ದಾಂಡೇಲಿ : ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅವಘಡಗಳಾದಾಗ ತುರ್ತು ರಕ್ಷಣಾ ಕಾರ್ಯಕ್ಕೆ ನಗರಸಭೆ ಸದಾ ಸಿದ್ಧವಿದೆ ಎಂದು ನಗರಸಭೆಯ ಪೌರಾಯುಕ್ತರಾದ ವಿವೇಕ ಬನ್ನೆ ಹೇಳಿದರು.
ಅವರು ಶುಕ್ರವಾರ ನಗರಸಭೆಯಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತುರ್ತು ರಕ್ಷಣೆಗೆ ಬೇಕಾದ ಅಗತ್ಯ ರಕ್ಷಣೆಗಾಗಿ ಪ್ರಾರಂಭಿಸಲಾದ ವಿಪತ್ತು ನಿರ್ವಹಣಾ ಘಟಕದ ಸೇವೆಗೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಮಳೆಗಾಲದ ಸಂದರ್ಭದಲ್ಲಿ ಅಗತ್ಯ ಮುಂಜಾಗೃತಾ ಕ್ರಮಗಳನ್ನು ವಹಿಸುವ ನಿಟ್ಟಿನಲ್ಲಿ ರಾಪ್ಟ್, ಆತಂಕಕಾರಿ ಮರಗಳ ಟೊಂಗೆಗಳ ತೆರವಿಗೆ ಸಂಬಂಧಿಸಿದಂತೆ ಬೇಕಾದ ಕಟಾವು ಯಂತ್ರ ಹಾಗೂ ಇನ್ನಿತರ ಅಗತ್ಯ ಪರಿಕರಗಳನ್ನು ಒಳಗೊಂಡಿರುವ ವಿಪತ್ತು ನಿರ್ವಹಣಾ ಘಟಕವನ್ನು ಪ್ರಾರಂಭಿಸಲಾಗಿದೆ ಎಂದರು. ಪ್ರಕೃತಿ ವಿಕೋಪ ಸೇರಿದಂತೆ ಇನ್ನಿತರ ಅವಘಡಗಳಾದಂತಹ ಸಂದರ್ಭದಲ್ಲಿ ತಕ್ಷಣವೇ ನಗರಸಭೆಗೆ ಮಾಹಿತಿಯನ್ನು ನೀಡಿ ವಿಪತ್ತು ನಿರ್ವಹಣಾ ಘಟಕದ ಸೇವೆಯನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಮಳೆಗಾಲದ ಸಂದರ್ಭದಲ್ಲಿ ಅವಘಡಗಳು, ಅನಾಹುತಗಳಾದಾಗ ತಕ್ಷಣಕ್ಕೆ ಸ್ಪಂದಿಸಲು ಹಾಗೂ ಆಗಬಹುದಾದ ಅವಘಡಗಳನ್ನು ನಿಯಂತ್ರಿಸಲು ಅಗತ್ಯ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಉದ್ದೇಶ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಸಮುದಾಯ ಸಂಘಟನಾಧಿಕಾರಿ ಎ.ಶಿವಪ್ಪ ಅವರು ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು, ನಗರ ಸಭೆಯ ನೀರು ಸರಬರಾಜು ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.