ಕುಮಟಾ: ಆದಿಚುಂಚನಗಿರಿ ಮಹಾಸಂಸ್ಥಾನ ಮಿರ್ಜಾನ್ ಶಾಖಾಮಠದ ಬ್ರಹ್ಮಚಾರಿ ಶ್ರೀ ನಿಶ್ಚಲಾನಂದನಾಥಜೀಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್(ರಿ )ನ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಿರ್ಜಾನ್ ಮತ್ತು ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ, ವಸ್ತು ಪ್ರದರ್ಶನ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭ ನಡೆಯಿತು.
ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ರಿಬ್ಬನ್ ಕತ್ತರಿಸಿ, ಜ್ಯೋತಿ ಬೆಳಗಿಸುವುದರ ಮೂಲಕ ಕಲಿಕಾ ಮಾದರಿಗಳ ಪ್ರದರ್ಶನ ಉದ್ಘಾಟಿಸಿದರು. ಕಲಿಕಾ ಮಾದರಿಗಳ ಪ್ರದರ್ಶನದ ಸ್ಪರ್ಧೆಯಲ್ಲಿ ಪೂರ್ವ ಪ್ರಾಥಮಿಕ ವಿಭಾಗ, ಪ್ರಾಥಮಿಕ ವಿಭಾಗ, ಹಿರಿಯ ಪ್ರಾಥಮಿಕ ವಿಭಾಗ, ಪ್ರೌಢಶಾಲಾ ವಿಭಾಗ ಮತ್ತು ಪಿಯುಸಿ ವಿಭಾಗದ ವಿದ್ಯಾರ್ಥಿಗಳು ಕನ್ನಡ, ಹಿಂದಿ, ಇಂಗ್ಲೀಷ್, ವಿಜ್ಞಾನ (ರಸಾಯನ ಶಾಸ್ತ್ರ, ಭೌತಶಾಸ್ತ್ರ, ಜೀವಶಾಸ್ತ್ರ), ಗಣಿತ, ಸಮಾಜ ವಿಜ್ಞಾನ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ಕಲಿಕಾ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ನಿರ್ಣಾಯಕರು ವಿದ್ಯಾರ್ಥಿಗಳ ವಿವಿಧ ಕಲಿಕಾ ಮಾದರಿಗಳನ್ನು ಪರೀಶೀಲಿಸಿ, ವಿದ್ಯಾರ್ಥಿಗಳ ವಿವರಣೆ ನೋಡಿ ಫಲಿತಾಂಶ ನೀಡಿದರು.
ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್.ಭಟ್, ಶಿಕ್ಷಣ ಸೌರಭ ಮತ್ತು ರಾಜ್ಯಮಟ್ಟದ ಗುರುಭೂಷಣ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರಿಮತಿ ಕಲ್ಪನಾ ನಾಯಕ, ಬಿಜಿಎಸ್ ಶಾಲಾ ಶೈಕ್ಷಣಿಕ ನಿರ್ದೇಶಕರಾದ ಎಂ. ಟಿ. ಗೌಡ, ಹೊನ್ನಾವರ ಆರಕ್ಷಕ ಠಾಣೆಯ ಪಿ.ಎಸ್. ಆಯ್ ಸಂಪತ್ ಕುಮಾರ ಜ್ಯೋತಿ ಬೆಳಗಿಸಿ ಪ್ರಮಾಣಪತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿದರು.
