Slide
Slide
Slide
previous arrow
next arrow

‘ಬ’ ಖರಾಬದಿಂದ ಬೆಟ್ಟ ಭೂಮಿ ಮುಕ್ತಗೊಳಿಸಲು ಆಗ್ರಹ

300x250 AD

ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಉ.ಕ. ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟ ಮನವಿ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಮತ್ತು ಸಾಂಬಾರ ಬೆಳೆಯ ಭಾಗಾಯತ ಕ್ಷೇತ್ರಕ್ಕೆ ಸಂಬಂಧಿಸಿದ ಬೆಟ್ಟ ಭೂಮಿ ಪಹಣಿಯಲ್ಲಿ ‘ಬ’ ಖರಾಬ್ ಅನ್ನು ದುರಸ್ಥಿಗೊಳಿಸಿ ಖರಾಬ್ ದಿಂದ ಬೆಟ್ಟಭೂಮಿಯನ್ನು ಮುಕ್ತಗೊಳಿಸುವಂತೆ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲು ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಕ್ಕೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಹಾಗೂ ಮನವಿ ಸಲ್ಲಿಸಲಾಗಿದೆ.

ಶನಿವಾರ ಸಾಗರದ ಸಂತೆ ಮೈದಾನದಲ್ಲಿ ನಡೆದ ಅಡಿಕೆ ಬೆಳೆಗಾರರ ಬೃಹತ್ ಸಮಾವೇಶದಲ್ಲಿ ಉತ್ತರ ಕನ್ನಡ ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಒಕ್ಕೂಟವಾದ ಕೃಷಿ, ಕೃಷಿಕ, ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಉತ್ತರ ಕನ್ನಡ ಜಿಲ್ಲೆಯ ಬೆಟ್ಟ ಭೂಮಿ ಬಳಕೆದಾರರ ಪರವಾಗಿ ಮನವಿ ಮಾಡಿದೆ.
ಉತ್ತರಕನ್ನಡ ಜಿಲ್ಲೆಯೂ ಸೇರಿದಂತೆ ರಾಜ್ಯದ ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಕೃಷಿಕರಿಗೆ 18ನೇ ಶತಮಾನದಲ್ಲಿ(1869) ಅಡಿಕೆ ಮತ್ತು ಸಾಂಬಾರ ಬೆಳೆಗಳ ಭೂಮಿಯ ಅಭಿವೃದ್ಧಿಗಾಗಿ ಹಾಗೂ ತೋಟಿಗ ಕೃಷಿಗೆ ಅತ್ಯವಶ್ಯಕವಾದ ಅರಣ್ಯ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ನಿಗದಿಪಡಿಸಿದ ಭೂಮಿಯನ್ನು ಬ್ರಿಟಿಷ್ ಆಳ್ವಿಕೆಯಲ್ಲಿಯೇ ನೀಡಲಾಗಿದೆ.

