ಹೊನ್ನಾವರ : ಎಪ್ಪತ್ತರ ವಯಸ್ಸಿನ ಸುಬ್ರಹ್ಮಣ್ಯ ಹೆಗಡೆ ಅಬ್ಳಿ ಅವರು ಅವರ ಎಳವೆಯ ಏರು ತಾರುಣ್ಯದಲ್ಲಿ ಬರೆದ ಕಾದಂಬರಿಗಳನ್ನು ಒಂದರ ಮೇಲೆ ಒಂದರಂತೆ ಪ್ರಕಟಿಸುತ್ತಿದ್ದಾರೆ. ಶೋಷಿತರ ಪರವಾಗಿ ಇಷ್ಟು ಆರ್ದ್ರವಾಗಿ ಬರೆದವರು ಅಪರೂಪ. ಅಬ್ಳಿ ಹೆಗಡೆ ಅವರ ಉತ್ಸಾಹ ಎಲ್ಲರಿಗೂ ಮಾದರಿಯಾಗಲಿ ಎಂದು ಚಿಂತಕ, ಕಾದಂಬರಿಕಾರ ಡಾ. ಗಜಾನನ ಶರ್ಮಾ ಹೇಳಿದರು.
ಅವರು ಹೊನ್ನಾವರ ತಾಲೂಕಿನ ಬೀರನಗೋಡಿನ ಅಬ್ಳಿ ಹೆಗಡೆಯವರ ಮನೆಂಗಳದಲ್ಲಿ ಕಣಿವೆ ಪ್ರಕಾಶನ ಬೆಂಗಳೂರು ಮತ್ತು ಕಲರ್ ಫುಲ್ ಪಿಕ್ಸ್ ಇವರ ಸಹಯೋಗದಲ್ಲಿ ನಡೆದ ‘ಅಮ್ನೋರು’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅತಿಥಿಗಳಾದ ವಿಮರ್ಶಕ ಮಹಾಬಲಮೂರ್ತಿ ಕೊಡ್ಲಕೆರೆ ಮಾತನಾಡಿ, ಅರ್ಧ ಶತಮಾನದ ಹಿಂದೆ ಬರೆದ ಕೃತಿಯಾದರೂ ಇಂದಿಗೂ ಪ್ರಸ್ತುತವೆನಿಸುವ ಕೃತಿ ಅಮ್ನೋರು. ಈ ಕೃತಿ ಕಾಡನ್ನು, ನಾಡನ್ನು, ಹಲವರ ಒಳ ಸಂಘರ್ಷವನ್ನು, ಉನ್ಮತ್ತರ ಲಂಪಟತನವನ್ನು ಚೆನ್ನಾಗಿ ನಿರೂಪಿಸಿದೆ. ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತ್ರಿ ಮಾತನಾಡಿ ಹೆಗಡೆಯವರಲ್ಲಿರುವ ಬಂಡಾಯ ಮನೋಧರ್ಮವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ ಎಂದರು.
ಹಿರಿಯ ಸಾಹಿತಿ ಉದಯಕುಮಾರ್ ಹಬ್ಬು, ಕೃಷ್ಣಮೂರ್ತಿ ಹೆಬ್ಬಾರ, ಕಲ್ಲಚ್ಚು ಪ್ರಕಾಶನದ ಮಹೇಶ ನಾಯಕ ಮೊದಲಾದವರು ಅಬ್ಳಿ ಹೆಗಡೆಯವರ ಸರಳ ಸಹೃದಯ ವ್ಯಕ್ತಿತ್ವ ಮತ್ತು ಕೃತಿಯ ವೈಶಿಷ್ಟ್ಯಗಳ ಕುರಿತು ಪ್ರಸ್ತಾಪಿಸಿದರು. ಅಂಕಣಕಾರ ನಾರಾಯಣ ಯಾಜಿ ಸಾಲೇಬೈಲು ಕೃತಿಯ ವಿಶ್ಲೇಷಣಾತ್ಮಕ ಪರಿಚಯ ನೀಡಿದರು. ಹೆಗಡೆಯವರ ಅಳಿಯ ವಾದಿರಾಜ ಮಯ್ಯಾ ರಚಿಸಿದ ಮುಖಪುಟ ವಿನ್ಯಾಸ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕಲರ್ ಫುಲ್ ಪಿಕ್ಸ ನ ರವೀಂದ್ರ ಹೆಗಡೆ ಉಪಸ್ಥಿತರಿದ್ದರು. ಕೃತಿಕಾರ ಅಬ್ಳಿ ಹೆಗಡೆ ಅವರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ಶ್ರೀನಿಧಿ ಹೆಗಡೆ ಪ್ರಾರ್ಥನೆ ಹಾಡಿದರು. ಉಪನ್ಯಾಸಕ ಪ್ರಶಾಂತ ಮೂಡಲಮನೆ ಸೊಗಸಾಗಿ ನಿರೂಪಿಸಿದರು. ಸಾಹಿತ್ಯಾಸಕ್ತರು ಮತ್ತು ಹೆಗಡೆಯವರ ಬಂಧುಗಳು ಉಪಸ್ಥಿತರಿದ್ದರು.