ಕಾರವಾರ: ಮೆಡಿಸಿನ್ ಸಾಗಾಟದ ನೆಪದಲ್ಲಿ ಲಾರಿಯಲ್ಲಿ ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಬೃಹತ್ ಮೊತ್ತದ ಗೋವಾ ಮದ್ಯವನ್ನ ಓರ್ವ ಆರೋಪಿಯ ಸಮೇತ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರು ರಚಿಸಿರುವ ಜಿಲ್ಲಾ ಪೊಲೀಸ್ ವಿಶೇಷ ತಂಡ ಈ ಪ್ರಕರಣವನ್ನ ಬೇಧಿಸಿದೆ. ಈ ಹಿಂದೆ ಕೋಟಾ ನೋಟು, ಓಸಿ- ಮಟ್ಕಾ ¸ಪ್ರಕರಣ ಸೇರಿದಂತೆ ಹಲವು ಪ್ರಕರಣಗಳನ್ನ ಭೇದಿಸುವಲ್ಲಿ ಈ ತಂಡ ಯಶಸ್ವಿಯಾಗಿತ್ತು. ಅದರಂತೆ ಸೋಮವಾರ ಬೆಳಿಗ್ಗೆ ಕಂಟೇನರ್ ಲಾರಿಯಲ್ಲಿ ಗೋವಾದಿಂದ ಮೆಡಿಸಿನ್ ಸಾಗಾಟ ಮಾಡುವ ರೀತಿಯಲ್ಲಿ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಮದ್ಯ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಈ ವಿಶೇಷ ತಂಡದ ಗಮನಕ್ಕೆ ಬಂದಿತ್ತು.
ತಕ್ಷಣ ಕಾರ್ಯಪ್ರವೃತ್ತರಾದ ಎಸ್‌ಪಿ ಸ್ಕ್ವಾಡ್ ಪಿಎಸ್‌ಐ ಪ್ರೇಮನಗೌಡ ನೇತೃತ್ವದ ತಂಡ ತಾಲೂಕಿನ ಅರಗಾ ಬಳಿ ಲಾರಿ ಬರುವುದನ್ನ ಕಾಯುತ್ತಿದ್ದರು. ಅರಗಾ ಬಳಿ ಬಂದ ಕಂಟೇನರ್ ತಡೆದಾಗ ಚಾಲಕ ನಿಲ್ಲಿಸಲು ಹಿಂದೇಟು ಹಾಕಿದ್ದು, ನಂತರ ಮತ್ತೆ ವೇಗವಾಗಿ ವಾಹನ ಚಲಾಯಿಸಿಕೊಂಡು ಅಂಕೋಲಾ ಕಡೆಗೆ ತೆರಳಿದ್ದಾನೆ. ವಾಹನ ಬೆನ್ನತ್ತಿದ ಪೊಲೀಸರು, ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದ ಟೋಲ್ ಗೇಟ್ ಬಳಿ ಕಂಟೇನರ್ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಾಲಕ ಮಹಾರಾಷ್ಟ್ರದ ಪಿಂಪ್ಲೇವಾಡಿ ಮೂಲದ ಸುಧಾಕರ ಗೋಲಾಂಡೆ ಎಂಬಾತನನ್ನ ಪೊಲೀಸರು ವಿಚಾರಣೆ ನಡೆಸಿದಾಗ, ಲಾರಿಯಲ್ಲಿ ಮೆಡಿಸಿನ್ ಇದೆ ಎಂದು ಸುಳ್ಳು ಮಾಹಿತಿ ನೀಡಿದ್ದ. ಆದರೆ ಕಂಟೇನರ್ ಹಿಂಭಾಗ ಪರಿಶೀಲನೆ ಮಾಡಿದಾಗ ಮದ್ಯದ ಬಾಕ್ಸ್ ಪತ್ತೆಯಾಗಿವೆ. ತಕ್ಷಣ ಆರೋಪಿ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ಲಾರಿ ಮಾಲಿಕನ ಮೇಲೆ ಸಹ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದ್ಯವನ್ನ ಗೋವಾದಿಂದ ಕಾರವಾರ, ಅಂಕೋಲಾ ಮಾರ್ಗವಾಗಿ ಹೈದ್ರಾಬಾದ್‌ಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು, ಮೆಡಿಸಿನ್ ವಾಹನ ಎಂದರೆ ಯಾರೂ ಕೂಡ ತಡೆದು ಪರಿಶೀಲನೆ ಮಾಡುವುದಿಲ್ಲ ಎಂದು ಮೆಡಿಸಿನ್ ನೆಪದಲ್ಲಿ ಮದ್ಯ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಹಿಂದಿನಿಂದಲೂ ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯವನ್ನ ಆರೋಪಿಗಳು ಸಾಗಾಟ ಮಾಡುವ ಕಾರ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ತನಿಖೆ ಮುಂದುವರಿಸಿದ್ದಾರೆ.
26 ಲಕ್ಷದ ಮದ್ಯ ವಶಕ್ಕೆ: ಕಂಟೇನರ್ ಲಾರಿಯಲ್ಲಿ ಆರೋಪಿಗಳು ಇಂಪಿರೀಯಲ್ ಬ್ಲ್ಯೂ ಹಾಗೂ ರಾಯಲ್ ಸ್ಟಾಗ್ ಬ್ರಾಂಡ್‌ನ 180 ಹಾಗೂ 750 ಎಂಎಲ್‌ನ ಸುಮಾರು 30,212 ಬಾಟಲ್‌ಗಳನ್ನ 814 ಬಾಕ್ಸ್ನಲ್ಲಿ ಸಾಗಿಸುತ್ತಿದ್ದರು. ಒಟ್ಟು 26,29,536 ಮೌಲ್ಯದ ಮದ್ಯವನ್ನ ಪೊಲೀಸರು ಜಪ್ತಿಪಡಿಸಿಕೊಂಡಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯ ಕಂಟೇನರ್ ಲಾರಿಯನ್ನು ಕೂಡ ಪ್ರಕರಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಅನುಮಾನ ಮೂಡಿಸಿದ್ದ ಅಪಘಾತ!! ಕೆಲ ತಿಂಗಳ ಹಿಂದೆ ಅಂಕೋಲಾ ತಾಲೂಕಿನ ಅಗಸೂರು ಬಳಿ ಲಾರಿಯೊಂದು ಪಲ್ಟಿಯಾಗಿತ್ತು. ಆದರೆ ಇದು ಮೆಡಿಸಿನ್ ಸಾಗಿಸುವ ಲಾರಿಯಾಗಿದ್ದು, ಅದರಲ್ಲಿ ಗೋವಾ ಮದ್ಯ ಕೂಡ ಇರುವ ಪ್ರಕರಣ ಬೆಳಕಿಗೆ ಬಂದಿತ್ತು. ಮೆಡಿಸಿನ್ ಹೆಸರಿನಲ್ಲಿ ಕಂಟೇನರ್ ಮೂಲಕ ಬೃಹತ್ ಪ್ರಮಾಣದ ಮದ್ಯವನ್ನ ಸಾಗಾಟ ಮಾಡುತ್ತಿರುವ ಆ ಸಂದರ್ಭದಲ್ಲೇ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಅಂದಿನಿಂದ ಪೊಲೀಸರು ಕಂಟೇನರ್‌ಗಳ ಮೇಲೆ ನಿಗಾ ಇಟ್ಟಿದ್ದರು. ಅದರಂತೆ ಮೆಡಿಸಿನ್ ಸಾಗಾಟದ ನೆಪದಲ್ಲಿ ಮದ್ಯ ಸಾಗಿಸುತ್ತಿರುವುದು ಸೋಮವಾರದ ಪ್ರಕರಣದಿಂದ ದೃಢವಾಗಿದೆ.