ಏ.6ರಿಂದ ಸಹಿ ಸಂಗ್ರಹ ಅಭಿಯಾನ ಪ್ರಾರಂಭ: ಅನಂತಮೂರ್ತಿ ಹೆಗಡೆ
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿ ದೃಷ್ಟಿಯಿಂದ ಘಟ್ಟದ ಮೇಲಿನ ತಾಲೂಕುಗಳ ಕೇಂದ್ರ ಪ್ರದೇಶದಲ್ಲಿ ಜಿಲ್ಲೆಯಾಗುವುದು ಅನಿವಾರ್ಯ. ಹಾಗಾಗಿ ಹೋರಾಟ ಅತ್ಯವಶ್ಯಕವಾಗಿದೆ. ಇದಕ್ಕಾಗಿ ನಾವು ಪ್ರತಿ ಗ್ರಾಮ ಪಂಚಾಯತ್ ನಲ್ಲಿ ಪ್ರತಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹಿಸಿ ಜನ ಅಭಿಪ್ರಾಯ ಸಂಗ್ರಹಿಸುವ ಅಭಿಯಾನಕ್ಕೆ ಏ.6, ಸಿದ್ದಾಪುರದ ಹೇರೂರಿನ ಶ್ರೀರಾಮಲಿಂಗೇಶ್ವರ ದೇವಾಲಯದಲ್ಲಿ ಚಾಲನೆ ನೀಡಲಿದ್ದೇವೆ ಎಂದು ಕದಂಬ ಕನ್ನಡ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಬುಧವಾರ ಸಿದ್ದಾಪುರದ ಬಾಲಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಜನರ ಒಮ್ಮತದ ಅಭಿಪ್ರಾಯವಿದ್ದಾಗ ಮುಖ್ಯಮಂತ್ರಿಗಳು ಕೇಳಬೇಕು, ಶಾಸಕರು, ಸಚಿವರು ಎಲ್ಲರೂ ಕೇಳಬೇಕು. ಜಿಲ್ಲೆಯಾಗಬೇಕು ಎನ್ನುವ ಅಭಿಪ್ರಾಯ ಪ್ರತಿಯೊಬ್ಬರಲ್ಲೂ ಇದೆ ಹಾಗಾಗಿ ಈ ಅಭಿಯಾನ ನಾವು ಹಮ್ಮಿಕೊಂಡಿದ್ದೇವೆ ಎಂದರು.
ಹೋರಾಟ ಸಮಿತಿಯ ಪ್ರಮುಖರಾದ ಎಂ.ಎಂ. ಭಟ್ ಕಾರೆಕೊಪ್ಪ ಮಾತನಾಡಿ, ಈ ಹಿಂದೆ ಪ್ರತಿಷ್ಠಿತ ದಿನಪತ್ರಿಕೆಯೊಂದರ ಸಂಪಾದಕೀಯದಲ್ಲಿ ಉಲ್ಲೇಖಿಸಿದ ಕಾರವಾರವನ್ನು ಮುಂಬರುವ ದಿನಗಳಲ್ಲಿ ಡಿಫೆನ್ಸ್ ಗೆಂದೇ ಬಿಟ್ಟುಕೊಡಬೇಕಾಗುತ್ತದೆ ಎಂಬ ಭವಿಷ್ಯ ನಿಜವಾಗುವಂತೆ ಕಾಣುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸರಕಾರ ಜಾರಿಗೆ ತಂದ ಉತ್ತಮ ಯೋಜನೆಗೆಲ್ಲವನ್ನೂ ಜಿಲ್ಲಾ ಕೇಂದ್ರವೆಂದು ಜಿಲ್ಲೆಯ ಒಂದು ತುದಿಯಾದ ಕಾರವಾರಕ್ಕೆ ಮಂಜೂರಿ ಮಾಡಲಾಗಿದೆ. ಹಾಗಾಗಿ ಈ ಎಲ್ಲ ನಿಟ್ಟಿನಲ್ಲಿ ಆಡಳಿತಾತ್ಮಕವಾಗಿ, ವ್ಯಾವಹಾರಿಕವಾಗಿ, ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಘಟ್ಟದ ಮೇಲಿನ ತಾಲೂಕುಗಳು ಸೇರಿ ಒಂದು ಜಿಲ್ಲೆಯಾಗುವುದು ಅನಿವಾರ್ಯವಾಗಿದೆ. ಭಾವನಾತ್ಮಕವಾಗಿ ಅಖಂಡ ಉತ್ತರ ಕನ್ನಡ ನಮ್ಮದಾಗಿದ್ದರೂ ಆಡಳಿತಾತ್ಮಕವಾಗಿ ವಿಭಜನೆ ಅನಿವಾರ್ಯವಾಗಿದೆ ಎಂದರು.
