ಯಲ್ಲಾಪುರ: ವಿಶ್ವದ ಪ್ರತಿಷ್ಠಿತ ಗಣಿತಸ್ಪರ್ಧೆ ಅಂತರರಾಷ್ಟ್ರೀಯ ಮ್ಯಾಥಮೆಟಿಕಲ್ ಒಲಿಂಪಿಯಾಡ್‌ನಲ್ಲಿ (ಐಎಂಒ) ಈ ಬಾರಿ ಚಿನ್ನದ ಪದಕವನ್ನು ಹಾಲಿ ಬೆಂಗಳೂರು, ಮೂಲತಃ ಯಲ್ಲಾಪುರ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ ವಿದ್ಯಾರ್ಥಿ ಮೋಹಿತ್ ಹುಳ್ಳೆ ತಮ್ಮದಾಗಿಸಿಕೊಂಡಿದ್ದಾರೆ.
ಜುಲೈ 6ರಿಂದ 16ವರೆಗೂ ನಾರ್ವೆಯ ಓಸ್ಕೋದಲ್ಲಿ ನಡೆದ 63ನೇ ಅಂತರರಾಷ್ಟ್ರೀಯ ಗಣಿತ ಒಲಿಂಪಿಯಾಡ್‌ನಲ್ಲಿ ಮೋಹಿತ್ ಅವರು 100ಕ್ಕೂ ಅಧಿಕ ದೇಶಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಳೆದ ವರ್ಷ ರಷ್ಯಾದಲ್ಲಿ ನಡೆದಿದ್ದ ಒಲಿಂಪಿಯಾಡ್‌ನಲ್ಲಿಯೂ ಮೋಹಿತ್ ಬೆಳ್ಳಿಪದಕ ಪಡೆದಿದ್ದರು. ಈ ಬಾರಿ ಮತ್ತಷ್ಟು ಶ್ರಮ ವಹಿಸಿ ಅಧ್ಯಯನ ನಡೆಸುವ ಮೂಲಕ ಚಿನ್ನದ ಸಾಧನೆಗೈದಿದ್ದಾರೆ. 18 ವರ್ಷದ ಮೋಹಿತ್ ನಗರದ ಫೋರ್ಟಿಸ್ ಆಸ್ಪತ್ರೆ ವೈದ್ಯ ಡಾ.ನಾರಾಯಣ ಹುಳ್ಸೆ ಮತ್ತು ಅಪೋಲೊ ಆಸ್ಪತ್ರೆ ವೈದ್ಯೆ ಡಾ.ಅಂಜನಾ ಹುಳ್ಸೆ ದಂಪತಿಗಳ ಪುತ್ರ. ಕನಕಪುರ ರಸ್ತೆಯ ಮಲ್ಲಸಂದ್ರ ಕುಮಾರನ್ಸ್ ಚಿಲ್ಟನ್ ಹೋಂನಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ್ದಾರೆ. ಇಂಗ್ಲೆAಡ್‌ನಲ್ಲಿ ಜನಿಸಿದ್ದರಿಂದ ಅಲ್ಲಿನ ಪೌರತ್ವ ಹೊಂದಿದ್ದಾರೆ. ಹೀಗಾಗಿ ಇಂಗ್ಲೆಂಡ್ ಪ್ರತಿನಿಧಿಸಿದ್ದರು.
2019ರಲ್ಲಿ ಏಷ್ಯಾ ಪೆಸಿಫಿಕ್ ಇನ್ಸರ್‌ಮ್ಯಾಟಿಕ್ ಒಲಿಂಪಿಯಾಡ್‌ನಲ್ಲಿ ಇಂಡಿಯಾ ಪ್ರತಿನಿಧಿಸಿ ಕಂಚಿನ ಪದಕ ಪಡೆದಿದ್ದರು. ಖಗೋಳ ಶಾಸ್ತ್ರದ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿದ್ದರು. ಎಚ್.ಪಿ ಕೋಡ್ ವಾರ್ ಇಂಡಿಯಾ ಅಡಿಶನ್‌ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದರು. ಎನ್‌ಎಂಟಿಸಿ ನ್ಯಾಷನಲ್ ಮ್ಯಾಥಮಿಟಿಕ್ ಟ್ಯಾಲೆಂಟ್ ಕಂಟೆಸ್ಟ್ನಲ್ಲಿ ಎರಡು ಭಾರಿ ಮೊದಲ ಸ್ಥಾನ ಪಡೆದಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ಕಿಶೋರ್ ವೈಜ್ಞಾನಿಕ್ ಪ್ರೋತ್ಸಾಹನ್ ಯೋಜನೆ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದರು.