ಬೇಡ್ತಿ ಸುತ್ತಮುತ್ತ ಮೀನುಗಳ ಆಕಸ್ಮಿಕ ಸಾವು: ನದಿಗೆ ಸೇರುತ್ತಿರುವ ತ್ಯಾಜ್ಯ ಕಾರಣವೇ..!??
ಅಕ್ಷಯ ಶೆಟ್ಟಿ ರಾಮನಗುಳಿ
ಯಲ್ಲಾಪುರ: ತಾಲೂಕಿನಲ್ಲಿ ಹಾದುಹೋಗುವ ಬೇಡ್ತಿ (ಗಂಗಾವಳಿ) ನದಿಯ ಗುಳ್ಳಾಪುರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಲಕ್ಷಾಂತರ ಮೀನುಗಳು, ಸಿಗಡಿ ಮೀನುಗಳು ಆಕಸ್ಮಿಕವಾಗಿ ಹೊಳೆಯಿಂದ ಪುಟಿದೆದ್ದು ಸಾವನ್ನಪ್ಪುತ್ತಿದ್ದು ಮತ್ಸಪ್ರಿಯರು ಆತಂಕಗೊಂಡಿರುವ ಘಟನೆ ನಡೆದಿದೆ.
ಕಾರಣ ಏನಿರಬಹುದು?
ಹುಬ್ಬಳ್ಳಿ ಸುತ್ತಮುತ್ತಲಿನ ಪ್ರದೇಶದ ಕಾರ್ಖಾನೆಗಳಿಂದ ರಾಸಾಯನಿಕ ತ್ಯಾಜ್ಯಗಳನ್ನು ಈ ನದಿಗೆ ಬಿಡಲಾಗುತ್ತಿದ್ದು, ಬೇಸಿಗೆಯಲ್ಲಿ ಅಲ್ಲಲ್ಲಿ ಶೇಖರಣೆಯಾಗಿರುತ್ತದೆ. ಬೇಸಿಗೆಯಲ್ಲಿ ಅಪರೂಪ ಮಳೆಯ ಕಾರಣಕ್ಕೆ ದೊಡ್ಡ ನದಿಗೆ ರಾಸಾಯನಿಕ ಮಿಶ್ರಿತ ತ್ಯಾಜ್ಯ ಹರಿದು ಬಂದ ಕಾರಣ ಮೀನುಗಳು ಆಕಸ್ಮಿಕವಾಗಿ ಸಾವನ್ನಪ್ಪುತ್ತಿವೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ವಿವಿಧ ಜಾತಿಯ ಸುಮಾರು 4, 5 ಕೆ.ಜಿ ಗಾತ್ರದ ಮೀನುಗಳಾದ ಕುರುಡ್ಯಾ, ಕಮೀನು, ಶಾಡ್ಯಾ, ಸೀಗಡಿ ಮೀನುಗಳು ಹಳ್ಳದಿಂದ ಹಾರಾರಿ ಬಂದು ದಡಕ್ಕೆ ಬೀಳುತ್ತಿದ್ದ ದೃಶ್ಯ ಕಂಡುಬಂದಿದ್ದವು.
ಧಾರವಾಡದಲ್ಲಿ ಶಾಲ್ಮಲಾ ನದಿಯಾಗಿ, ಯಲ್ಲಾಪುರ ಸುತ್ತಮುತ್ತ ಬೆಡ್ತಿ ನದಿಯಾಗಿ, ಅರಬೈಲ್ ಘಟ್ಟದ ಕೆಳಗೆ ಗಂಗಾವಳಿ ಎಂಬ ಹೆಸರಿನಿಂದ ಕರೆಯಲ್ಪಡುವ ಈ ನದಿಯು ಜಲಪಾತಗಳಿಂದ ಧುಮ್ಮಿಕ್ಕಿ, ಪಶ್ಚಿಮ ಘಟ್ಟಗಳ ಕಣಿವೆಗಳ ಮೂಲಕ ಹಾದು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಈ ನದಿಯು ಕಲುಷಿತಗೊಳ್ಳುತ್ತಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಡುತ್ತಿದೆ.
