ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಸಮಾರೋಪ | ಅಜ್ಜೀಬಳ ಪುರಸ್ಕಾರ ಪ್ರದಾನ
ಹೊನ್ನಾವರ : ಎಲ್ಲಾ ಕ್ಷೇತ್ರದಲ್ಲಿ, ಎಲ್ಲಾ ಸಂದರ್ಭದಲ್ಲಿ ಪತ್ರಕರ್ತರ ಕೊಡುಗೆ ಇದೆ. ಪತ್ರಕರ್ತರೊಂದಿಗೆ ನಾವೆಲ್ಲ ಸೇರಿ ಸಮಾಜ ಜೋಡಿಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯಾವುದೇ ವಿಭಾಗದಲ್ಲಿ ಎಷ್ಟೇ ರಹಸ್ಯವನ್ನು ಮುಚ್ಚಿಟ್ಟರೂ ಮಾಧ್ಯಮದ ಮೂಲಕ ರಹಸ್ಯ ಹೊರಬೀಳುತ್ತದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮವು ಗಟ್ಟಿತನವನ್ನು ಹೊಂದಿದೆ ಎಂದರು.
ಮತ್ತೊರ್ವ ಅತಿಥಿ ಸೆಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದದ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಮಾತನಾಡಿ ಊರಿನ, ಅಭಿವೃದ್ಧಿ, ತಾಲೂಕು, ಜಿಲ್ಲೆಯ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾಲು ಬಲು ದೊಡ್ಡದಿದೆ. ಸರಕಾರ ಪತ್ರಕರ್ತರಿಗೆ ಸವಲತ್ತು ನೀಡಲು ಹಿಂಜರಿಯುತ್ತದೆ. ಸಾರ್ವಜನಿಕ ಸಮಸ್ಯೆಯನ್ನು ಪತ್ರಕರ್ತರು ಬರೆದು ಆದ ಮೇಲೆ ಅಭಿವೃದ್ಧಿ ಆಗುತ್ತಿದೆ. ಸರಕಾರ ಎಲ್ಲರನ್ನು ಹುಡುಕಿದೆ. ಆದರೆ ಪತ್ರಕರ್ತರು, ಪತ್ರಿಕೆ ಹಂಚುವವರನ್ನು ಅಧ್ಯಯನ ಮಾಡಿ, ಅವರ ಕಷ್ಟ ಸುಖ ಏನು ಎಂದು ತಿಳಿದು ಅವರಿಗೆ ಸೌಲಭ್ಯ ಒದಗಿಸಿ ಕೊಡಬೇಕು ಎಂದು ಸರಕಾರವನ್ನು ಒತ್ತಾಯ ಮಾಡುತ್ತೇನೆ. ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ಹೋರಾಟ ನಡೆಯುತ್ತಿದೆ. ಪತ್ರಿಕೆಯಲ್ಲಿಯು ಬರುತ್ತಿದೆ. ಆಸ್ಪತ್ರೆ ಮತ್ತು ಜನರ ಪರವಾಗಿ ಮತ್ತಷ್ಟು ವರದಿ ಮಾಡಿ ಸಹಕಾರ ಕೊಡಬೇಕು. ಇ-ಸ್ವತ್ತು ಸಮಸ್ಯೆ ತುಂಬಾ ಆಗಿದೆ. ಬಡವನಿಗೆ ಸಾಲ ಕೊಡಲು ಆಗುತ್ತಿಲ್ಲ. ಶರಾವತಿ ನದಿಗೆ ಮತ್ತೊಂದು ಸೇತುವೆ ಮಾಡಬೇಕು. ಪತ್ರಕರ್ತರು ಸಾರ್ವಜನಿಕವಾಗಿ ಮಾಡುತ್ತಿರುವ ಸೇವೆಗೆ ಚಿರ ಋಣಿ ಎಂದರು.
ಮಾಧ್ಯಮ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಉತ್ತರ ಕನ್ನಡ ಜಿಲ್ಲಾ ಪತ್ರಿಕಾ ಮಂಡಳಿ ಐದು ದಶಕಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಗ್ರಾಮೀಣ ಪ್ರದೇಶದಲ್ಲಿ ಪತ್ರಕರ್ತರು ಕೆಲಸ ಮಾಡುವುದು ಸವಾಲಿನ ಕೆಲಸ. ಅಂತಹ ಸವಾಲನ್ನು ಮೆಟ್ಟಿನಿಂತು ಈ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ. ಗ್ರಾಮೀಣ ಪತ್ರಕರ್ತರಿಗೆ ಹೆಚ್ಚಿನ ಸೌಲಭ್ಯಗಳು ದೊರಕುವಂತಾಗಬೇಕು. ಸಮಯಕ್ಕೆ ತಕ್ಕಂತೆ ಬದಲಾವಣೆಯನ್ನು ಕಾಣಬೇಕು. ಕ್ರಿಯಾತ್ಮಕವಾಗಿ ಸುಂದರ ಸಮಾಜವನ್ನು ಕಟ್ಟಬೇಕು ಎಂದರು.
ಉದ್ಯಮಿ ಪದ್ಮನಾಭ ಶ್ಯಾನಭಾಗ, ಸಹಾಯಕ ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಮಾತನಾಡಿದರು. ಹೊನ್ನಾವರದ ಪತ್ರಕರ್ತ ಸತೀಶ ತಾಂಡೇಲ ಅವರಿಗೆ ಜಿ.ಎಸ್.ಹೆಗಡೆ ಅಜ್ಜೀಬಳ ಪುರಸ್ಕಾರ ನೀಡಿ ಗೌರವಿಸಲಾಯಿತು.
ಹಿರಿಯ ಪತ್ರಕರ್ತರು, ಜಿಲ್ಲಾ ಸಂಘದ ಪದಾಧಿಕಾರಿಗಳು, ಕಾರ್ಯಕಾರಿಣಿ ಸಮಿತಿ ಸದಸ್ಯರು, ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹೊನ್ನಾವರ ತಾಲೂಕಿನ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ನಾಗರಾಜ್ ಭಟ್ಟ ಸಿದ್ದಾಪುರ ಇದ್ದರು.