Slide
previous arrow
next arrow

ಪ್ರಕೃತಿ ಹರ್ಷದಿಂದ ನಲಿದಾಗ ನಮಗೆ ಹೊಸವರ್ಷ: ಶ್ರೀಕಾಂತ ಅಗಸಾಲ

300x250 AD

ಬನವಾಸಿ: ನಮ್ಮದು ಋಷಿ ಪರಂಪರೆ ದೇಶ. ಹಿಂದೂ ಸಮಾಜ‌ದವರು ಪ್ರಕೃತಿಯೇ ದೇವರು ಎಂದು ತಿಳಿದವರು. ಪ್ರಕೃತಿಯ ಬದುಕಿನಲ್ಲಿ ಸಂತೋಷ ಉಂಟಾದಾಗ ಆ ಸಂದರ್ಭ ನಮ್ಮ ಹೊಸ ವರ್ಷ. ಸೃಷ್ಟಿಯ ಮೊದಲ ದಿನವೇ ಯುಗಾದಿಯಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿರಸಿ ಜಿಲ್ಲಾ ಕಾರ್ಯವಾಹ ಶ್ರೀಕಾಂತ ಅಗಸಾಲ  ಹೇಳಿದರು.

ಅವರು ಇಲ್ಲಿನ ಕಾಲೇಜು ಆವರಣದಲ್ಲಿ ಭಾನುವಾರ  ಯುಗಾದಿ ಉತ್ಸವ ಸಮಿತಿ  ಹಮ್ಮಿಕೊಂಡ  ಯುಗಾದಿ ಉತ್ಸವದ ಸಭಾ  ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿ  ಮಾತನಾಡುತ್ತ, ಇಂದಿನ ರಾಜಕಾರಣ ಜಾತಿ ಮತ್ತು ಹಣವನ್ನು ಆಧರಿಸಿ ನಿಂತಿದೆ. ಇದರಿಂದ ದೇಶ ಅಧೋಗತಿಯತ್ತ ಸಾಗಿದೆ. ವಿದೇಶಿ ಸಂಸ್ಕೃತಿಯ ಪ್ರಭಾವ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಂಸ್ಕೃತಿಯನ್ನು ನಾಶಗೊಳಿಸುವ ಷಡ್ಯಂತ್ರ ನಡೆದಿದೆ. ಈ ಹಿಂದೆಯೂ ವಿದೇಶಿ ದಾಳಿಕೋರರು ಈ ದೇಶದ ಮೇಲೆ ಆಕ್ರಮಣ ಮಾಡಿದಾಗಲೆಲ್ಲ ಈ ದೇಶದ ದೇವಸ್ಥಾನಗಳು ಮತ್ತು ಸಾಧುಸಂತರನ್ನು ಗುರಿಯಾಗಿಸಿದ್ದರು. ಈ ದೇಶದ ಬಲಿಷ್ಠ ಯುವಕರು ದೇಶದ ಸಂಪತ್ತಾಗಿದ್ದು, ಸ್ವಾಭಿಮಾನ ಬೆಳಸಿಕೊಂಡು ಸತ್ಕಾರ್ಯದ ಉತ್ಸಾಹದ ನಶೆ ಏರಿಸಿಕೊಂಡರೆ, ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ನಮ್ಮ ಆಚರಣೆಯನ್ನು ಕಂಡು ಜಗತ್ತು ಬೆರಗಾಗುತ್ತಿದೆ. ಪೂರ್ವಜರ ಸಾಧನೆಯಿಂದಾಗಿ ಇಂದು ನಾವೆಲ್ಲರೂ ಬೆನ್ನುತಟ್ಟಿಕೊಳ್ಳುತ್ತಿದ್ದೆವೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರನೇ ವರ್ಷದ ಸಂಭ್ರಮದಲ್ಲಿದೆ.  ಸಂಘವು ಯಾರನ್ನು ದ್ವೇಷ ಮಾಡುವುದಿಲ್ಲ. ಆದರೂ ದೇಶ ವಿರೋಧಿಗಳಿಗೆ ಸಂಘವನ್ನು ಕಂಡರೆ ಭಯವಾಗುತ್ತಿದೆ. ಸಂಘವು ದೇಶದ ನೂರಾರು ರಂಗಗಳಲ್ಲಿ ಜಾಗೃತವಾಗಿದೆ. ಹಿಂದೂಗಳನ್ನು ಜಾಗೃತವಾಗಿಸಿ, ಸಂಘಟಿತಗೊಳಿಸಿ ಬಲಿಷ್ಠ,  ಶ್ರೀಮಂತ ರಾಷ್ಟ್ರವಾಗಿಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗುರಿಯಾಗಿದೆ. ನಾವೆಲ್ಲರೂ  ಜಾತಿಭೇಧ ಮರೆತು ನಾವೆಲ್ಲರೂ ಹಿಂದೂಗಳು ಎಂಬ ಭಾವನೆ ನಮ್ಮಲ್ಲಿ ಮೂಡಬೇಕಾಗಿದೆ ಎಂದು ಕರೆ ನೀಡಿದರು.

