ಶಿರಸಿ: ಶಿರಸಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಸತ್ಯಕ್ಕಾಗಿ ಆಗ್ರಹಿಸಿ ಜನವರಿ 13 ರಂದು ಬೆಳಿಗ್ಗೆ 9 ಗಂಟೆಗೆ ಬಿಡ್ಕಿಬೈಲಿನಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಿರಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಮಾನ್ಯ ತಹಶೀಲ್ದಾರರ ಕಛೇರಿಯಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಲಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಬುಧವಾರ ಶಿರಸಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕಳೆದ ಕೆಲ ದಿನದ ಹಿಂದೆ ಜಿಲ್ಲೆಯ ಎರಡು ಪತ್ರಿಕೆಗಳಲ್ಲಿ ಶಿರಸಿ ಸರ್ಕಾರಿ ಹೈಟೆಕ್ ಆಸ್ಪತ್ರೆಗೆ ಸಂಬಂಧಿಸಿ ಕ್ಷೇತ್ರದ ಮಾನ್ಯ ಶಾಸಕರು ಎರಡು ಭಿನ್ನ ಭಿನ್ನ ಹೇಳಿಕೆ ನೀಡಿದ್ದು, ಇದರಿಂದ ಕ್ಷೇತ್ರದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಆಸ್ಪತ್ರೆ ವಿಚಾರ ಬಹಳ ಗಂಭೀರವಾಗಿದ್ದು, ಮಾನ್ಯ ಶಾಸಕರು ಈಗಿನ ಗೊಂದಲವನ್ನು ನಿವಾರಿಸಬೇಕು ಜೊತೆಗೆ ನಾವು ನಡೆಸುವ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಅವರು ಆಗಮಿಸಿ, ಆಸ್ಪತ್ರೆ ವಿಚಾರದಲ್ಲಿನ ಸತ್ಯವನ್ನು ಜನರೆದುರು ತೆರೆದಿಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ನಮಗಿದೆ. ಆಸ್ಪತ್ರೆ ವಿಚಾರದಲ್ಲಿ ನಾವು ಶಾಸಕರ ಬೆಂಬಲಕ್ಕೆ ಸದಾ ಇದ್ದು, ತಮ್ಮಿಂದ ಸತ್ಯಕ್ಕಾಗಿ ಆಗ್ರಹಿಸುತ್ತಿದ್ದೇವೆ ಎಂದರು.
ಆಸ್ಪತ್ರೆಗೆ ಸಂಬಂಧಿಸಿ ಈಗಾಗಲೇ ರೂ. 112 ಕೋಟಿ ಸಿವಿಲ್ ಕಾಮಗಾರಿಗೆ ಅನುದಾನ ಮಂಜೂರಿಯಾಗಿ, ಟೆಂಡರ್ ಸಹ ಆಗಿ ಕೆಲಸ ನಡೆಯುತ್ತಿದೆ. ಹಾಗಾಗಿ ಈಗಿನ ಶಾಸಕರು ರೂ. 44 ಕೋಟಿ ಅನುದಾನ ತಂದಿದ್ದಾರೆ ಎಂದು ಸಾರುವುದರಲ್ಲಿ ಅರ್ಥವೇ ಇಲ್ಲ. ಅದು ಯಾರೇ ಶಾಸಕರಿದ್ದರೂ ಸಹ ಬರುವಂಥದ್ದು ಮತ್ತು ಇಲಾಖೆಯ ಸಹಜವಾದ ಕೆಲಸದ ಪ್ರಕ್ರಿಯೆಯಿಂದ ಆ ಹಣ ಬರುವಂಥದ್ದು.ಅದರಲ್ಲಿ ಶಾಸಕರ ಪ್ರಯತ್ನ ಇರುವುದಿಲ್ಲ. ಆದರೆ ಈಗ ನಿಜವಾದ ಸಮಸ್ಯೆ ಇರುವುದು ಯಂತ್ರೋಪಕರಣಗಳ ವಿಚಾರದಲ್ಲಾಗಿದೆ. ಯಂತ್ರೋಪಕರಣಗಳ ಖರೀದಿಗೆ ಘೋಷಿಸಿದ್ದ ರೂ. 30 ಕೋಟಿ ಅನುದಾನ ತರಲು ಶಾಸಕರು ಈಗ ಸರಕಾರದಲ್ಲಿ ವಿಶೇಷ ಪ್ರಯತ್ನ ಮಾಡಬೇಕೆ ಹೊರತು, ಈಗಾಗಲೇ ಮಂಜೂರಾಗಿರುವ ಕೆಲಸದಲ್ಲಲ್ಲ. ನಾವು ಇಲ್ಲಿ ರಾಜಕೀಯ ಮಾಡುತ್ತಿಲ್ಲ. ಕ್ಷೇತ್ರದ ಜನರ ಆಸ್ತಿಯಾಗಿರುವ ಆಸ್ಪತ್ರೆಯ ಹಕ್ಕನ್ನು ಕೇಳುತ್ತಿದ್ದೇವೆ. ಈ ವಿಷಯದಲ್ಲಿ ನಾವೂ ಸಹ ಶಾಸಕರ ಬೆನ್ನಿಗೆ ನಿಂತು, ಹೋರಾಡಲು ಸಿದ್ಧರಿದ್ಧೇವೆ ಎಂದರು.
