ಸುಂಕ ಪಾವತಿಸುವುದಿಲ್ಲವೆಂದು ಮಹಿಳಾ ಮೀನುಗಾರರಿಂದ ಮನವಿ ಸಲ್ಲಿಕೆ
ಹೊನ್ನಾವರ : ಇಲ್ಲಿಯ ಬಂದರು ಇಲಾಖೆಯ ಜಾಗದಲ್ಲಿ ಪಟ್ಟಣ ಪಂಚಾಯಿತಿ ನಿರ್ಮಿಸಿದ ಮೀನು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ನಿರ್ವಹಣೆ ಮಾಡುವವರೆಗೆ ಟೆಂಡರುದಾರರಿಗೆ ಮೀನು ಮಾರುಕಟ್ಟೆಯ ಸುಂಕವನ್ನು ಪಾವತಿಸುವುದಿಲ್ಲ ಎಂದು ಮೀನು ಮಾರುಕಟ್ಟೆಯ ಜಲದೇವತಾ ಮಹಿಳಾ ಮೀನುಗಾರರ ಸಂಘದ ವತಿಯಿಂದ ಮೀನುಗಾರ ಮಹಿಳೆಯರು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಯವರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
ಮೂಲಭೂತ ಸೌಕರ್ಯಗಳನ್ನು ಒದಗಿಸಿದಲ್ಲಿ ಸಂಘದಲ್ಲಿರುವ ಮಹಿಳಾ ಮೀನುಗಾರರು ಸುಂಕವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಸಂದಾಯ ಮಾಡುವುದಾಗಿ ತಿಳಿಸಿದ್ದಾರೆ. ಮೀನು ಮಾರಾಟ ಮಾಡುವ ವ್ಯಾಪಾರಸ್ಥರಿಗಾಗಿ ಪಟ್ಟಣ ಪಂಚಾಯಿತಿ ಮೀನು ಮಾರುಕಟ್ಟೆಯನ್ನು ನಿರ್ಮಿಸಿತ್ತು. ಆದರೆ ಈ ಮೀನು ಮಾರುಕಟ್ಟೆಯಲ್ಲಿ ಕುಳಿತು ವ್ಯಾಪಾರ ಮಾಡಲು ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ.
ನೆರಳು, ಬೆಳಕು, ಕುಡಿಯುವ ನೀರು, ಊಟ-ವಿಶ್ರಾಂತಿ ಮಾಡಲು ಕೊಠಡಿ, ಶೌಚಾಲಯ ಇಲ್ಲ. ಮೀನು ಮಾರುಕಟ್ಟೆಯ ಸುತ್ತಲೂ ಸದಾ ದುರ್ವಾಸನೆ ತುಂಬಿರುವುದು. ಸರಿಯಾಗಿ ಸ್ವಚ್ಛತೆ ನಿರ್ವಹಣೆ ಮಾಡಿಲ್ಲ. ಆದ್ದರಿಂದ ಸಂಬಂಧಪಟ್ಟ ಟೆಂಡರುದಾರರಿಗೆ ಸುಂಕವನ್ನು ಪಾವತಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಸಂಘದ ಅಧ್ಯಕ್ಷೆ ರತ್ನಾ ಮೇಸ್ತ, ಗಂಗಾ ಬಾಬು ಮೇಸ್ತ, ಸುಶೀಲಾ ಕೇಶವ ಮೇಸ್ತ, ಕಮಲಾ ದಾಮೋದರ ಮೇಸ್ತ, ನೀಲಾ ಮೇಸ್ತ ಮತ್ತಿತರರು ಮನವಿ ಸಲ್ಲಿಸಿದರು.