ನಂತರದಲ್ಲಿ ಶ್ರೀಗಳು ತಮ್ಮ ಆಶೀರ್ವಚನದ ಭಾಷಣದಲ್ಲಿ ಮಾತನಾಡುತ್ತಾ ವಿದ್ಯಾರ್ಥಿಗಳಿಗೆ ಪಾಲಕರು ಮನೆಯಲ್ಲಿ ಉತ್ತಮ ಸಂಸ್ಕಾರ ನೀಡಬೇಕು. ಶಿಕ್ಷಕರು ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ತಿದ್ದಿ ತೀಡಿ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ಅದು ಶಿಕ್ಷಕರ ಕರ್ತವ್ಯ. ನಿಮ್ಮ ಮಗುವನ್ನು ಶಾಲೆಗೆ ಬಿಡುವುದಷ್ಟೇ ಅಲ್ಲದೆ ಪಾಲಕರು ತಮ್ಮ ಮಗುವಿನ ಪ್ರಗತಿಯ ಬಗ್ಗೆ ಕಾಲಕಾಲಕ್ಕೆ ಗಮನಿಸಬೇಕು, ಅಂದಾಗ ಮಾತ್ರ ನಿಮ್ಮ ಮಗು ಉತ್ತಮ ಸಾಧನೆ ಮಾಡಲು ಸಾಧ್ಯ ವಿದ್ಯಾಭ್ಯಾಸ ಮಾಡುವಾಗ ಪಡೆದ ಜ್ಞಾನವೊಂದೇ ಜೀವನದ ಯಶಸ್ವಿಗೆ ಸಾಕಾಗುವುದಿಲ್ಲ ತಮ್ಮ ಮುಂದಿನ ಜೀವನದ ಪಯಣಕ್ಕೆ ಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಲು ಬುದ್ಧಿವಂತಿಕೆಯ ಅವಶ್ಯಕತೆಯನ್ನು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಂದ್ರ ಎಲ್. ಭಟ್ ಮಾತನಾಡಿ ಬಿಜಿಎಸ್ ಸೆಂಟ್ರಲ್ ಸ್ಕೂಲ್, ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ, ಬಿಜಿಎಸ್ ಸಂಸ್ಥೆಯಲ್ಲಿ ವಿದ್ಯಾರ್ಥಿ ವಿನಮ್ರವಾಗಿ ಭಾಗಿಯಾಗಿ ಪ್ರಶಸ್ತಿ ಸ್ವೀಕರಿಸುವುದು ನೋಡಿ ತುಂಬಾ ಸಂತಸವಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಮೂಡಿಸಲು ಬಿಜಿಎಸ್ ಸೆಂಟ್ರಲ್ ಸ್ಕೂಲ್ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅಲ್ಲದೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ಕಲೋತ್ಸವ, ಕ್ರೀಡೋತ್ಸವ ಮತ್ತು ವಿಜ್ಞಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿದೆ ಎಂದರು.
ಶಿಕ್ಷಣ ಸೌರಭ ಮತ್ತು ರಾಜ್ಯಮಟ್ಟದ ಗುರುಭೂಷಣ ಪ್ರಶಸ್ತಿ ವಿಜೇತ ಶಿಕ್ಷಕಿ ಶ್ರಿಮತಿ ಕಲ್ಪನಾ ನಾಯಕ ಅನೇಕ ಪೌರಾಣಿಕ ಮತ್ತು ಸಾಮಾಜಿಕ ನಿದರ್ಶನಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಹೊನ್ನಾವರ ಆರಕ್ಷಕ ಠಾಣೆಯ ಪಿ.ಎಸ್. ಆಯ್ ಸಂಪತ್ ಕುಮಾರ ಬಿಜಿಎಸ್ ಸಂಸ್ಥೆಯ ಶಿಕ್ಷಕ ವೃಂದ ವಿದ್ಯಾರ್ಥಿಗಳ ಏಳಿಗೆಗಾಗಿ ದಿನವಿಡೀ ಶ್ರಮಿಸುತ್ತಿದೆ. ಪಾಲಕರು ಕೂಡ ಮಕ್ಕಳಿಗೆ ಸಂಸ್ಕಾರ ಮತ್ತು ಸೂಕ್ತ ಮಾರ್ಗದರ್ಶನ ಮಾಡಿ ಅವರ ವ್ಯಕ್ತಿತ್ವ ರೂಪುಗೊಳ್ಳಲು ಸಹಕರಿಸಬೇಕೆಂದು ಕರೆ ನೀಡಿದರು.
ಬಿಜಿಎಸ್ ಶಾಲಾ ಶೈಕ್ಷಣಿಕ ನಿರ್ದೇಶಕರಾದ ಎಂ. ಟಿ. ಗೌಡರವರು ಪ್ರತಿಯೊಬ್ಬ ಪಾಲಕ ತನ್ನ ಮಗು ಮಾಡಿರು ಕಲಿಕಾ ಮಾದರಿ ನೋಡಲು ಮತ್ತು ಪ್ರಶಸ್ತಿ ಪಡೆಯುವದನ್ನು ನೋಡಲು ಶಾಲೆಗೆ ಬರಬೇಕು, ಅಂದಾಗ ಮಾತ್ರ ಮಕ್ಕಳಲ್ಲಿ ನವಚೈತನ್ಯ ಮೂಡಿ ಉತ್ತಮ ಸಾಧನೆಗೆ ಸಹಕಾರಿ. ಪಾಲಕ, ಬಾಲಕ, ಶಿಕ್ಷಕ ಮತ್ತು ರಕ್ಷಕರ ಮಹತ್ವದ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಬಿಜಿಎಸ್ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತುಉದ್ಯಮಿಯಾಗಿರುವ ವಿಷ್ಣು ಪಟಗಾರ ಇಂದು ಎಲ್ಲೆಡೆ ಆಹಾರ ಕಲುಷಿತವಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಆಹಾರವನ್ನು ಸೇವಿಸಬೇಕು, ಅಂದಾಗ ಮಾತ್ರ ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿ ಬೆಳೆಯಲು ಸಾಧ್ಯ ಎಂದು ಕರೆ ನೀಡಿದರು.
