ಸಿದ್ದಾಪುರ: ತಾಲೂಕಿನ ಕಡಕೇರಿ ಶಾಲಾ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಕಪ್ನ್ನು ಸಿದ್ದಾಪುರದ ಪತ್ರಕರ್ತರ ಸಂಘ ತನ್ನ ಮುಡಿಗೇರಿಸಿಕೊಂಡಿದೆ.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ,ಮಾಧ್ಯಮ ಪ್ರತಿನಿಧಿಗಳ ಸಂಘ ಸಿದ್ದಾಪುರ ಹಾಗೂ ಎಲ್ಲ ಇಲಾಖೆಗಳ ಸಹಯೋಗದೊಂದಿಗೆ ಎರಡು ದಿನಗಳ ಕಾಲ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾನುವಾರ ಕೋ-ಆಪರೇಟಿವ್ ತಂಡವನ್ನು ಸೋಲಿಸಿ ಸಿದ್ದಾಪುರದ ಪತ್ರಕರ್ತರ ಸಂಘ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕೋ-ಆಪರೇಟಿವ್ ತಂಡ ದ್ವಿತೀಯ, ಟೀಚರ್ಸ್ ಪ್ರೈಮರಿ ತೃತೀಯ ಹಾಗೂ ಹೆಸ್ಕಾಂ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.
ಉತ್ತಮ ಬೌಲರ್ ಪ್ರಶಸ್ತಿಯನ್ನು ಪತ್ರಕರ್ತರ ಸಂಘದ ಚಂದ್ರು, ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಕೋ-ಆಪರೇಟಿವ್ ತಂಡದ ಕೇಶವ ಹಾಗೂ ಪಂದ್ಯಪುರುಷ ಪ್ರಶಸ್ತಿಯನ್ನು ಪತ್ರಕರ್ತರ ಸಂಘದ ವಸಂತ ಹೆಗಡೆ ಪಡೆದುಕೊಂಡರು.
ಬಹುಮಾನ ವಿತರಣೆ: ತಹಸೀಲ್ದಾರ ಎಂ.ಆರ್.ಕುಲಕರ್ಣಿ ಬಹುಮಾನ ವಿತರಿಸಿದರು. ಬೇಡ್ಕಣಿ ಗ್ರಾಪಂ ಸದಸ್ಯ ಕೃಷ್ಣಮೂರ್ತಿ ಕಡಕೇರಿ, ಹೆಸ್ಕಾಂ ಇಂಜಿನಿಯರ್ ನಾಗರಾಜ್ ಪಾಟೀಲ್, ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಗುರುರಾಜ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ, ಮಾಧ್ಯಮ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಕನ್ನೇಶ ಕೋಲಸಿರ್ಸಿ ಇತರರಿದ್ದರು.
ಪತ್ರಕರ್ತರಾದ ರಮೇಶ ಹಾರ್ಸಿಮನೆ ಹಾಗೂ ನಾಗರಾಜ ಮಾಳ್ಕೋಡ ಕಾರ್ಯಕ್ರಮ ನಿರ್ವಹಿಸಿದರು.