ಸ್ಕೊಡ್ವೆಸ್ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ | ಸಾಧಕರಿಗೆ ಸನ್ಮಾನ: ಬೈಕ್ ರ್ಯಾಲಿ
ಶಿರಸಿ: ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿಭಾಯಿಸಿದಾಗ ಮಾತ್ರ ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯಲು ಅರ್ಹರಾಗುತ್ತೇವೆ ಎಂದು ಸುಯೋಗಾಶ್ರಮದ ಮುಖ್ಯಸ್ಥೆ ಹಾಗೂ ಸಮಾಜ ಸೇವಕಿ ಲತಿಕಾ ಭಟ್ ಅಭಿಪ್ರಾಯಪಟ್ಟರು.
ಇಲ್ಲಿನ ಸ್ಕೊಡ್ವೆಸ್ ಸಂಸ್ಥೆಯ ಆವಾರದಲ್ಲಿ ವಿಜೃಂಭಣೆಯಿಂದ ನಡೆದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಇವರು ಸಾಮಾಜಿಕ ಕಾರ್ಯವೂ ಸಹ ದೇಶ ಸೇವೆಯ ಮಾದರಿಯಾಗಿದ್ದು, ಸ್ಕೊಡ್ವೆಸ್ ಸಂಸ್ಥೆಯ ಕಾರ್ಯವನ್ನು ಅಭಿನಂದಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ. ಕೂರ್ಸೆ, ಸಹಸ್ರಾರು ಜನರ ತ್ಯಾಗ, ಬಲಿದಾನಗಳ ಮೂಲಕ ಹಾಗೂ ಸಂವಿಧಾನಾತ್ಮಕವಾಗಿ ದೊರೆತ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗದಂತೆ ಜಾಗೃತೆ ವಹಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ, ಮುಖ್ಯ ಹಣಕಾಸು ಮತ್ತು ಆಡಳಿತಾಧಿಕಾರಿ ಸರಸ್ವತಿ ಎನ್. ರವಿ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಕೆ.ಎನ್.ಹೊಸಮನಿ, ದಯಾನಂದ ಅಗಾಸೆ ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮದ ನಂತರ ಪೋಲೀಸ್ ಇಲಾಖೆಯ ಸಹಕಾರದೊಂದಿಗೆ ದೇಶ ಭಕ್ತಿಯ ಘೋಷಣೆಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ತಿರಂಗಾ ಬೈಕ್ ರ್ಯಾಲಿಯನ್ನು ನಡೆಸಿ, ಸಿಹಿ ವಿತರಿಸಿ ವಿಶಿಷ್ಟವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.