ಕಾನು, ಕುಮ್ಕಿ, ಜಮ್ಮಾ, ಬಾನೆ, ಎನ್ನುವ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಟಡುವ ಈ ಭೂಮಿಯನ್ನು ನಮ್ಮ ಉತ್ತರಕನ್ನಡ ಜಿಲ್ಲೆಯಲ್ಲಿ ‘ಬೆಟ್ಟ’ವೆಂದು ಕರೆಯಲಾಗುತ್ತಿದೆ. ಭಾಗಾಯ್ತ ಭೂಮಿಯ ಜೊತೆ ಬೆಟ್ಟಭೂಮಿಗೂ ತೀರ್ವೆ ಆಕರಣೆ ಆಗುತ್ತಿರುವುದರಿಂದ ಇತರ ಭೂಮಿಗಳಿಗಿಂತ ‘ಬೆಟ್ಟ’ ಭೂಮಿಯು ಉತ್ತರಕನ್ನಡ ಜಿಲ್ಲೆಯಲ್ಲಿ ವೈಶಿಷ್ಟ್ಯತೆಯನ್ನು ಹೊಂದಿದೆ. ಅಲ್ಲದೇ 1923ನೇ ಇಸ್ವಿಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಅರಣ್ಯ ಹಕ್ಕುಗಳಿಗೆ ಸಂಬಂಧಿಸಿ ಮಂಜೂರಾತಿ ನಿಯಮ ರೂಪಿಸಿ ನಿರ್ದಿಷ್ಟ ಪ್ರಮಾಣದ ಬೆಟ್ಟ ಭೂಮಿಗಳನ್ನು ಅವುಗಳ ಉಪಯೋಗ ಪಡೆದುಕೊಳ್ಳಲು ನಿಗದಿಪಡಿಸಿದ ಅಡಿಕೆ ಕ್ಷೇತ್ರಕ್ಕೆ ಅಧಿಕೃತವಾಗಿ ಪಹಣಿಯಲ್ಲಿ ಸೂಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಬೆಟ್ಟಭೂಮಿ ಹಾಗೂ ಅಡಿಕೆ ಕ್ಷೇತ್ರಗಳು ಒಂದಕ್ಕೊಂದು ಅವಿನಾಭಾವ ಸಂಬಂಧ ಹೊಂದಿದ್ದು, ಇಲ್ಲಿಯ ಕೃಷಿಕರು ಇದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿದ್ದಾರೆ. ಈ ರೀತಿಯಲ್ಲಿ ಆಯಾ ಅಡಿಕೆ ಭಾಗಾಯ್ತ ಕ್ಷೇತ್ರಕ್ಕೆ ಬಿಟ್ಟ ಬೆಟ್ಟ ಭೂಮಿಯನ್ನು ಪಹಣಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಕೃಷಿಕರು ಈ ಭೂಮಿಗೂ ಸಹ ಭಾಗಾಯ್ತ ತೀರ್ವೆಯಲ್ಲಿ ಹೆಚ್ಚಿನ ತೀರ್ವೆ ಸೇರಿಸಿ ತೀರ್ವೆ ತುಂಬುತ್ತಿದ್ದಾರೆ. ಈ ಬೆಟ್ಟ ಭೂಮಿಗಳು ಅಸೈನ್ಡ್ ಭೂಮಿಯಾಗಿದ್ದು, ಅದಕ್ಕೆ ಸಂಬಂಧಪಟ್ಟ ತೋಟಿಗ ಕೃಷಿಕನು ವಹಿವಾಟುದಾರನಾಗಿರುತ್ತಾನೆ. ಬೆಟ್ಟ ಭೂಮಿಗೂ ತೀರ್ವೆ ಆಕರಣೆ ಆಗುತ್ತಿರುವುದರಿಂದ ಅದೂ ಕೂಡ ಮಾಲ್ಕಿ ಜಮೀನಿನ ಒಂದು ರೂಪವೇ ಆಗಿರುತ್ತದೆ. ಕಾರಣ ಅಸೈನ್ಡ್ ಆದ ಬೆಟ್ಟ ಭೂಮಿಯ ಕ್ಷೇತ್ರವನ್ನು ‘ಬ’ ಖರಾಬಿಗೆ ಒಳಪಡಿಸಲು ಬರಲಾರದು.
2013ಕ್ಕಿಂತಲೂ ಪೂರ್ವದಲ್ಲಿ ಬೆಟ್ಟಭೂಮಿಗಳನ್ನು ಯಾವುದೇ ಖರಾಬ ಕ್ಷೇತ್ರಕ್ಕೆ ಒಳಪಡಿಸುತ್ತಿರಲಿಲ್ಲ. ಆದರೆ ಸರ್ಕಾರವು 2012ರಲ್ಲಿ ಕಂದಾಯ ಇಲಾಖೆಯು ಪಹಣಿ ಪತ್ರಿಕೆ ಸರಿಪಡಿಸುವ ಸುತ್ತೋಲೆಗೆ ಅನುಗುಣವಾಗಿ ಬೆಟ್ಟಭೂಮಿಯ ಪಹಣಿಯ ಕಾಲಂ ನಂ.3ರಲ್ಲಿ ವಿಸ್ತೀರ್ಣವನ್ನು ‘ಬ’ ಖರಾಬ್ ಎಂದು ಹಾಗೂ ಕಾಲಂ ನಂ.9ರಲ್ಲಿ ವಿಸ್ತೀರ್ಣವನ್ನು ಶೂನ್ಯಗೊಳಿಸಿದ್ದು, ಆಕಾರ ಬಂದ್ ಗೆ ಅನುಗುಣವಾಗಿ ಶಿರಸಿ ಉಪವಿಭಾಗ ಮಟ್ಟದಲ್ಲಿ ಮಾತ್ರ ಬದಲಾವಣೆ ಕೈಗೊಂಡಿದೆ.