ನಿವೃತ್ತ ಇಂಜಿನಿಯರ್ ವಿ.ಎಂ. ಭಟ್ ಮಾತನಾಡಿ, ಭವಿಷ್ಯತ್ತಿನ ದೃಷ್ಟಿಕೋನವನ್ನಿಟ್ಟುಕೊಂಡು ಯೋಚನೆ ಮಾಡಿದರೆ ಘಟ್ಟದ ಮೇಲಿನ ತಾಲೂಕುಗಳೆಲ್ಲ ಸೇರಿ ಕದಂಬ ಕನ್ನಡ ರಚನೆ ಮಾಡುವುದು ಅತ್ಯಂತ ಅವಶ್ಯಕ. ಉದ್ಯೋಗಾವಕಾಶವನ್ನರಸಿ ಎಲ್ಲರೂ ಬೆಂಗಳೂರಿಗೆ ಹೋಗುತ್ತಿದ್ದಾರೆ. ಆದರೆ ಪ್ರತ್ಯೇಕ ಜಿಲ್ಲಾ ರಚನೆಯಿಂದ ಸಾಕಷ್ಟು ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಪ್ಯಾರಾ ಮೆಡಿಕಲ್ ಕೋರ್ಸ್ ಪ್ರಾರಂಭ ಮಾಡಿದರೆ ಕೋರ್ಸ್ ಮುಗಿದ ನಂತರ ಉದ್ಯೋಗ ನೀಡಲು ಆಸ್ಪತ್ರೆಗಳಿಲ್ಲ. ಪ್ರತ್ಯೇಕ ಜಿಲ್ಲಾ ರಚನೆಯಿಂದ ಹೆಚ್ಚಿನ ಸೌಲಭ್ಯ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿ ಮಾಡಬಹುದು. ಜನ ಭವಿಷ್ಯತ್ತಿನ ಕುರಿತು ಯೋಚಿಸಬೇಕಾದ ಅನಿವಾರ್ಯತೆ ಇದೆ. ಯುವ ಪೀಳಿಗೆಯ ಬೆಂಗಳೂರು ವಲಸೆಯನ್ನು ತಪ್ಪಿಸಲು ಪರ್ಯಾಯ ದಾರಿ ಎಂದರೆ ಅದು ಈ ಪ್ರತ್ಯೇಕ ಜಿಲ್ಲೆ ರಚನೆಯೇ ಆಗಿದೆ. ಉತ್ತರ ಕನ್ನಡ ಎಂದರೆ ಕೇವಲ ಕಾರವಾರ ಎಂಬಂತ ಮನಸ್ಥಿತಿಯಿದೆ. ಅಷ್ಟೇ ಅಲ್ಲದೇ ಎಲ್ಲ ಅಭಿವೃದ್ಧಿ ಯೋಜನೆಗಳೂ ಕಾರವಾರಕ್ಕೆ ದೊರಕುತ್ತಿವೆ. ಪ್ರತ್ಯೇಕ ಜಿಲ್ಲಾ ರಚನೆಯಿಂದ ಜಿಲ್ಲಾ ಕೇಂದ್ರ ಬದಲಾವಣೆ ಆಗುತ್ತದೆ. ಇದರಿಂದ ಅಭಿವೃದ್ಧಿ ಸಾಧ್ಯ. ಪ್ರತ್ಯೇಕ ಜಿಲ್ಲಾ ಹೋರಾಟ ಕೇವಲ ಕೆಲ ಜನರಿಗಷ್ಟೇ ಸೀಮಿತವಾಗಬಾರದು. ಜನರೆಲ್ಲರೂ ಈ ಕುರಿತು ಯೋಚಿಸಬೇಕಿದೆ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಪ್ರತ್ಯೇಕ ಜಿಲ್ಲಾ ಹೋರಾಟ ರಚನೆ ಆಗಬೇಕಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಕೃಷ್ಣಮೂರ್ತಿ ನಾಯ್ಕ್ ಐಸೂರು, ಕಮಲಾಕರ್ ನಾಯ್ಕ್ ಹೇರೂರು, ನಿವೃತ್ತ ಸಾರಿಗೆ ಅಧಿಕಾರಿ ಜಿ.ಎಸ್.ಹೆಗಡೆ ಸೇರಿದಂತೆ ಇನ್ನಿತರರು ಇದ್ದರು.
ಮನೆ ಮನೆ ಸಹಿ ಸಂಗ್ರಹಕ್ಕೆ ಹೇರೂರಿನಲ್ಲಿ ಏ.6 ಕ್ಕೆ ಚಾಲನೆ
ಮನೆ ಮನೆ ಸಹಿ ಸಂಗ್ರಹ ಅಭಿಯಾನದ ಅಂಗವಾಗಿ ಏಪ್ರಿಲ್ 6 ರಂದು ಸಂಜೆ 4 ಹೇರೂರಿನ ಶ್ರೀರಾಮಲಿಂಗೇಶ್ವರ ದೆವಾಲಯದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು .ಇಪ್ಪತ್ತು ದಿನ ಒಂದು ಪಂಚಾಯತ್ ನಲ್ಲಿ ಅಭಿಯಾನ ನಡೆಯಲಿದೆ ಹಾಗೂ ಏಪ್ರಿಲ್ 26 ರಂದು ಸಂಜೆ 4 ಘಂಟೆಗೆ ಸಮಾರೋಪ ಸಮಾರಂಭ ಹೇರೂರಿನಲ್ಲೇ ನಡೆಯಲಿದೆ.