ಪ್ರತಿವರ್ಷ ಬೇಸಿಗೆಯ ಅಂತ್ಯದಲ್ಲಿ ನೀರಿನ ಹರಿವು ಕಡಿಮೆ ಇರುವ ಕಾರಣಕ್ಕೆ ಬಹುಶಃ ನದಿ ನೀರು ಹಸಿರು ಹಸಿರಾಗಿ ತನ್ನ ಬಣ್ಣ ಬದಲಾಯಿಸುತ್ತದೆ. ಇದಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಹುಬ್ಬಳ್ಳಿಯಿಂದ ಬರುವ ಅಪಾಯಕಾರಿ ರಾಸಾಯನಿಕ ಮಿಶ್ರಿತ ತ್ಯಾಜ್ಯಗಳಿಂದಲೇ ನದಿ ನೀರಿನ ಬಣ್ಣ ಹಸಿರಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಎಷ್ಟೋ ಜನರು ಈ ನದಿಯನ್ನು ನಂಬಿ ಮೀನುಗಾರಿಕೆ ಮಾಡಿ ತಮ್ಮ ಜೀವನ ನಡೆಸುತ್ತಿದ್ದಾರೆ. ಆಕಸ್ಮಿಕವಾಗಿ ಜಲಚರ ಜೀವಿಗಳ ಲಕ್ಷಗಟ್ಟಲೇ ಮಾರಣಹೋಮ ನಡೆದಿರುವುದನ್ನು ಪ್ರಜ್ಞಾವಂತ ನಾಗರಿಕರು ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿ ಕಾರ್ಖಾನೆಯ ತ್ಯಾಜ್ಯ ನೀರನ್ನು ಯಾವುದೇ ರೀತಿಯ ಸಂಸ್ಕರಣೆಗೆ ಒಳಪಡಿಸದೇ ನೇರವಾಗಿ ನದಿಗೆ ಬಿಡಲಾಗುತ್ತದೆಯೇ ಎನ್ನುವುದರ ಬಗ್ಗೆ ತನಿಖೆ ನಡೆಸಬೇಕಿದೆ. ಕಾರ್ಖಾನೆಯಿಂದ Sewage Treatment Plant (STP) ಕೊಳಚೆ ನೀರು ಸಂಸ್ಕರಣಾ ಘಟಕವನ್ನು ಸ್ಥಾಪಿಸಿ ಸಂಸ್ಕರಿಸಿ ನೀರನ್ನು ನದಿಗೆ ಬಿಡುವ ಕಾರ್ಯ ಆಗಬೇಕಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸೂಕ್ತ ತನಿಖೆ ನಡೆಸಿ ನೈಜ ಮಾಹಿತಿಯನ್ನು ಜನರಿಗೆ ನೀಡಬೇಕಿದೆ. ಇಲ್ಲದೇ ಹೋದಲ್ಲಿ ಪ್ರಕೃತಿ ದತ್ತವಾಗಿ ಹರಿದುಬರುವ ನದಿಯು ಪೂರ್ಣಪ್ರಮಾಣದಲ್ಲಿ ಕಲುಷಿತಗೊಳ್ಳುವುದರಲ್ಲಿ ಅನುಮಾನವಿಲ್ಲ.
ಕೋಟ್
ಮೀನುಗಳ ಆಕಸ್ಮಿಕ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಹುಬ್ಬಳ್ಳಿ ಸುತ್ತಮುತ್ತಲಿನ ಕಾರ್ಖಾನೆ ಹೊರಬಿಡುವ ರಾಸಾಯನಿಕ ಮಿಶಿತ್ರ ತ್ಯಾಜ್ಯಗಳಿಂದಲೇ ಮೀನುಗಳು ಸಾವನಪ್ಪುತ್ತಿವೆ ಎಂದು ಶಂಕಿಸಲಾಗಿದೆ. ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದ್ದು ಜನ ಕಂಗಾಲಾಗಿದ್ದಾರೆ. ಸಂಬಂಧಿಸಿದ ಇಲಾಖೆ ಸೂಕ್ತ ತನಿಖೆ ನಡೆಸಿ ಜನರಿಗೆ ಮಾಹಿತಿ ನೀಡಬೇಕಿದೆ.
- ಆನಂದು ಪಿ. ನಾಯ್ಕ
ಸಾಮಾಜಿಕ ಕಾರ್ಯಕರ್ತ ಗುಳ್ಳಾಪುರ
(ಬಾಕ್ಸ್)
ಮೀನುಗಳ ಧಾರುಣ ಸಾವಿಗೆ ಕಾರಣ ಯಾರೋ ದುಷ್ಕರ್ಮಿಗಳು ಕೃತಕ ರಾಸಾಯನಿಕ ಔಷಧ ಬಳಸಿ ಹೊಳೆಗೆ ಹಾಕಿ ದೊಡ್ಡ ದೊಡ್ಡ ಮೀನುಗಳ ಭೇಟೆಯಾಡಿರುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಮೀನುಗಳು ಮಂದವಾಗಿ ಸಾವನಪ್ಪುತ್ತಿವೆ ಎನ್ನಲಾಗುತ್ತಿದೆ.