1965ಕ್ಕಿಂತಲೂ ಹಿಂದೆ ಗ್ರಾಮ ನಮೂನೆ ನಂ.1ರಲ್ಲಿ ಹಾಗೂ ಮ್ಯುಟೇಶನ್ ಎಂಟ್ರಿಯಲ್ಲಿ ಯಾವುದೇ ಖರಾಬಿಗೆ ಒಳಪಡದ ಬೆಟ್ಟ ಭೂಮಿಯನ್ನು ತದನಂತರದಲ್ಲಿ ಏಕಾಏಕಿ ಆಕಾರ್‌ಬಂದ್ ನಲ್ಲಿ ಬ ಖರಾಬಿಗೆ ಒಳಪಡಿಸಿ ಅದರ ಆಧಾರದ ಮೇಲೆ ಬದಲಾವಣೆ ಕೈಗೊಳ್ಳಲಾಗಿದೆ. ಬದಲಾವಣೆಗೊಂಡ ಈ ಕ್ರಮವು ಸಂಬಂಧಿಸಿದ ತೋಟಗಾರರ ಗಮನಕ್ಕೆ ಇತ್ತೀಚೆಗೆ ಬಂದಿದ್ದು, ಕಂದಾಯ ಇಲಾಖೆಯು ಕೈಗೊಂಡಿರುವ ಈ ಕ್ರಮವನ್ನು ರೈತ ಸಮುದಾಯ ವಿರೋಧಿಸುತ್ತಿದೆ ಹಾಗೂ ‘ಬ’ ಖರಾಬ ಕ್ಷೇತ್ರಕ್ಕೆ ಒಳಪಡಿಸುವುದರಿಂದ ಸರ್ಕಾರವು ತನ್ನ ಸ್ವಾದೀನಕ್ಕೆ ಈ ಭೂಮಿಗಳನ್ನು ಪಡೆದುಕೊಳ್ಳಲು ಯತ್ನಿಸುತ್ತಿದೆ ಎನ್ನುವ ಆತಂಕವು ರೈತರಲ್ಲಿ ಮೂಡಿದೆ. ಕಾರಣ ಈ ಕ್ರಮ ಕೈಬಿಟ್ಟು ಆಕಾರಬಂದ್ ದುರಸ್ತಿಗೊಳಿಸಿ 2013ಕ್ಕಿಂತಲೂ ಪೂರ್ವದಲ್ಲಿ ಇರುವಂತೆ ಪೂರ್ತಿ ಕ್ಷೇತ್ರ ಪಹಣಿಯಲ್ಲಿ ನಮೂದಾಗುವಂತೆ ಕ್ರಮ ಕೈಗೊಂಡು ಬೆಟ್ಟ ಬಳಕೆದಾರರಿಗೆ ಪ್ರಸ್ತುತ ಆದ ಅನ್ಯಾಯವನ್ನು ಸರಿಪಡಿಸಬೇಕಾಗಿದೆ.
ಕಾರಣ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ಬೆಟ್ಟಭೂಮಿಯ ಪಹಣಿಯಲ್ಲಿ 3ನೇ ನಂ.ಕಾಲಂನಲ್ಲಿ ನಮೂದಿಸಿರುವ ಬ ಖರಾಬ್‌ನ್ನು ರದ್ದುಗೊಳಿಸಬೇಕು ಹಾಗೂ 9ನೇ ನಂ.ಕಾಲಂನಲ್ಲಿ ಪೂರ್ತಿ ಕ್ಷೇತ್ರವನ್ನು ಮೊದಲಿದ್ದ ಪದ್ದತಿಯಲ್ಲಿಯೇ ಮುಂದುವರಿಸಬೇಕಾಗಿದೆ.