ಆಸ್ಪತ್ರೆಯ ವಿಚಾರದಲ್ಲಿ ನ್ಯಾಯ ಕೇಳಿ, ಸತ್ಯ ಹೇಳಲು ಆಗ್ರಹಿಸಿದರೆ ನನ್ನನ್ನು ಯಾವುದೋ ಪಕ್ಷಕ್ಕೆ, ಜಾತಿಗೆ ಸೀಮಿತಗೊಳಿಸಿ ವಯಕ್ತಿಕ ನಿಂದನೆ ಮಾಡುವಂತದ್ಧು ಎಂದಿಗೂ ಒಪ್ಪತಕ್ಕದ್ದಲ್ಲ. ಪೂಜ್ಯ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದು ಮಾರಕ. ಹಾಗಾಗಿ ಸತ್ಯವನ್ನು ಹೇಳುವ ಕೆಲಸವಾಗಬೇಕೆ ಹೊರತು ವಯಕ್ತಿಕ ನಿಂದನೆಯಲ್ಲ ಎಂದರು.
ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ನಾವು ಯಾವುದೇ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಇಲ್ಲಿ ನಿಂತಿಲ್ಲ. ಬದಲಾಗಿ ಶಾಸಕರ ಬೆಂಬಲಕ್ಕೇ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದೇವೆ. ಜನರ ಸಮಸ್ಯೆಗೆ ಸದಾ ಸ್ಪಂದಿಸುವ ಗುಣ ಭೀಮಣ್ಣ ನಾಯ್ಕರದ್ದಾಗಿದೆ. ಆಸ್ಪತ್ರೆ ವಿಷಯದಲ್ಲಿಯೂ ಅವರು ಬಡವರ ಪರ ನಿಲ್ಲುವ ಮೂಲಕ ನಮ್ಮ ಹೋರಾಟಕ್ಕೆ ಸ್ಪಂದಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದರು.
ಧುರೀಣರಾದ ಜಯಶೀಲ ಗೌಡ ಬನವಾಸಿ ಮಾತನಾಡಿ, ಆಸ್ಪತ್ರೆಯ ವಿಚಾರದಲ್ಲಿ, ದಾಖಲೆಗಳನ್ನು ಮಾನ್ಯ ಶಾಸಕರೇ ಇಲಾಖೆ ಅಧಿಕಾರಿಗಳಿಂದ ಪಡೆದು ಪರಿಶೀಲನೆ ನಡೆಸಲಿ. ನಾವು ಯಾರೂ ಸುಳ್ಳು ದಾಖಲೆ ಇಟ್ಟು ಮಾತನಾಡುತ್ತಿಲ್ಲ. ಅವರಿಗೂ ಸಹ ಎಲ್ಲ ದಾಖಲೆಗಳು ಲಭ್ಯವಿದೆ. ಆಸ್ಪತ್ರೆ ವಿಚಾರದಲ್ಲಿ ಹೋರಾಟಗಾರರ ನಿಂದನೆ ಮಾಡುವುದು ಸರಿಯಲ್ಲ. ದಾಖಲೆಗಳಿಗೆ ಉತ್ತರ ನೀಡುವ ಪ್ರಯತ್ನ ಎಲ್ಲರಿಂದ ಆಗಲಿ ಎಂದರು.
