ಫೆ.3ಕ್ಕೆ ಶಂಕರಮಠದಲ್ಲಿ ಕಣ್ಮರೆಯಾದ ಸನಾತನ ಆಶಯ ಸಾದೃಶಗೊಳಿಸಲಿರುವ ವಿವಾಹ ಮಹೋತ್ಸವ
ಸಿದ್ದಾಪುರ: ಭಾರತೀಯ ಪರಂಪರೆಯಲ್ಲಿ ಹಿಂದೆ ವಿವಾಹ ಸಂದರ್ಭದಲ್ಲಿ ಅಡಕಗೊಂಡಿರುತ್ತಿದ್ದ, ಶಾಸ್ತ್ರಗಳಲ್ಲೂ ಉಲ್ಲೇಖವಾಗಿರುವ ಕೆಲವು ವಿಧಾನಗಳನ್ನು ಸಂಯೋಜಿಸಿರುವ ವಿವಾಹ ಫೆ.3ರಂದು ಪಟ್ಟಣದ ಶಂಕರಮಠದಲ್ಲಿ ಜರುಗಲಿದೆ.
ವೇ|ಮೂ| ವಿಶ್ವನಾಥ ಭಟ್ಟ ಗೋಳಿಕೈ ಹಾಗೂ ಶ್ರೀಮತಿ ಮಮತಾ ಭಟ್ಟ ಅವರ ಪ್ರಥಮ ಪುತ್ರಿ ಮೇಧಾ ಹಾಗೂ ಅಸ್ತಾಳದ ಶ್ರೀಮತಿ ವೀಣಾ ಭಟ್ಟ ಹಾಗೂ ನಾರಾಯಣ ರಾ.ಭಟ್ಟ ಅವರ ಪುತ್ರ ರಾಮಕೃಷ್ಣ ಇವರ ವಿವಾಹ ಸಂದರ್ಭದಲ್ಲಿ ಕಣ್ಮರೆಯಾಗಿ ಹೋದ ಸನಾತನ ಆಶಯಗಳು ಮತ್ತೆ ಸಾದೃಶಗೊಳ್ಳಲಿವೆ.
ವೇ|ಮೂ| ವಿಶ್ವನಾಥ ಭಟ್ಟ ಗೋಳಿಕೈ ಪ್ರಸಿದ್ಧ ವೈದಿಕ ವಿದ್ವಾಂಸರು. ಮಹಿಳೆಯರೂ ಮಾತಾ,ಪಿತೃಗಳ ಉತ್ತರಕ್ರಿಯೆ ಮಾಡುವ ಅಧಿಕಾರ ಪಡೆದಿರುವದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿರುವದನ್ನು ಹಲವು ಗ್ರಂಥಗಳ ಅಧ್ಯಯನ ನಡೆಸಿ, ಸಂಶೋಧಿಸಿ,ರಚಿಸಿದ ಸದ್ಗತಿ ಎನ್ನುವ ಮಹತ್ವದ ಕೃತಿ, ಕಪಿಲಾದರ್ಶನ, ಉತ್ತರಕ್ರಿಯಾ ಪ್ರಯೋಗ ಮುಂತಾದ ಕೃತಿಗಳನ್ನು ರಚಿಸಿದವರು.
ತಮ್ಮ ಪುತ್ರಿಯ ವಿವಾಹ ಸಂದರ್ಭದಲ್ಲಿ ಅವರು ವಿವಾಹ ವೇದಿಕೆ, ಯಜ್ಞ ವೇದಿಕೆ, ಸುಭಗ ವೇದಿಕೆ ಹಾಗೂ ಚಿಂತನ ವೇದಿಕೆ ಎನ್ನುವ 4 ವೇದಿಕೆಗಳನ್ನು ಸಿದ್ಧಪಡಿಸಲಿದ್ದಾರೆ. ವಿವಾಹ ವೇದಿಕೆಯಲ್ಲಿ ವಿವಾಹ ಮಹೋತ್ಸವದ ಕಾರ್ಯಕ್ರಮಗಳು ಜರುಗುತ್ತವೆ. ಯಜ್ಞ ವೇದಿಕೆಯಲ್ಲಿ ಗ್ರಹಸ್ಥರಾದವರು ಮಧುರ ದಾಂಪತ್ಯಕ್ಕಾಗಿ ಔಪಾಸನಾ ಅಗ್ನಿ ಉಪಾಸನೆ ಮಾಡಬೇಕು ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ ಪ್ರಕಾರ ಮಮತಾ ಭಟ್ಟ ಮತ್ತು ವಿಶ್ವನಾಥ ಭಟ್ಟ ದಂಪತಿಗಳು ಕಳೆದ 20 ವರ್ಷಗಳಿಗೂ ಹೆಚ್ಚುಕಾಲದಿಂದ ಆರಂಭದಿಂದ, ಈವರೆಗೂ ಪ್ರತಿದಿನ ಅಗ್ನಿಯನ್ನು ಕಾದಿಟ್ಟುಕೊಂಡು ಬಂದು ನಡೆಸಿದ ಔಪಾಸನಾ ಹೋಮ ಮತ್ತು ವೈಶ್ವದೇವ ಹೋಮ ಜರುಗುತ್ತದೆ. ಅಲ್ಲಿ ಸ್ಮಾರ್ತಯಜ್ಞ ಪಾತ್ರೆ, ಪರಿಕರಗಳ ಪರಿಚಯವೂ ಇರುತ್ತದೆ.