300x250 AD

ಉತ್ತರಕನ್ನಡ ಜಿಲ್ಲೆಯ ತೋಟಿಗ ಕೃಷಿಕರಿಗೆ ನೀಡಿರುವ ವಿಶೇಷಾಧಿಕಾರವಾಗಿರುವ ಬೆಟ್ಟಭೂಮಿಯನ್ನು ಕೃಷಿಕರಿಗೇ ಉಳಿಸುವ ಸಂಬಂಧ ಇಂದು ನಡೆಯುವ ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ವಿಷಯ ಪರಿಗಣಿಸಿ ಯುಕ್ತ ನಿರ್ಣಯ ಕೈಗೊಂಡು ಬೆಟ್ಟಭೂಮಿಗೆ ಸಂಬಂಧಿಸಿದ ಆಕಾರ ಬಂದ್‌ನಲ್ಲಿ 1965ರ ನಂತರದಲ್ಲಿ ದಾಖಲಾಗಿರುವ ಬ ಖರಾಬ್ ಅನ್ನು ದುರಸ್ಥಿಗೊಳಿಸಿ ಖರಾಬ್ ದಿಂದ ಬೆಟ್ಟಭೂಮಿಯನ್ನು ಮುಕ್ತಗೊಳಿಸಿ ಅಸೈನ್ಡ್ ಬೆಟ್ಟ ಭೂಮಿ ಎಂದು ದಾಖಲಿಸಿ ಸರಿಪಡಿಸಿಕೊಡಬೇಕು. ಅಲ್ಲದೇ ಉತ್ತರಕನ್ನಡ ಜಿಲ್ಲೆಯಲ್ಲಿನ ಅಡಿಕೆ ಮತ್ತು ಸಾಂಬಾರು ಭಾಗಾಯತಗಳಲ್ಲಿ, ಕೃಷಿಯ ಅವಶ್ಯಕತೆಯನ್ನು ಪರಿಗಣಿಸಿ, ಭಾಗಾಯತಗಳಿಗೆ ಲಾಗೂ ಎಂದು, ತೀರ್ವೆ ಆಕರಣೆ ಮಾಡಿ, ಒಂದು ಎಕರೆ ಭಾಗಾಯತಕ್ಕೆ ಲಭ್ಯತೆಯ ಅನುಸಾರವಾಗಿ 9 ಎಕರೆಯವರೆಗೆ ಹಂಚಲ್ಪಟ್ಟ ಅಸೈನ್ಡ್ ಬೆಟ್ಟ (ASSIGNED) ಪ್ರದೇಶದ R.T.C. ಯಲ್ಲಿನ 3ನೇ ನಂ.ಕಾಲಂನಲ್ಲಿ ಸಂಪೂರ್ಣ ಬೆಟ್ಟ ಪ್ರದೇಶವನ್ನು ‘ಬ’ ಖರಾಬ್ ಎಂದು ಗುರುತಿಸಿರುವದನ್ನು ರದ್ದುಪಡಿಸತಕ್ಕದ್ದು. ಹಾಗೂ 9ನೇ ನಂ. ಕಾಲಂ ನಲ್ಲಿ ಕ್ಷೇತ್ರವನ್ನು ಶೂನ್ಯಗೊಳಿಸಿರುವುದನ್ನು ರದ್ದುಪಡಿಸಿ ಸಂಪೂರ್ಣ ಕ್ಷೇತ್ರವನ್ನು ಯಥಾವತ್ತಾಗಿ ಬರೆದು ಅವುಗಳನ್ನು ಅಸೈನ್ಡ ಬೆಟ್ಟ ಭೂಮಿ ಎಂದು ದಾಖಲಿಸಬೇಕೆಂಬ ಹಕ್ಕೊತ್ತಾಯವನ್ನು ರೈತರ ಪರವಾಗಿ ಮಾಡುತ್ತಿದ್ದು ಇದನ್ನು ಅಡಿಕೆ ಸಮಾವೇಶದ ಉದ್ದೇಶಗಳಲ್ಲಿ ಪರಿಗಣಿಸಿ ಸೂಕ್ತ ನಡಾವಳಿ ರಚಿಸಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಉ.ಕ. ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್ ಪರವಾಗಿ ಟಿಆರ್‌ಸಿ ನಿರ್ದೇಶಕರಾದ ಆರ್.ವಿ. ಹೆಗಡೆ, ಚಿಪಗಿ, ಶಿವಾನಂದ ಭಟ್ ನಿಡಗೋಡ, ಟಿಆರ್‌ಸಿ ಸಿಬ್ಬಂದಿ ಜಿ.ಜಿ. ಹೆಗಡೆ ಕುರುವಣಿಗೆ ಮನವಿ ಸಲ್ಲಿಸಿದರು.


