ಶಿರಸಿ: ಹಿರಿಯರನ್ನು ಪ್ರೀತಿ ಗೌರವದಿಂದ ಕಾಣಬೇಕು ಅವರ ಸೇವೆ ಮಾಡುವುದು ನಮ್ಮ ಸುಯೋಗ ಎಂದು ತಾಲೂಕು ಹಿರಿಯ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ ಅಭಿಪ್ರಾಯಪಟ್ಟರು.
ಅವರು ಶಿರಸಿಯ ಸುಯೋಗ ಫೌಂಡೇಶನ್ ರವರ ಸುಯೋಗಾಶ್ರಯದಲ್ಲಿ ನಡೆದ ವಯಸ್ಕ ಬಿಸಿಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸುಯೋಗ ಫೌಂಡೇಶನ್ ಸುಯೋಗಾಶ್ರಯದ ಮುಖ್ಯಸ್ಥರಾದ ಶ್ರೀಮತಿ ಲತಿಕಾ ಭಟ್ ಮಾತನಾಡಿ ಕ್ಷಯ ರೋಗವನ್ನು ತಡೆಗಟ್ಟುವಲ್ಲಿ ಬಿಸಿಜಿ ಚುಚ್ಚುಮದ್ದು ಅತ್ಯಂತ ಪರಿಣಾಮಕಾರಿಯಾದದ್ದು ಲಸಿಕೆ ಪಡೆಯುವಲ್ಲಿ ಯಾವುದೇ ಹಿಂಜರಿಕೆ ಬೇಡ ಎಂದರು.
ಆರೋಗ್ಯ ಶಿಕ್ಷಣಾಧಿಕಾರಿ ಗಳಾದ ಗೌರಿ ಸಿ. ನಾಯ್ಕ್ ಮಾತನಾಡಿ ಕ್ಷಯ ಮಕ್ತ ಭಾರತ ಮಾಡುವಲ್ಲಿ ಬಿಸಿಜಿ ಚುಚ್ಚುಮದ್ದು ಅತಿ ಅವಶ್ಯಕವಾಗಿದ್ದು ಇದನ್ನು ಎಲ್ಲರೂ ಪಡೆಯಬೇಕು ಎಂದರು.
ಮೊದಲ ಹಂತದಲ್ಲಿ 60 ವರ್ಷ ಮೇಲ್ಪಟ್ಟ ವಯಸ್ಕರು, ಕಳೆದ ಐದು ವರ್ಷಗಳಿಂದ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದು ಗುಣಮುಖರಾದವರು, ಹಾಗೂ ಅವರ ನಿಕಟ ಸಂಪರ್ಕಿತರು, ಸಕ್ಕರೆ ಕಾಯಿಲೆ ಉಳ್ಳವರು, ಧೂಮಪಾನಿಗಳು, ಹಾಗೂ ಬಿಎಂಐ 18 ಕ್ಕಿಂತ ಕಡಿಮೆ ಇರುವವರು ಮೊದಲ ಹಂತದಲ್ಲಿ ಕಡ್ಡಾಯವಾಗಿ ಬಿಸಿಜಿ ಲಸಿಕೆ ಪಡೆಯುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದತ್ತಾತ್ರೇಯ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಆಶಾ ಮೇಲ್ವಿಚಾರಕಿ ರೂಪಾ ನಾಯ್ಕರವರು ಸ್ವಾಗತಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿ.ಸಿ. ಹಿರೇಮಠ್ ಹಾಗೂ ಆರೋಗ್ಯ ನಿರೀಕ್ಷಕ ಸಾಜನ ಕಾಟೇನಳ್ಳಿ ನಿರೂಪಿಸಿದರೆ ಕುಮಾರಿ ಗೀತಾ ನಾಯ್ಕರವರು ವಂದಿಸಿದರು. ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಾಥಮಿಕ ಅರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಜ್ಯೋತಿ ನಾಯ್ಕ ಹಾಗೂ ಸಮುದಾಯ ಆರೋಗ್ಯ ಅಧಿಕಾರಿ ವಿದ್ಯಾಶ್ರೀ ವ್ಯಾಕ್ಸಿನೇಟರ್ ಆಗಿ ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ಆಹಾರ ಸುರಕ್ಷತಾ ಅಧಿಕಾರಿ ಅರುಣ ಕಾಶಿ ಭಟ್, ಸುಗಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ 35ಕ್ಕೂ ಅಧಿಕ ಫಲಾನುಭವಿಗಳು ವಯಸ್ಕ ಬಿಸಿಜಿ ಚುಚ್ಚುಮದ್ದನ್ನು ಪಡೆದರು.