳು ಬರುವುದಿಲ್ಲವೆಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಕುಂಕುಮವು ಪರಿಶುದ್ಧತೆ ಹಾಗೂ ಸಕಾರಾತ್ಮಕತೆಯ ಪ್ರತೀಕವಾಗಿದ್ದು, ನಮ್ಮಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಸದಾ ಜಾಗೃತವಾಗಿರುವಂತೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಗೂ ನಮ್ಮ ಎರಡೂ ಹುಬ್ಬಿನ ಮಧ್ಯೆ ಕುಂಕುಮವನ್ನು ಹಚ್ಚುವುದರಿಂದ ನಮ್ಮಲ್ಲಿ ಜ್ಞಾನನಾಡಿ ಸದಾ ಕಾರ್ಯಪ್ರವೃತ್ತವಾಗುತ್ತದೆ ಎಂದು ವೈದ್ಯಕೀಯ ಲೋಕ ಒಪ್ಪಿಕೊಂಡಿದೆ. ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮೆಲ್ಲರನ್ನು ನೋಡಿದರೆ ನಮಗೆ ಹೆಣ್ಣು ಅಬಲೆಯಲ್ಲ ಸಬಲೆ ಎಂಬುದು ಅರ್ಥವಾಗುತ್ತದೆ.
ಇಂದಿನ ಜೀವನಶೈಲಿಯಲ್ಲಿ ನಾವು ಪರದೇಶಿಗರಾಗಿ ಜೀವಿಸುತ್ತಾ ಇದ್ದೇವೆ ನಮ್ಮ ಸಂಸ್ಕೃತಿಯನ್ನು ಕ್ರಮೇಣ ನಾವು ಮರೆಯುತ್ತಿದ್ದೇವೆ, ಪೂರ್ವಜರು ಹೇಳಿಕೊಟ್ಟ ಸಂಸ್ಕೃತಿಯ ಪಾಠವನ್ನು ಮರೆತು ಆಧುನೀಕತೆಯ ಗುಂಗಿನಲ್ಲಿ ನಮ್ಮ ಅಸ್ತಿತ್ವನ್ನು ಕಳೆದುಕೊಳ್ಳುತ್ತಿದ್ದೇವೆ. ಆದರೆ ನಮ್ಮಲ್ಲಿ ಒಂದೇ ಒಂದು ಬದಲಾವಣೆ ಒಂದೇ ಒಂದು ತಿದ್ದುಪಡಿ ನಮ್ಮಲ್ಲೆರಲ್ಲೂ ಆಗಬೇಕು ಅದೇನೆಂದರೆ ನಮ್ಮ ಭಾರತವನ್ನು ಜಗದ್ಗುರುವನ್ನಾಗಿ ಮಾಡುವತ್ತ ನಮ್ಮ ಹಾದಿ ಸಾಗಬೇಕೆಂದರೆ ಮನೆ ಮನೆಯಲ್ಲೂ ಪ್ರತಿಯೊಬ್ಬ ಮಾತೆ ಎಂಬ ಮಹಿಳೆಯರು ಎಚ್ಚೆತ್ತುಕೊಳ್ಳಬೇಕು. ಈ ದೇಶವೆಂಬ ಮಾತೆಯನ್ನು ನಾವು ಪೂಜಿಸುತ್ತಿದ್ದೇವೆ ಎಂದಾದಾಗ ನಮ್ಮ ಕರ್ತವ್ಯವನ್ನು ಪಾಲಿಸಬೇಕು ಹಾಗಿದ್ದಾಗ ಮಾತ್ರ ನಮ್ಮ ಈ ಪವಿತ್ರ ದೇಶ ಜಗದ್ಗುರುವಾಗಿ ಕಂಗೊಳಿಸುತ್ತದೆ, ಭಾರತೀಯ ಸಂಸ್ಕೃತಿ ಭಾರತೀಯ ಮಹಿಳೆಯರು ಮತ್ತೊಮ್ಮೆ ಶೇಷ್ಠ ಎಂಬುದು ಇಡೀ ಜಗತ್ತಿಗೆ ಸಾರಿದಂತಾಗುತ್ತದೆ ಎಂದರು. ಮಾತೆ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದು, ಇದು ಮಾತೆಯರಾದವರಿಗೂ, ಮಾತೆಯರಾಗುವವರಿಗೂ ಇದರ ರಅರ್ಥ ಗೊತ್ತಿರುತ್ತದೆ, ಆ ಪದದ ಮಹತ್ವ ನಮ್ಮಲ್ಲೆರ ಜೀವನದಲ್ಲಿ ಪ್ರತೀ ಕಣಕಣದಲ್ಲಿಯೂ ಸೇರುವಂತಾಗಬೇಕು ಎಂದು ಕರೆ ನೀಡಿದರು.
ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಆಯೋಜಿಸಿದ್ದಂತಹ ಸುರೇಶ್ಚಂದ್ರ ಕೃಷ್ಣ ಹೆಗಡೆ ಅವರು ಮಾತನಾಡಿ ಅತೀ ಚಿಕ್ಕ ವಯಸ್ಸಿನಲ್ಲಿಯೇ ನನ್ನ ತಂದೆಯನ್ನು ಕಳೆದುಕೊಂಡು ನನ್ನ ತಾಯಿ ಹಾಗೂ ಸಹೋದರಿಯರ ಪ್ರೀತಿ ಹಾಗೂ ಮಮತೆಯಲ್ಲಿಯೇ ಬೆಳೆದು ಬಂದ ನಾನು ಮಾತೆಯರ ಬಗೆಗಿನ ನನ್ನ ಭಾವನೆ ಎಂದೆಂದೂ ಶಾಶ್ವತವಾಗಿದೆ. ಅಧಿಕಾರಕ್ಕೂ ಮೀರಿ ನಮ್ಮ ಈ ಬಾಂಧವ್ಯದ ಸಂಕೇತವಾಗಿ ಅರಿಶಿಣ ಕುಂಕುಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ನನ್ನಿಂದ ತಮಗೆ ಗೌರವವನ್ನು ಒದಗಿಸಲು ಇದೊಂದು ಸದಾವಕಾಶವಾಗಿದೆ. ಸದಾ ಹಾಲು ಸಂಘಗಳ ವ್ಯವಹಾರ, ಇತರೇ ಚರ್ಚೆಗಳಿಗಷ್ಟೇ ತಮ್ಮನ್ನು ನೆನಪಿಸಿಕೊಳ್ಳಲಾಗುತ್ತಿದ್ದು, ತಮ್ಮ ನಿಸ್ವಾರ್ಥ ಸೇವೆಗೆ ಅರ್ಥಪೂರ್ಣವಾಗಿ ಗೌರವ ಸೂಚಿಸಲು ಶ್ರಾವಣ ಮಾಸದ ಈ ಶುಭದಿನದಂದು ಅರಿಶಿಣ ಕುಂಕುಮ ಕಾರ್ಯಕ್ರಮದ ಮೂಲಕ ತಮಗೆಲ್ಲ ನನ್ನ ವಿನಮ್ರ ನಮನ ಸಲ್ಲಿಸುತ್ತಿದ್ದೇನೆ ಎಂದರು.
ಜಿಲ್ಲೆಯ ಹೈನೋದ್ಯಮದ ಅಭಿವೃದ್ಧಿಗೆ ತಮ್ಮ ಅತ್ಯಮೂಲ್ಯ ಸೇವೆಯ ಮೂಲಕ ಜಿಲ್ಲೆಯ ಹಾಲು ಉತ್ಪಾದಕರ ರೈತರ ಹಿತ ಕಾಪಾಡುವಲ್ಲಿ ಸದಾ ಶ್ರಮವಹಿಸುತ್ತಿರುವ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ನೌಕರರ ಕಲ್ಯಾಣ ಸಂಘದ ಅಧ್ಯಕ್ಷರಾದಂತಹ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರಿಗೆ ಹಾಲು ಉತ್ಪಾದಕರ ಮಹಿಳಾ ಸಂಘದ ಅಧ್ಯಕ್ಷರುಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಾಲು ಉತ್ಪಾದಕ ರೈತರು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಜಿಲ್ಲಾ ಮುಖ್ಯಸ್ಥರಾದ ಎಸ್.ಎಸ್.ಬಿಜೂರ್, ಸಹಾಯಕ ವ್ಯವಸ್ಥಾಪಕರಾದ ಡಾ.ವಿವೇಕ.ಎಸ್.ಆರ್, ವಿಸ್ತರಣಾಧಿಕಾರಿಯಾದ ಮೌನೇಶ ಎಂ ಸೋನಾರ, ಶಿರಸಿ ಉಪವಿಭಾಗದ ಗುರುದರ್ಶನ್ ಭಟ್, ಅಭಿಷೇಕ ನಾಯ್ಕ, ಜಯಂತ ಪಟಗಾರ, ಉಪಸ್ಥಿತರಿದ್ದರು. ಶ್ರೀಮತಿ ಅನಸೂಯಾ ಹೆಗಡೆ ಸ್ವಾಗತಿಸಿದರು, ಶ್ರೀಮತಿ ಕವಿತಾ ಭಟ್ ನಿರೂಪಣೆ ಮಾಡಿದರು, ಶ್ರೀಮತಿ ವಿನೋದಾ ದೇವಾಡಿಗ ವಂದಿಸಿದರು.