ದಾಂಡೇಲಿ : ನಗರದಲ್ಲಿ ಕರಿ ಕೋತಿಯ ಉಪಟಳ ಹೆಚ್ಚಾಗತೊಡಗಿದೆ. ನಗರದ ಅಂಚೆ ಕಚೇರಿಯ ಮುಂಭಾಗದ ಬರ್ಚಿ ರಸ್ತೆಯಲ್ಲಿ ಕಾಗದ ಕಾರ್ಖಾನೆಗೆ ಹೋಗುತ್ತಿದ್ದ ಟ್ರ‍್ಯಾಕ್ಟರ್ ನ ಮೇಲೆ ಕರಿ ಕೋತಿಯೊಂದು ಹಾರಿ ಟ್ರ‍್ಯಾಕ್ಟರ್ ನ ಚಾಲಕನ ಹತ್ತಿರ ಕೂತಿದ್ದ ವ್ಯಕ್ತಿಯೋರ್ವರಿಗೆ ಕಚ್ಚಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಸ್ಥಳೀಯ ಮೌಳಂಗಿ ಹತ್ತಿರದ ಕೊಣಪ ನಿವಾಸಿ ಮಹಾಂತೇಶ ಸಿದ್ದಪ್ಪ ಕಾಂಬಳೆ (ವ: 34) ಎಂಬವರೇ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಇವರು ತನ್ನ ಗೆಳೆಯನ ಟ್ರ‍್ಯಾಕ್ಟರ್ ನಲ್ಲಿ ಬರುತ್ತಿದ್ದಾಗ ಕರಿ ಕೋತಿಯೊಂದು ಏಕಾಏಕಿ ಟ್ರ‍್ಯಾಕ್ಟರ್ ಮೇಲೆ ಹತ್ತಿ ಇವರ ಕಾಲಿಗೆ ಕಚ್ಚಿ ಹಾರಿ ಹೋಗಿದೆ. ಗಾಯಗೊಂಡ ಇವರನ್ನು ತಕ್ಷಣವೇ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದು ದಾಖಲಿಸಲಾಗಿದೆ.
ಮೊನ್ನೆ ಮೊನ್ನೆ ಇದೇ ಕರಿ ಕೋತಿ, ಇಎಸ್‌ಐ ಆಸ್ಪತ್ರೆಯ ಆವರಣದಲ್ಲಿ ಟ್ರ‍್ಯಾಕ್ಟರ್ ಚಾಲಕನಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ಮರೆಯುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಈ ಕರಿ ಕೋತಿ ಕೇವಲ ಟ್ರ‍್ಯಾಕ್ಟರ್ ನವರಿಗೆ ಮಾತ್ರ ಕಚ್ಚಲು ಬರುತ್ತಿದ್ದು, ಈಗಾಗಲೇ ಮೂರ್ನಾಲ್ಕು ಟ್ರ‍್ಯಾಕ್ಟರಿನ ಚಾಲಕರು ಇಲ್ಲವೇ ನಿರ್ವಾಹಕರಿಗೆ ಕಚ್ಚಿರುವ ಮತ್ತು ಅಟ್ಟಾಡಿಸಿಕೊಂಡು ಬಂದಿರುವ ಘಟನೆಗಳು ನಡೆದಿರುತ್ತದೆ. ಇನ್ನೂ ನಗರದ ಇಎಸ್‌ಐ ಆಸ್ಪತ್ರೆಯ ಆವರಣದ ಸುತ್ತಮುತ್ತ ಹಾಗೂ ಬರ್ಚಿ ರಸ್ತೆಯಲ್ಲಿ ಟ್ರ‍್ಯಾಕ್ಟರಿನವರು ಹೋಗುವಾಗ ಬಹಳಷ್ಟು ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಅರಣ್ಯ ಇಲಾಖೆಯವರು ಈ ಕರಿ ಕೋತಿಯನ್ನು ಕೂಡಲೇ ಹಿಡಿದು ಕಾಡಿಗೆ ಬಿಡಬೇಕಾಗಿದೆ. ಇಲ್ಲದೆ ಹೋದರೆ ಮತ್ತೆ ಮತ್ತೆ ಅಪಾಯ ಸಂಭವಿಸುವ ಸಾಧ್ಯತೆಯಿದೆ.