ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯ ಕುಮಟಾದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಸೇವಾ ಶಿಬಿರವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳಕಾರದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ್ ಹೊಲನಗದ್ದೆಯ ಅಧ್ಯಕ್ಷರಾದ ಎಮ್. ಎಮ್. ಹೆಗಡೆ ವಿದ್ಯಾರ್ಥಿಗಳಿಗೆ ಎನ್ಎಸ್ಎಸ್ ತರಬೇತಿಯ ಮಹತ್ವವನ್ನು ಮನೋಜ್ಞವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಕಾಲೇಜ ಸೊಸೈಟಿಯ ಕಾರ್ಯಾಧ್ಯಕ್ಷರಾದ ಹನುಮಂತ ಕೆ. ಶಾನಭಾಗ ಸಮಾಜಸೇವೆಯಲ್ಲಿ, ರಾಷ್ಟ್ರಸೇವೆಯಲ್ಲಿ ಯುವಜನರ ಪಾತ್ರದ ಕುರಿತು ಹಲವಾರು ಉದಾಹರಣೆಗಳೊಂದಿಗೆ ವಿವರಿಸಿದರು. ಗೌರವ ಉಪಸ್ಥಿತಿ ಸ್ಥಾನದಿಂದ ಎಸ್.ಡಿ.ಎಮ್.ಸಿ ಹಳಕಾರದ ಅಧ್ಯಕ್ಷರಾದ ಅಶೋಕ ಹರಿಕಂತ್ರ ಹಾಗೂ ಪ್ರಸ್ತುತ ಶಾಲೆಯ ಮುಖ್ಯಾಧ್ಯಾಪಿಕೆಯಾದ ಶ್ರೀಮತಿ. ಸುಧಾ ಆಗೇರ ಮಾತನಾಡಿದರು.
ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಶ್ರೀಮತಿ ರೇಖಾ ಯೆಲಿಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕ ವಿದ್ಯಾರ್ಥಿಗಳಾದ ಕುಮಾರಿ. ಉಷಾ ಗೌಡ ಹಾಗೂ ಕುಮಾರ. ಸಂದೀಪ ಮರಾಠೆ ಪ್ರಾರ್ಥನೆ ಹಾಡಿದರು. ಶಿಕ್ಷಕ ವಿದ್ಯಾರ್ಥಿ ಕುಮಾರ ಕೃಷ್ಣ ಲಮಾಣಿ ವಂದನೆಯನ್ನು ಸಲ್ಲಿಸಿದರು.