ಸಿದ್ದಾಪುರ: ತಾಲೂಕಿನ ಬಿಳಗಿ ಸೀಮೆಯ ಇಟಗಿ ಮಾತ್ಹೋಬಾರ ಶ್ರೀ ರಾಮೇಶ್ವರ ಮತ್ತು ಶ್ರೀ ಅಮ್ಮನವರು ಹಾಗೂ ಶ್ರೀವಿಠ್ಠಲದೇವರ ಅಷ್ಟಬಂಧಮಹೋತ್ಸವ ಏ.2 ರಿಂದ ಏ.13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಅತ್ಯಂತ ವಿಜೃಂಭಣೆಯಿಂದ ಹಾಗೂ ಶಾಸ್ತ್ರೋಕ್ತವಾಗಿ ನಡೆಸಲಾಗುತ್ತಿದೆ ಎಂದು ಅಷ್ಟಬಂಧ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.
ಪಟ್ಟಣದಲ್ಲಿ ಅಷ್ಟಬಂಧ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಬುಧವಾರ ಮಾತನಾಡಿದರು. ಅಷ್ಟಬಂಧ ಕಾರ್ಯಕ್ರಮದ ದಿವ್ಯಸಾನ್ನಿಧ್ಯವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ವಹಿಸಲಿದ್ದಾರೆ. ಬಿಳಗಿ ಸೀಮೆಯ ಇಟಗಿ ರಾಮೇಶ್ವರ ದೇವಸ್ಥಾನದಲ್ಲಿ 60ವರ್ಷಗಳ ಹಿಂದೆ ಅಷ್ಟಬಂಧ ಮಹೋತ್ಸವ ನಡೆದಿತ್ತು. ಹಿಂದಿನಿಂದ ಇಂದಿನವರೆಗೂ ಪಂಚವಾದ್ಯಸಹಿತ ಪ್ರತಿದಿನವೂ ತ್ರಿಕಾಲ ಬಲಿಪೂಜೆ ನಡೆಯುವ ಏಕೈಕ ದೇವಾಲಯ ಇದಾಗಿದೆ. ಅಷ್ಟಬಂಧ ಮಹೋತ್ಸವದ ಅಂಗವಾಗಿ ಬಿಳಗಿ ಸೀಮೆಯ ಪ್ರತಿಯೊಂದು ಮನೆಗೆ ಬೇಟಿ ನೀಡಿ ಮಾಹಿತಿ ನೀಡಲಾಗಿದೆ. ಏ.2ರಿಂದ 13ರವರೆಗೆ ನಿತ್ಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.
ಮುಖ್ಯವಾಗಿ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಗುರುಭಿಕ್ಷಾ, ಶ್ರೀಪಾದುಕಾ ಪೂಜೆ, ಮಹಾರುದ್ರಯಾಗ, ಶತಚಂಡೀಯಾಗ, ಭಾಗವತ ಸಪ್ತಾಹ, ಬ್ರಹ್ಮಕಲಶೋತ್ಸವ, ಮಹಾರಥೋತ್ಸವ, ವೈದಿಕ ವಿದ್ವಾಂಸರ ಧಾರ್ಮಿಕ ಸಾರಥ್ಯ, ವೈದಿಕ ಸಮೂಹದ ವೇದಘೋಷದೊಂದಿಗೆ ನಿತ್ಯೋತ್ಸವ, ಧಾರ್ಮಿಕ ಉಪನ್ಯಾಸ, ಅನುದಿನವೂ ಅನ್ನದಾಸೋಹ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಶ್ರೀರಾಘವೇಶ್ವರ ಭಾರತೀ ಶ್ರೀಗಳವರು ಏ.3ರಂದು ಸಂಜೆ ಪುರಪ್ರವೇಶ ಮಾಡಿಲಿದ್ದಾರೆ. ಧೂಳಿ ಪೂಜೆ, ಶ್ರೀಕರಾರ್ಚಿತ ಪೂಜೆ, 4ರಂದು ಬೆಳಗ್ಗೆ ಶ್ರೀಕರಾರ್ಚಿತ ಪೂಜೆ, ಶ್ರೀಗಳವರ ಅಮೃತ ಕರಕಮಲಗಳಿಂದ ದಿವ್ಯಾಷ್ಟಬಂಧ ಮಹೋತ್ಸವ, ಸೀಮಾ ಬಿಕ್ಷಾಂಗ ಸೇವೆ, ಫೆ.9ರಂದು ಸಂಜೆ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, 10ರಂದು ಬೆಳಗ್ಗೆ ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, ಸೀಮಾ ಸ್ವರ್ಣಪಾದುಕಾ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ, ಮಧ್ಯಾಹ್ನ ಶ್ರೀಗಳವರ ದಿವ್ಯಸಾನ್ನಿಧ್ಯದಲ್ಲಿ ಧರ್ಮಸಭೆ ಹಾಗೂ ಆಶೀರ್ವಚನ, 11ರಂದು ಸ್ವರ್ಣಮಂಟಪಾಲಂಕೃತ ಶ್ರೀಕರಾರ್ಚಿತ ಪೂಜೆ, ಸೀಮಾಭಿಕ್ಷಾ, ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಮಹಾಸ್ಯಂದನೋತ್ಸವ ಜರುಗಲಿದೆ ಎಂದು ಹೇಳಿದರು.
ಸ್ವಸ್ತಿಕ ರಾಮ ಭಟ್ಟ ಮಾತನಾಡಿ ಅಷ್ಟಬಂಧ ಮಹೋತ್ಸವದಲ್ಲಿ 50 ವೈದಿಕರು ಭಾಗವಹಿಸಲಿದ್ದು ಅದರಲ್ಲಿ 44ವವೈದಿಕರು ಬಿಳಗಿ ಸೀಮೆಯವರೇ ಆಗಿದ್ದಾರೆ. ತಂತ್ರಾಗಮ ಪರಿಣಿತರಾದ ವೇ.ಶಂಕರ ಪರಮೇಶ್ವರ ಭಟ್ಟ ಕಟ್ಟೆ ಅವರ ಮಾರ್ಗದರ್ಶನದಲ್ಲಿ ಅಷ್ಟಬಂಧ ಮಹೋತ್ಸವ ನಡೆಯಲಿದೆ. ಶ್ರೀಕ್ಷೇತ್ರದ ತಾಂತ್ರಿಕರು ಮತ್ತು ಅರ್ಚಕರು ತಾಂತ್ರಿಕ ನೇತೃತ್ವವಹಿಸಲಿದ್ದಾರೆ ಎಂದು ಹೇಳಿದರು.
ಜಿ.ಕೆ.ಭಟ್ಟ, ನಾರಾಯಣಮೂರ್ತಿ ಹೆಗಡೆ, ಉಮೇಶ ಹೆಗಡೆ, ಗಜಾನನ ಹೆಗಡೆ, ವಿನಾಯಕ ಹೆಗಡೆ, ಎಂ.ಡಿ.ನಾಯ್ಕ, ಹುಲಿಯಾ ಗೌಡ ಇದ್ದರು.