
ಶಿರಸಿ : ನಮ್ಮ ಭಾರತ ದೇಶದ ಬೇರೆ ಬೇರೆ ಭಾಗಗಳಲ್ಲಿ ನಾವು ಹಿಂದೂ ಎನ್ನುವ ಕಾರಣಕ್ಕೆ ಹತ್ಯೆ ಮಾಡಲಾಗುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆ ಇಂದಲ್ಲಾ ನಾಳೆ ನಿಶ್ಚಿತ ಎನ್ನುವ ಮಟ್ಟಿಗೆ ಕಾಲ ಬಂದು ನಿಂತಿದೆ. ಆದರೆ ಹಿಂದು ಎಂದಿಗೂ ಹೆದರುವವನಲ್ಲ. ಬೆದರಿಕೆಗೆ ಬಗ್ಗುವವನಲ್ಲ. ಗರ್ವದಿಂದ, ಧೈರ್ಯದಿಂದ ನಾವು ಹಿಂದು ಎನ್ನುತ್ತೇವೆ. ಏನೇ ಬಂದರೂ ಎದುರಿಸುತ್ತೇವೆ ಎಂದು ವಿಜಯನಗರ ಪ್ರಾಂತ ಕಾರ್ಯವಾಹಿಕಾ ವೇದಾ ಕುಲಕರ್ಣಿ ಹೇಳಿದರು.
ಅವರು ಶನಿವಾರ ನಗರದ ವಿಕಾಸಾಶ್ರಮ ಮೈದಾನದಲ್ಲಿ ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ನಡೆದ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಶಿಕ್ಷಾವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಭಗವಾಧ್ವಜಕ್ಕೆ ಪೂಜೆ ಎನ್ನುವುದು ಕೇವಲ ಪುಷ್ಪಾರ್ಚನೆಗೆ ಸೀಮಿತವಾಗಬಾರದು. ನಮ್ಮ ಹಿಂದೂ ಧರ್ಮದ ಮಾನಬಿಂದುವಾಗಿರುವಂತಹ ಭಗವಾಧ್ವಜದ ರಕ್ಷಣೆ ನಮ್ಮ ಆದ್ಯತೆಯಾಗಬೇಕು. ಭಗವೆಗೆ ಕೇವಲ ಪೂಜೆ ಸಾಕಾಗದು. ಹೃದಯ ಮಂದಿರದಲ್ಲಿ ಇಟ್ಟುಕೊಂಡು ಪೂಜೆಗೈಯ್ಯಬೇಕು. ಸನಾತನ ಧರ್ಮದ ಪ್ರತೀಕವಾಗಿರುವ ಭಗವಾಧ್ವಜಕ್ಕೆ ನಾವು ಶುದ್ಧ ಮನಸ್ಸಿನಿಂದ ನಮನ ಸಲ್ಲಿಸಬೇಕು ಎಂದರು.
ಸಂಘಟನೆ ಗಟ್ಟಿಯಾದರೆ ಮಾತ್ರ ಸಮಾಜದ ಕೆಲಸ ಸುಲಭವಾಗುತ್ತದೆ. ಭಾರತದಲ್ಲಿಯ ಹಿಂದೂಗಳ ಜೀವನ ಪದ್ಧತಿ ವಿಶ್ವಕ್ಕೆ ಮಾದರಿಯಾಗಬೇಕು. ಭಾರತದ ವಿಶ್ವಕ್ಕೆ ಗುರುವಾದರೆ ಮಾತ್ರ, ವಿಶ್ವದಲ್ಲಿ ಶಾಂತಿ ನೆಲೆಸುತ್ತದೆ. ಜಗತ್ತು ಭಾರತದೆಡೆಗೆ ಆಶಾಭಾವದಿಂದ ನೋಡುತ್ತಿದ್ದಾರೆ. ಇದು ನಮಗೊಂದು ಸಂಕ್ರಮಣ ಕಾಲವಾಗಿದೆ. ನಮ್ಮ ಧರ್ಮದ ರಕ್ಷಣೆ ಅತ್ಯಂತ ಅವಶ್ಯಕಾವಗಿದೆ. ಗೃಹಿಣಿ, ವಿದ್ಯಾರ್ಥಿಯಾಗಿ ಧರ್ಮದ ರಕ್ಷಣೆಯಲ್ಲಿ ತೊಡಗುವುದು ಅನಿವಾರ್ಯ. ನಮ್ಮ ಧರ್ಮದಲ್ಲಿ ನಾವು ಬದುಕುವುದೇ ಬಹುದೊಡ್ಡ ತಪಸ್ಸಾಗಿದೆ.
