ಶಿರಸಿ: ನಮ್ಮ ಮಕ್ಕಳಿಗೆ ರಾಷ್ಟ್ರೀಯತೆ, ಸನಾತನ ಸಂಸ್ಕೃತಿಗಳ ಪರಿಚಯ ಮಾಡಿಸಿ ಬೆಳೆಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ತಾಲೂಕಿನ ಕಾನಗೋಡಿನ ಯುಗಾದಿ ಉತ್ಸವ ಸಮಿತಿ ಸ್ಥಳೀಯ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಹಮ್ಮಿಕೊಂಡ ಸನ್ಮಾನ, ಸಾಂಸ್ಕೃತಿಕ ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದರು.
ಯುಗಾದಿ ಸಂಭ್ರಮ ಕಾನಗೋಡಿನಲ್ಲಿ ಮತ್ತೆ ಮರಳಿದೆ ಎಂದು ಶ್ಲಾಘಿಸಿ, ವರ್ಷದಿಂದ ವರ್ಷಕ್ಕೆ ಇದರ ಉತ್ಸಾಹ ಇನ್ನಷ್ಟು ಬೆಳೆಯಬೇಕು ಎಂದರು.
ಸನಾತನ ಹಿಂದುಗಳು ಧರ್ಮ ಸಂಸ್ಕೃತಿ ರಕ್ಷಕರಾಗಬೇಕು. ಹತ್ತು ಹಲವು ವಿಶೇಷತೆಗಳಿಂದ ಕೂಡಿದ ಯುಗಾದಿ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಹೊಸ ವರ್ಷ. ಪ್ರಕೃತಿಯೊಂದಿಗೆ ಬದುಕುವ ನಾವು ಇದನ್ನು ರೂಢಿಸಿ ಮನೆ ಮನೆಗಳಲ್ಲಿ ಹಾಗೂ ಸಾಮೂಹಿಕವಾಗಿ ಆಚರಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ, ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ನೆಮ್ಮದಿ ಹೆಚ್ಚು. ನಮ್ಮ ಮಕ್ಕಳು ದಾರಿ ತಪ್ಪದಂತೆ ಪಾಲಕರೇ ಎಚ್ಚರಿಕೆಯಿಂದ ನಡೆಸಿಕೊಳ್ಳಬೇಕು. ನಮ್ಮತನ ತಿಳಿಸಿ ದೇಶಾಭಿಮಾನ ಬೆಳೆಸಬೇಕು ಎಂದರು. ಇದೇ ವೇಳೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಅವರನ್ನು ಉತ್ಸವ ಸಮಿತಿಯಿಂದ ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಸುರೇಶ ನಾಯ್ಕ ವಹಿಸಿದ್ದರು. ಈ ವೇಳೆ ಸಮಿತಿ ಉಪಾಧ್ಯಕ್ಷ ಅಶೋಕ ಹೆಗಡೆ, ಡಿ.ವಿ.ಹೆಗಡೆ ಕಾನಗೋಡ, ರಾಮಚಂದ್ರ ಪಟಗಾರ, ಪ್ರಧಾನ ಕಾರ್ಯದರ್ಶಿ ರವಿ ಗಾಂವಕರ, ಸಹ ಕಾರ್ಯದರ್ಶಿ ಸತೀಶ ದೇಶಭಂಡಾರಿ, ಕೋಶಾಧ್ಯಕ್ಷ ಶಿವಾನಂದ ನಾಯ್ಕ ಇತರರು ಇದ್ದರು.
ಇದಕ್ಕೂ ಮುನ್ನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಡಹಳ್ಳಿ ಸೊಸೈಟಿ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಚಾಲನೆ ನೀಡಿದರು. ಗ್ರಾ.ಪಂ.ಅಧ್ಯಕ್ಷ ಪ್ರಕಾಶ ನಾಯ್ಕ, ಚಿಂತಕ ರಮೇಶ ಹೆಗಡೆ ಹಳೆಕಾನಗೋಡ, ಶಾಲಾ ಮುಖ್ಯಾಧ್ಯಾಪಕ ರವೀಂದ್ರ, ಗ್ರಾ.ಪಂ. ಸೆಕ್ರೆಟರಿ ಲಕ್ಷ್ಮೀನಾರಾಯಣ ಶೆಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ನಾಯ್ಕ ಇತರರು ಇದ್ದರು. ಗಿರಿಧರ ಕಬ್ನಳ್ಳಿ, ಪ್ರತಿಮಾ ಮಾಳೆನಳ್ಳಿ ನಿರ್ವಹಿಸಿದರು.
ಸ್ಥಳೀಯ ಪ್ರತಿಭೆಗಳಿಂದ ಹಾಡು, ನೃತ್ಯ, ಮಿಮಿಕ್ರಿಗಳು ನಡೆದವು. ಚಿಂತನಾ ಮಾಳಕೋಡ ತಂಡದಿಂದ ಯಕ್ಷನಾಟ್ಯ ವೈಭವ ನಡೆಯಿತು.
ಮಾದರಿಯಾದ ಉತ್ಸವ
ಕಾನಗೋಡದಲ್ಲಿ ಎಲ್ಲರೂ ಸೇರಿ ಆತ್ಮೀಯವಾಗಿ ನಡೆಸಿದ ಯುಗಾದಿ ಉತ್ಸವ ಎಲ್ಲರಲ್ಲೂ ಉತ್ಸಾಹದ ವಾತಾವರಣ ಸೃಷ್ಟಿಸಿತ್ತು. ತಳಿರು ತೋರಣಗಳಿಂದ ಸಿಂಗರಿಸಿ ಎಲ್ಲರಿಗೂ ಬೇವು ಬೆಲ್ಲ ಹಂಚಿ, ಸುಮಂಗಲೀಯರಿಗೆ ಅರಸಿನ ಕುಂಕುಮ ನೀಡಿ ಬರಮಾಡಿಕೊಂಡರು. ಮಕ್ಕಳ, ದೊಡ್ಡವರ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವು ಕಾರ್ಯಕ್ರಮ ಆಯೋಜಿಸಿ ಆತ್ಮೀಯವಾಗಿ ಆಚರಿಸಿ ಮಾದರಿಯಾದರು.