ಸಾನಿಧ್ಯವಹಿಸಿದ್ದ ಜಡೆ ಮಠದ ಶ್ರೀ ಜಗದ್ಗುರು ಕುಮಾರ ಕಂಪಿನ ಶ್ರೀ ಸಿದ್ಧವೃಷಭೇಂದ್ರ ಮಹಾಸ್ವಾಮಿ ಆಶೀರ್ವಚ ನೀಡಿ, ನಮ್ಮೆಲ್ಲರ ಮನಸ್ಸಿನಲ್ಲಿ ರಾಷ್ಟ್ರಭಕ್ತಿ ಮೂಡಬೇಕು. ಎಲ್ಲರೂ ನಮ್ಮವರೇ ಎಂಬ ಆಶಾಭಾವನೆ ಬರಬೇಕು. ಆಚಾರ ವಿಚಾರ ಬೇರೆಯಾಗಿರಬಹುದು ಅದರೆ ನಾವೆಲ್ಲರೂ ಹಿಂದೂ ಅನ್ನುವ ಭಾವನೆ ನಮ್ಮೆಲ್ಲರಲ್ಲಿ ಮೂಡಬೇಕು. ಯುವ ಪೀಳಿಗೆ ಮಾತೆ, ಗೋ ಮಾತೆ, ಧರ್ಮ, ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದರು.

300x250 AD

ಶ್ರೀ ಮಧುಕೇಶ್ವರ ವೇದವಿದ್ಯಾ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಪಠಿಸಿದರು. ಅರ್ಚಕ ನರಸಿಂಹ ದೀಕ್ಷಿತ್ ಪಂಚಾಂಗ ಪಠಣಗೈದರು.ಕಾರ್ಯಕ್ರಮದಲ್ಲಿ ಊರಿನ ಗಣ್ಯರು, ಉತ್ಸಾಹಿ ಹಿಂದೂ  ಯುಗಾದಿ ಉತ್ಸವ ಸಮಿತಿಯ ಸದಸ್ಯರು, ಸಾವಿರಾರು ಹಿಂದೂ ಸಮಾಜ ಬಾಂಧವರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಅರವಿಂದ ಬಳೆಗಾರ ನಿರೂಪಿಸಿದರು. ಸುಧೀರ ನಾಯರ್ ಸ್ವಾಗತಿಸಿದರು.

ಯುಗಾದಿ ಉತ್ಸವದ ಅಂಗವಾಗಿ ಯುಗಾದಿ ಉತ್ಸವ ಸಮಿತಿಯಿಂದ ಪಟ್ಟಣದಲ್ಲಿ ಭವ್ಯ ಶೋಭಯಾತ್ರೆ ನಡೆಯಿತು. ಅಲಂಕೃತ ತೆರೆದ ವಾಹನದಲ್ಲಿ ತಾಯಿ ಭಾರತಾಂಬೆ ಹಾಗೂ ಶ್ರೀ ರಾಮಚಂದ್ರನ ಭಾವಚಿತ್ರವಿಟ್ಟು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಭಟ್ಕಳದ ಜೈ ಮಾರುತಿ ಚಂಡೆಮೇಳ, ಶಿರಾಳಕೊಪ್ಪ ಝಂಜ್ ಪತಾಕ್, ಭಟ್ಕಳದ ಆಕರ್ಷಕ ಗೊಂಬೆಗಳು, ಆಂಜನೇಯ, ಗೋರಿಲ್ಲಾ, ಕಾಳಿ ಮಾತೆಯರ ವೇಷಗಳು ಶೋಭಯಾತ್ರೆಗೆ ಮೆರಗು ನೀಡಿದವು. ಯುವಕರು  ಕೇಸರಿ ಬಾವುಟ ಹಿಡಿದು ವಂದೇ ಮಾತರಂ,  ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು.  ಯುಗಾದಿ ಉತ್ಸವಕ್ಕೆ ಬನವಾಸಿ ಪಟ್ಟಣ ಕೇಸರಿಮಯವಾಗಿ ಕಂಗೊಳಿಸಿತು.

Share This
300x250 AD
300x250 AD
300x250 AD
Back to top