ಸಾಮಾಜಿಕ ಕಾರ್ಯಕರ್ತೆ ಉಷಾ ಹೆಗಡೆ ಮಾತನಾಡಿ, ಶಿರಸಿಗೆ ಸುಸಜ್ಜಿತ ಆಸ್ಪತ್ರೆ ಬೇಕೆನ್ನುವ ಕೂಗಿಗೆ ಇದೀಗ ಹೈಟೆಕ್ ಆಸ್ಪತ್ರೆ ಕೆಲಸಗಳು ನಡೆಯುತ್ತಿದೆ. ಈ ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಕ್ಷೇತ್ರದ ಜನಸಂಖ್ಯೆಯನ್ನು ನೋಡಿದರೆ ಈ ಹೈಟೆಕ್ ಆಸ್ಪತ್ರೆ ಎಲ್ಲ ಸೌಕರ್ಯಗಳನ್ನು ಒಳಗೊಂಡು ತುರ್ತಾಗಿ ಕೆಲಸ ನಿರ್ವಹಿಸುವ ಅವಶ್ಯಕತೆ ಇದೆ.
ಸುದ್ದಿಗೋಷ್ಟಿಯಲ್ಲಿ ಪ್ರಮುಖರಾದ ಜಯಶೀಲ ಗೌಡ, ಹಾಲಪ್ಪ ಜಕ್ಕಣ್ಣನವರ, ಉಷಾ ಹೆಗಡೆ, ಶಿವಾನಂದ ದೇಶಳ್ಳಿ, ಅನಿಲ ನಾಯಕ ಶಿರಸಿ, ಹರೀಶ ಕರ್ಕಿ, ಜಿ.ಎಸ್. ಹೆಗಡೆ, ಚಿದಾನಂದ ಹರಿಜನ, ನಾಗರಾಜ ಜೋಶಿ ಇದ್ದರು.
ಖೋಟ್ ::
ಸರಕಾರಿ ಆಸ್ಪತ್ರೆಗೆ ಈಗಿನ ಶಾಸಕರು ರೂ. 44 ಕೋಟಿ ಹಣ ತರುವ ಪ್ರಕ್ರಿಯೆ ಹೊಸದಾಗಿ ಸಂಭವಿಸುವುದಿಲ್ಲ. ಹಿಂದಿನ ಶಾಸಕರ ಅವಧಿಯಲ್ಲಿಯೇ ರೂ. 33 ಕೋಟಿ ಹಣ ಸಹ ಬಿಡುಗಡೆಯಾಗಿತ್ತು. ಈಗಾಗಲೇ 112 ಕೋಟಿ ಟೆಂಡರ್ ಆಗಿರುವ ಕಟ್ಟಡಕ್ಕೆ ಕೆಲಸ ಪೂರ್ಣ ಆದ ಹಾಗೆ, ನಿಗಧಿಯಾದ ಹಣ ಇಲಾಖೆಯಿಂದ ಬಂದೇ ಬರುತ್ತದೆ. ಇದರಲ್ಲಿ ಶಾಸಕರ ವಿಶೇಷ ಪಾತ್ರದ ಪ್ರಮೇಯವೇ ಇರುವುದಿಲ್ಲ. — ಅನಂತಮೂರ್ತಿ ಹೆಗಡೆ
ಬಾಕ್ಸ್ :
ನಿಜವಾಗಿ ನಡೆಯುತ್ತಿರುವುದೇನು ?