ಇತ್ತಿಚಿನ ದಿನದಲ್ಲಿ ಮನೆಯಲ್ಲಿನ ಹಿರಿಯರಿಂದ ಮಕ್ಕಳಿಗೆ ಸಂಸ್ಕಾರಗಳು ದೊರೆಯುತ್ತಿಲ್ಲ. ಈಗಿನ ಧಾರಾವಾಹಿ ಮಾಧ್ಯಮದಿಂದ ಮನೆಗಳು ಚಿಕ್ಕದಾಗುತ್ತಿದೆ. ಕುಟುಂಬ ವ್ಯವಸ್ಥೆಯನ್ನು ಛಿದ್ರಗೊಳಿಸುವ ಧಾರಾವಾಹಿಗಳಿಗೆ ಇಂದು ಬಹುತೇಕ ಗೃಹಿಣಿಯರು ದಾಸರಾಗಿದ್ದಾರೆ. ಮಕ್ಕಳ ವಿಕಾಸಕ್ಕೆ ಅವಕಾಶ ಕೊಡುವ ವಾತಾವರಣ ಪ್ರತಿ ಮನೆಯಲ್ಲಿ ನಿರ್ಮಾಣ ಆಗಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಮ್ಮದಾಗಿಸಿಕೊಂಡು ಸಂಸ್ಕಾರಪೂರ್ಣ ಸಮಾಜವನ್ನು ನಿರ್ಮಾಣ ಮಾಡಬೇಕೆಂದರು.
ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ್ದ ಡಾ. ಸ್ವಾತಿ ವಿನಾಯಕ ಮಾತನಾಡಿ, ರಾಷ್ಟ್ರಸೇವಿಕೆಯರ ಕಾರ್ಯದ ಕುರಿತು ಸಂತಸವಿದೆ. ಭಾರತದ ಸಂಸ್ಕೃತಿಗಳ ಕುರಿತಾಗಿ ಅಭಿಮಾನವನ್ನು ಮೂಡಿಸುವ ಕೆಲಸ ಸಮಿತಿಯಿಂದಾಗಿದೆ. ಸಮಿತಿಯ ಕಾರ್ಯ ನಿರಂತರವಾಗಿ ಪ್ರವಹಿಸಲಿ ಎಂದರು.
ಇದಕ್ಕೂ ಪೂರ್ವದಲ್ಲಿ ಗಣವೇಷಧಾರಿ ಸೇವಿಕೆಯರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಶಿಕ್ಷಾರ್ಥಿಗಳಿಂದ ವರ್ಗದಲ್ಲಿ ಕಲಿತ ಶಾರೀರಿಕ ಶಿಕ್ಷಣಗಳ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ವರ್ಗಾಧಿಕಾರಿ ಮಹಾಲಕ್ಷ್ಮಿ ಹೆಗಡೆ, ಪ್ರಾಂತ ಸಹ ಕಾರ್ಯವಾಹಿಕಾ ಆಶಾ ನಾಯಕ್, ಪ್ರಾಂತ ಸಂಪರ್ಕ ಪ್ರಮುಖ್ ವಾಣಿ ರಮೇಶ್, ಪ್ರಾಂತ ಘೋಷ್ ಪ್ರಮುಖ್ ಸುಧಾ ದೇಸಾಯಿ, ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಶ್ರೀದೇವಿ ಭಟ್, ಪ್ರಾಂತ ಶಾರೀರಿಕ್ ಪ್ರಮುಖ್ ಸಾವಿತ್ರಿ ಭಾರದ್ವಾಜ್, ಪ್ರಾಂತ ಸಹ ಶಾರೀರಿಕ್ ಪ್ರಮುಖ್ ಭೀಮಾ ಸೇರಿದಂತೆ ಇನ್ನಿತರರು ಇದ್ದರು. ಕಾರ್ಯಕ್ರಮದಲ್ಲಿ ಶ್ರೀಗೌರಿ ಅಗಸಾಲ ವಯಕ್ತಿಕ ಗೀತೆ ಹೇಳಿದರು. ಶ್ರೀದೇವಿ ಭಟ್ ವರದಿ ವಾಚಿಸಿದರೆ, ಶಿರಸಿ ಜಿಲ್ಲಾ ಕಾರ್ಯವಾಹಿಕಾ ಶ್ರೀದೇವಿ ದೇಶಪಾಂಡೆ ವಂದಿಸಿದರು. ಸಂಚಲನದ ವೇಳೆ ಶಿರಸಿ ನಗರದ ಸಾರ್ವಜನಿಕರು ಪ್ರಮುಖ ರಸ್ತೆಗಳನ್ನು ಸಿಂಗರಿಸಿ, ಪವಿತ್ರ ಭಗವಾಧ್ವಜಕ್ಕೆ ಪುಷ್ಪಾರ್ಚನೆ ಮಾಡಿ ಗೌರವಿಸಿದರು.