ಬಿಜಿಎಸ್ ಪೂರ್ವಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ರಂಜಿತಾ ಗೌಡ, ಬಿಜಿಎಸ್ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್, ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲೆ ಶ್ರಿಮತಿ ರೇಷ್ಮಾ ಬಾಡ್ಕರ್ ತಮ್ಮ ತಮ್ಮ ವಿಭಾಗದ ವಾರ್ಷಿಕ ವರದಿ ವಾಚಿಸಿದರು.
ಇದೇ ಸಂದರ್ಭದಲ್ಲಿ ಪೂಜ್ಯರು 2023-24ನೆ ಸಾಲಿನ ಸಾಲಿನ ಸಿಬಿಎಸ್ಇ 10ನೇ ತರಗತಿಯಲ್ಲಿ ಉನ್ನತ ಶ್ರೇಣಿ ಪಡೆದ ಹಾಗೂ 2024-25ರ ರಾಜ್ಯಮಟ್ಟದ, ಜಿಲ್ಲಾಮಟ್ಟದ ಮತ್ತು ಶಾಲಾ ಮಟ್ಟದ ಕ್ರೀಡೆ, ಯೋಗ, ಕಲೆ, ಸಂಗೀತ, ಶ್ಲೋಕ ಪಠಣ, ರಾಷ್ರೀಯ ಮಟ್ಟದ ಬೆಬ್ರಾಸ್ ಕಂಪ್ಯೂಟೇಶನಲ್ ಥಿಂಕಿಂಗ್ ಪರೀಕ್ಷೇಯಲ್ಲಿ ಅತ್ಯುತ್ತಮ ಸಾಧನೆ ತೋರಿ ಪ್ರಶಸ್ತಿ ವಿಜೇತರಾದ ಬಿಜಿಎಸ್ ಸೆಂಟ್ರಲ್ ಸ್ಕೂಲಿನ ವಿದ್ಯಾರ್ಥಿಗಳಿಗೆ, ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ಪಾಲಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಲಚಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಹನಿ ಮತ್ತು ಸಂಗಡಿಗರ ಜೊತೆ ಸರ್ವರು ನಾಡಗೀತೆ ಹಾಡಿದರು. ಆದಿಶೇಷ ಮತ್ತು ಸಂಗಡಿಗರು ವೇದಘೋಷ ಮೊಳಗಿಸಿದರು. ಈಶಾನಿ ಸ್ವಾಗತಿಸಿದಳು. ಕುಮಾರಿ ಪೃಥ್ವಿ ಪ್ರಭು ಸಂಸ್ಕೃತದಲ್ಲಿ, ಕುಮಾರಿ ಮನಸ್ವಿ ಕನ್ನಡದಲ್ಲಿ, ಕುಮಾರಿ ಲಿಖಿತಾ ಆಂಗ್ಲ ಭಾಷೆಯಲ್ಲಿ, ಕುಮಾರಿ ಆಲ್ಪಿಯಾ ಖಾನ್ ಹಿಂದಿಯಲ್ಲಿ ಕಾರ್ಯಕ್ರಮ ನಿರೂಪಿಸಿ ಭಾಷಾ ವೈಶಿಷ್ಟದ ಮಹತ್ವವನ್ನು ಎಲ್ಲೆಡೆ ಪಸರಿಸಿದರು. ಕುಮಾರಿ ಅಭೀಜ್ಞಾ ಗೌಡ ವಂದಿಸಿದಳು. ಶಾಲಾ ವಿದ್ಯಾರ್ಥಿಗಳ ಭಜನಾ ಕಾರ್ಯಕ್ರಮ ಜನಮನಸೂರೆಗೊಂಡಿತು. ಹಿರಿಯ ಶಿಕ್ಷಕರಾದ ಎಂ. ಜಿ. ಹಿರೇಕುಡಿ, ಶ್ರೀಮತಿ ಲೀನಾ ಎಂ. ಗೊನೇಹಳ್ಳಿ, ಪಾಲಕರು, ಸಮಸ್ತ ನಾಗರಿಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು, ಸಮಸ್ತ ವಿದ್ಯಾರ್ಥಿಗಳು ಕಾರ್ಯಕ್ರಮದ ಅದ್ಭುತ ಯಶಸ್ಸಿಗೆ ಕಾರಣೀಭೂತರಾದರು.