ದಿನಾಂಕ 13-11-2020 ರಂದು ಅಂದಿನ ಸಭಾಧ್ಯಕ್ಷ ಸನ್ಮಾನ್ಯ ಕಾಗೇರಿಯವರ ಸತತ ಪ್ರಯತ್ನದಿಂದ ಶಿರಸಿಗೆ ಹಲವಾರು ಸುಪರ್ ಸ್ಪೆಷಾಲಿಟಿ ಒಳಗೊಂಡ 142 ಕೋಟಿಯ ಹೈಟೆಕ್ ಆಸ್ಪತ್ರೆ ಎಲ್ಲ ಇಲಾಖೆಗಳ ಅನುಮೋದನೆ ಪಡೆದು ಕ್ಯಾಬಿನೆಟ್ ತೀರ್ಮಾನವಾಗಿ ಬಿಡುಗಡೆಯಾಯಿತು. ರೂ. 112 ಕೋಟಿ ಸಿವಿಲ್ ಕಾಮಗಾರಿಗಳ ವೆಚ್ಚ್, 30 ಕೋಟಿ ವೈದ್ಯಕೀಯ ಉಪಕರಣ ಮತ್ತು ಯಂತ್ರಗಳ ವೆಚ್ಚಗಳನ್ನು ಒಳಗೊಂಡಿತ್ತು. ಆರಂಭಗೊಂಡು ಮೂರು ವರ್ಷದೊಳ್ಗೆ ಮುಗಿಯಬೇಕಿದ್ದ ಕೆಲಸ ಕರೋನಾ ಕಾರಣದಿಂದ ಎರಡು ವರ್ಷ ವಿಳಂಬವಾಯಿತು. ಈಗ ಸುಮಾರು ಎಂಟು ತಿಂಗಳ ಹಿಂದೆ ಸುಮಾರು 70% – 80% ಕೆಲಸ ಪೂರ್ಣಗೊಂಡಿರುತ್ತದೆ. ಸರಕಾರದ ಆದೇಶದನ್ವಯ 80% ಕೆಲಸ ಪೂರ್ಣಗೊಂಡ ನಂತರ ಯಂತ್ರೋಪಕರಣಗಳಿಗಾಗಿ ಮೀಸಲಿಟ್ಟಿರುವ ರೂ. 30 ಕೋಟಿ ಹಣದ ಕುರಿತಾಗಿ ಟೆಂಡರ್ ಕರೆಯಬೇಕಿತ್ತು. ಸದರಿ ಪ್ರಸ್ತಾವನೆಯನ್ನು ರಾಜ್ಯಸರಕಾರಕ್ಕೆ ಇಲ್ಲಿನ ಆಡಳಿತಾಧಿಕಾರಿಗಳು ಕಳುಹಿಸಿದ್ದು, ಇದು ತಾಲೂಕು ಆಸ್ಪತ್ರೆ, ಹಾಗಾಗಿ 30 ಕೋಟಿ ಬದಲಾಗಿ ಕೇವಲ 5 ಕೋಟಿ 20 ಲಕ್ಷ ಹಣವನ್ನು ಮಾತ್ರ ನೀಡಲು ಸಾಧ್ಯ ಎನ್ನುವಂತಹ ವಿಷಯ ವರದಿಯಾಗಿದೆ.
ಬಡವರ ಭಾಗ್ಯ ಕಸಿದುಕೊಳ್ಳಬೇಡಿ :
ಈ ಹೈಟೆಕ್ ಸರಕಾರಿ ಆಸ್ಪತ್ರೆಯಿಂದ ಬಡವರಿಗೆ ಉಚಿತವಾಗಿ ಸಿಗಬೇಕಿದ್ದ 15 ಕೋಟಿ MRI ಸ್ಕ್ಯಾನಿಂಗ್ ಮಷಿನ್, 2 ಕೋಟಿ ಸಿಟಿ ಸ್ಕ್ಯಾನ್ ಮಷಿನ್ ಒಳಗೊಂಡಂತೆ ಹೃದಯಕ್ಕೆ ಸಂಬಂಧಿಸಿದ ಮತ್ತು ಟ್ರಾಮಾ ಸೆಂಟರ್ ಗೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ಹಲವಾರು ಸೂಪರ್ ಸ್ಪೆಷಾಲಿಟಿ ಯಂತ್ರೋಪಕರಣಗಳನ್ನು ಕ್ಷೇತ್ರದ ಜನ ಕಳೆದುಕೊಂಡಂತಾಗುತ್ತದೆ. ಹಾಗಾಗಲು ನಾವು ಯಾವುದೇ ಕಾರಣಕ್ಕೂ ಕೊಡುವುದಿಲ್ಲ.