ಬೆಟ್ಟ ಭೂಮಿಯನ್ನು ಬ ಖರಾಬದಿಂದ ಮುಕ್ತಗೊಳಿಸುವ ಬಗ್ಗೆ ಕಂದಾಯ ಸಚಿವರಾದ ಕೃಷ್ಣ ಭೈರೇ ಗೌಡರ ಬಳಿ ಚರ್ಚಿಸುತ್ತೇನೆ.

  • ಮಧು ಬಂಗಾರಪ್ಪ, ಶಿಕ್ಷಣ ಮತ್ತು ಸಾಕ್ಷರತಾ ಸಚಿವರು ಹಾಗೂ ಶಿವಮೊಗ್ಗ ಉಸ್ತುವಾರಿ ಸಚಿವರು

ಬೆಟ್ಟಭೂಮಿಯು ಜಿಲ್ಲೆಯ ತೋಟಿಗ ಕೃಷಿಕರಿಗೆ ನೀಡಿದ ವಿಶೇಷಾಧಿಕಾರವಾಗಿದ್ದು, ಇದನ್ನು ಕೃಷಿಕರು ಆಸಕ್ತಿಯಿಂದ ಜೀವವೈವಿಧ್ಯತೆಯನ್ನು ಕಾಪಾಡಿಕೊಂಡು ರಕ್ಷಿಸಿಕೊಂಡು ಬರುತ್ತಿದ್ದಾರೆ. ಹೀಗಿರುವಾಗ ಇತ್ತೀಚಿನ ವರ್ಷಗಳಲ್ಲಿ ಕಂದಾಯ ಇಲಾಖೆಯು ಬೆಟ್ಟಭೂಮಿಯನ್ನು ಪಹಣಿಯ ಕಾಲಂ.ನಂ.3ರಲ್ಲಿ ಪೂರ್ತಿಯಾಗಿ ಬ ಖರಾಬಿಗೆ ಒಳಪಡಿಸಿರುತ್ತದೆ. ಬ ಖರಾಬಿಗೆ ಒಳಪಡುವ ಕ್ಷೇತ್ರವು ಸರ್ಕಾರದ ಹಕ್ಕಿಗೆ ಒಳಪಡುತ್ತದೆ ಎನ್ನುವುದು ಗಮನಿಸಬೇಕಾದ ವಿಷಯವಾಗಿದೆ. ಬೆಟ್ಟ ಭೂಮಿಯನ್ನು ರೈತರಲ್ಲಿಯೇ ಉಳಿಸಿಕೊಳ್ಳಲು ಸಂಘಟನಾತ್ಮಕ ಹೋರಾಟ ಅಗತ್ಯವಾಗಿದೆ.

  • ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ,
    ಅಧ್ಯಕ್ಷರು, ಉ.ಕ. ಜಿಲ್ಲಾ ಪ್ರಾಥಮಿಕ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್
Share This
300x250 AD
300x250 AD
300x250 AD
Back to top