ಹಿಂದೆ ವಿವಾಹಗಳು ಗೋವುಗಳ ಸನ್ನಿಧಿಯಲ್ಲೇ ಜರುಗುತ್ತಿತ್ತು ಎನ್ನುವ ಶಾಸ್ತ್ರಗಳ ಉಲ್ಲೇಖದ ಹಿನ್ನೆಲೆಯಲ್ಲಿ ಸಿದ್ಧಗೊಳಿಸಿದ ಸುಭಗ ವೇದಿಕೆಯಲ್ಲಿ ವಿಶ್ವನಾಥ ಭಟ್ಟರ ಮನೆಯಲ್ಲಿ ಸಾಕಿದ 5 ದೇಸಿ ಗೋವುಗಳ ಸಾನಿಧ್ಯವಿರುತ್ತದೆ. ಹಿಂದೆ ಗೋವು ಸಂಪತ್ತು ಎಂದು ಪರಿಗಣಿಸಲಾಗುತ್ತಿತ್ತು. ಭಗ ಅಂದರೆ ಸಂಪತ್ತು. ಒಳ್ಳೆಯ ಸಂಪತ್ತುಗಳಾದ ದೇಸಿಯ ಆಕಳುಗಳನ್ನು ಸಾಕುವುದರಿಂದ ಏನು ಪ್ರಯೋಜನ ಎನ್ನುವ ಸಂದೇಶ ವಾಕ್ಯಗಳು ಈ ವೇದಿಕೆಯಲ್ಲಿರುತ್ತವೆ.
ಈಗಾಗಲೇ ಹಲವು ಮುದ್ರಣಗಳನ್ನು ಕಂಡು, ನಾಡಿನಾದ್ಯಂತ ಪ್ರಸಿದ್ಧವಾಗಿರುವ ಸದ್ಗತಿ, ಕಪಿಲಾ ಗೋವನ್ನು ಹೇಗೆ ಗುರುತಿಸುವದು ಎನ್ನುವ ಕಪಿಲಾದರ್ಶನ ಹಾಗೂ ಉತ್ತರಕ್ರಿಯಾ ಪ್ರಯೋಗ ಕೃತಿಗಳು ಚಿಂತನಾ ವೇದಿಕೆಯಲ್ಲಿರುತ್ತವೆ. ಅಲ್ಲದೇ ಈ ಕೃತಿಗಳ ಕುರಿತು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿ, ಲೇಖನಗಳು ನೋಡುಗರಿಗೆ ಲಭ್ಯವಿರುತ್ತದೆ.
ಬಾಕ್ಸ್
ನಮ್ಮ ಪುತ್ರಿಯ ವಿವಾಹ ಸಂದರ್ಭದಲ್ಲಿ ಇವನ್ನೆಲ್ಲ ಜೋಡಿಸಿರುವದು ಪ್ರದರ್ಶನದ ಉದ್ದೇಶಕ್ಕಲ್ಲ. ಸಹಜವಾಗಿ ಮನೆಯಲ್ಲಿರುವುದೇ ಆಗಿದೆ. ಭಾರತೀಯ ಪರಂಪರೆಯ ಮೌಲ್ಯಯುತವಾದ ಅಂಶಗಳ ಬಗ್ಗೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಲಿ ಎನ್ನುವದು ಆಶಯ. ಆಸಕ್ತರು ಯಾರೂ ಬಂದು ಇವೆಲ್ಲವನ್ನು ವೀಕ್ಷಿಸಬಹುದು. – ವೇ|ಮೂ|ವಿಶ್ವನಾಥ ಭಟ್ಟ ಗೋಳಿಕೈ