Slide
Slide
Slide
previous arrow
next arrow

ಕೋಣನಗುಂಡಿಯಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯಗೆ ಹೃದಯಸ್ಪರ್ಶಿ ಸನ್ಮಾನ

300x250 AD

ಶಿರಸಿ: ಕೋಣನಗುಂಡಿಯ ಭೂತೇಶ್ವರ ದೇವಸ್ಥಾನ ಟ್ರಸ್ಟ್‌ನ ೨೩ ನೇ ವಾರ್ಷಿಕೋತ್ಸವ ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸನ್ಮಾನ ಮತ್ತು ಯಕ್ಷಗಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲ್ಪಟ್ಟಿತು.

ದೇವಸ್ಥಾನದ ಹರಕೆದಾರರಾದ ಗಂಗಾ ಮತ್ತು ರಾಜು ಪೂಜಾರಿ ಮಾವಿನಸರ ಇವರ ಕುಟುಂಬ ಹಾಗೂ ಶ್ರೀ ದೇವಸ್ಥಾನದ ಆಡಳಿತ ಮಂಡಳಿ ಸೇರಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಹಿರಿಯ ಯಕ್ಷಗಾನ ಕಲಾವಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ ಆಚಾರ್ಯ ತೀರ್ಥಹಳ್ಳಿ ಅವರಿಗೆ ಮತ್ತು ಸಂಘಟಕ ಹವ್ಯಾಸಿ ಯಕ್ಷಗಾನ ಕಲಾವಿದ ಗಂಗಾಧರ ಹೆಗಡೆ ಕಟ್ಟಿನಹಕ್ಲು ಅವರಿಗೆ ಹೃದಯಸ್ಪರ್ಶಿಯಾಗಿ ಗೌರವ ಸನ್ಮಾನವನ್ನು ನೇರವೇರಿಸಿದರು.

ಸನ್ಮಾನ ಸ್ವೀಕರಿಸಿದ ಗೋಪಾಲ ಆಚಾರ್ಯ ತೀರ್ಥಹಳ್ಳಿಯವರು ಮಾತನಾಡಿ, ನವರಸ ತುಂಬಿದ ಕಲೆ ಯಕ್ಷಗಾನವು ಅತ್ಯಂತ ಶಕ್ತಿಯ ಕಲೆಯಾಗಿದ್ದು, ಇದರಲ್ಲಿ ಪಾಲ್ಗೊಂಡವರಿಗೆ ವ್ಯಕ್ತಿತ್ವ ರೂಪಿಸುತ್ತದೆ. ಹಾಗೆಯೇ ಭಾಷೆಯನ್ನು ಕಲಿಸುತ್ತ ವ್ಯಕ್ತಿಯೊಳಗಿನ ಕಲಾದೇವತೆಯನ್ನು ಜಾಗೃತಗೊಳಿಸುತ್ತ ಆತನಿಗೆ ಕೀರ್ತಿ, ಗೌರವಗಳನ್ನು ಒದಗಿಸಿಕೊಡುವ ನಿಷ್ಪಹ ಕಲೆ ಯಕ್ಷಗಾನವಾಗಿದೆ ಎಂದರು. ೭೦ ರ ಇಳಿ ವಯಸ್ಸಿನಲ್ಲಿರುವ ತನಗೆ ಪ್ರಶಸ್ತಿ, ಪುರಸ್ಕಾರ, ಜೀವನದ ದಾರಿ ಮಾಡಿಕೊಟ್ಟಿರುವುದು ಯಕ್ಷಗಾನವಾಗಿದ್ದು, ನನ್ನ ಉಸಿರು ಕೂಡ ಯಕ್ಷಗಾನವಾಗಿದೆ ಎನ್ನುತ್ತ ಕೃತಜ್ಞತೆ ಸಮರ್ಪಿಸಿದರು.
ವೇದಿಕೆಯಲ್ಲಿ ನಾಗರಾಜ ಪೂಜಾರಿ, ಭಾಸ್ಕರ ಪೂಜಾರಿ, ರತ್ನಾಕರ, ಕೃಷ್ಣ, ಗಣಪತಿ, ಮಂಜುನಾಥ, ಜಗನ್ನಾಥ ಪೂಜಾರಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸ್ಥಳೀಯ ಊರ ಮಕ್ಕಳ ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಸಂಘಟಿಸಲಾಗಿದ್ದ ಮಹಾಗಣಪತಿ ಯಕ್ಷಗಾನ ಮಂಡಳಿ ಗಣೇಶಪಾಲ್ ಹಾಗೂ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಸಂಪೂರ್ಣ ಶನಿಮಹಾತ್ಮೆ ಯಕ್ಷಗಾನ ಬಯಲಾಟವು ಜನಮನಸೂರೆಗೊಂಡಿತು.

300x250 AD

ಹಿಮ್ಮೇಳದ ಭಾಗವತರಾಗಿ ಸುರೇಶ ಶೆಟ್ಟಿ ಶಂಕರನಾರಾಯಣ ಮತ್ತು ಹಿಲ್ಲೂರು ರಾಮಕೃಷ್ಣ ಹೆಗಡೆ, ಮದ್ದಲೆ ವಾದಕರಾಗಿ ಪರಮೇಶ್ವರ ಭಂಡಾರಿ, ಅನಿರುದ್ಧ ಹೆಗಡೆ ವರ್ಗಾಸರ, ಚಂಡೆ ವಾದಕರಾಗಿ ಗಣೇಶ ಗಾಂವಕರ ಹಲವಳ್ಳಿ ಮತ್ತು ಪ್ರಶಾಂತ ಹೆಗಡೆ ಕೈಗಡಿ ಪಾಲ್ಗೊಂಡರು. ಮುಮ್ಮೇಳದ ಪಾತ್ರಧಾರಿಗಳಾಗಿ ಗೋಪಾಲ ಆಚಾರ್ಯ ತೀರ್ಥಹಳ್ಳಿ, ಗಣಪತಿ ಹೆಗಡೆ ತೋಟಿಮನೆ, ಅಶೋಕ ಭಟ್ಟ ಸಿದ್ದಾಪುರ, ರಾಮಚಂದ್ರ ಭಟ್ಟ ಬಂಗಾರಮಕ್ಕಿ, ಹಾರೆಗೊಪ್ಪ ಮಹಾಬಲೇಶ್ವರ, ಮಂಜುನಾಥ ಶೆಟ್ಟಿ ಕಾಳೇನಳ್ಳಿ, ಕೃಷ್ಣ ಪೂಜಾರಿ ಚಪ್ಪರಕಟ್ಟೆ, ಲಕ್ಷ್ಮಣ ಪಟಗಾರ, ಸ್ತ್ರೀವೇಷದಲ್ಲಿ ಸದಾಶಿವ ಮಲವಳ್ಳಿ, ಅಶ್ವಿನಿ ಕೊಂಡದಕುಳಿ ಹಾಗೂ ಹಾಸ್ಯದಲ್ಲಿ ಶ್ರೀಧರ ಭಟ್ಟ ಕಾಸರಕೋಡು, ವೆಂಕಟರಮಣ ಮಾದನಕಳ್ಳು ಮುಂತಾದವರು ಪಾಲ್ಗೊಂಡು ಯಕ್ಷಗಾನಕ್ಕೆ ಮೆರಗು ತಂದರು. ಗಿರಿಧರ ಕಬ್ನಳ್ಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top