ಶಂಕರಮಠದಲ್ಲಿ ಯಶಸ್ವಿಗೊಂಡ ಕನ್ನಡ ಸಾಹಿತ್ಯ ಸಮ್ಮೇಳನ
ಸಿದ್ದಾಪುರ: ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸಿದ್ದಾಪುರ ತಾಲೂಕು ಏಳನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಬುಧವಾರ ಜರುಗಿತು. ತಾಲೂಕಿನ ಹಾಗೂ ಜಿಲ್ಲೆಯ ವಿವಿಧ ತಾಲೂಕಿನ ಕನ್ನಡ ಸಾಹಿತ್ಯಾಭಿಮಾನಿಗಳು ಪಾಲ್ಗೊಂಡು ಸಮ್ಮೇಳನಕ್ಕೆ ಸಾಕ್ಷಿಯಾದರು.
ಹಿರಿಯ ಪತ್ರಕರ್ತ ಹಾಗೂ ಬರಹಗಾರ ರವೀಂದ್ರ ಭಟ್ಟ ಐನಕೈ ಸಮ್ಮೇಳನ ಉದ್ಘಾಟಿಸಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಕನ್ನಡಿಗರಾದ ನಾವೇ ಆಚರಣೆ ಮಾಡುವುದಕ್ಕೆ ಮುಂದಾಗಬೇಕು. ಇದಕ್ಕೆ ಸರ್ಕಾರದ ಅನುದಾನವನ್ನು ಅವಲಂಬಿಸಬಾರದು. ನಮ್ಮ ನಾಡಿನ ಸಂಸ್ಕೃತಿ, ಪರಿಸರ, ನೆಲ, ಜಲವನ್ನು ಕಲುಷಿತಗೊಳ್ಳದಂತೆ ಕಾಪಾಡಿಕೊಳ್ಳುವುದು ನಿಜವಾದ ಅಭಿವೃದ್ದಿ.ಜಿಲ್ಲೆಯಲ್ಲಿ ಶುದ್ಧವಾದ ಕನ್ನಡ ಇನ್ನೂ ಜೀವಂತವಾಗಿ ಇರುವುದರಿಂದ ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಹೆಚ್ಚು ಉತ್ತರ ಕನ್ನಡ ಜಿಲ್ಲೆಯ ಜನರನ್ನು ಕಾಣಲು ಸಾಧ್ಯ. ಕನ್ನಡಿಗರ ಹೃದಯ ಶ್ರೀಮಂತಿಕೆಯಿಂದ ಇಂತಹ ಹಬ್ಬಗಳು ಯಾವುದೇ ಅನುದಾನ ಇಲ್ಲದಿದ್ದರೂ ವಿಜೃಂಭಣೆಯಿಂದ ನಡೆಯುತ್ತದೆ. ಎಲ್ಲ ಕನ್ನಡ ಶಾಲೆಯಲ್ಲಿ ಮೊಬೈಲ್ ರಹಿತ ಹಾಗೂ ಪುಸ್ತಕ ಕ್ರಾಂತಿ ದಿನ ನಡೆಯುವಂತಾಗಬೇಕೆಂದು ಹೇಳಿದರು.
ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರು ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಸಾಹಿತಿಗಳ ಪರಿಕಲ್ಪನೆ ಕೇವಲ ಪುಸ್ತಕಗಳಿಗೆ ಸೀಮಿತವಾಗದೇ ಅದು ಕಾರ್ಯರೂಪಕ್ಕೆ ಬಂದಾಗ ಮಾತ್ರ ಬದಲಾವಣೆ ಸಾಧ್ಯ. ಸಾಹಿತ್ಯ ಸಮ್ಮೇಳನಗಳು ಯುವ ಸಾಹಿತಿಗಳ ಪ್ರತಿಭೆ ಅನಾವರಣಗೊಳ್ಳಲು ಉತ್ತಮ ವೇದಿಕೆಯಾಗಿದೆ. ಪಂಚಾಯಿತಿ ವಾಚನಾಲಯಗಳಲ್ಲಿ ಕ್ಷೇತ್ರದ ಸಾಹಿತಿಗಳ ಪುಸ್ತಕ ಇಡಲು ಶಾಸಕರ ನಿಧಿಯಿಂದ ವ್ಯವಸ್ಥೆ ಮಾಡಲಾಗುವುದು. ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಹಿತ್ಯ ಸಮ್ಮೇಳನಗಳು ಅಧಿಕಾರಿಗಳಿಗೆ ಹಾಗೂ ಸಂಘಟಕರಿಗೆ ಮಾತ್ಚರ ಸೀಮಿತವಾಗಿರದೇ ಜನಸಾಮನ್ಯರು ಸಹ ಪಾಲ್ಗೊಳ್ಳುವಂತಾಗಬೇಕು. ಪುಸ್ತಕ ನೋಡುವ ಬದಲಾಗಿ ಓದುವ ಸಂಸ್ಕೃತಿ ನಮ್ಮದಾಗಬೇಕು. ಮಕ್ಕಳಿಗೆ ನಮ್ಮ ಸಂಸ್ಕೃತಿ, ಭಾಷೆಯ ಕುರಿತು ಸರಿಯಾದ ತಿಳುವಳಿಕೆ ನೀಡಿದರೆ ಅಭಿವೃದ್ಧಿಯೂ ಆಗುತ್ತದೆ ಎಂದರು.
ಸಮ್ಮೇಳನದ ಸರ್ವಾಧ್ಯಕ್ಷ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ ನಮ್ಮ ತಾಲೂಕಿಗೆ ತನ್ನದೇ ಆದ ಇತಿಹಾಸವಿದೆ. ಹಿಂದಿನ ಅರಿವಿನ ಮೇಲೆ ಭವಿಷ್ಯ ರೂಪುಗೊಳ್ಳಲು, ವರ್ತಮಾನವನ್ನು ಗಟ್ಟಿಗೊಳಿಸಲು ಇತಿಹಾಸ ಅಗತ್ಯ. ಕಾವ್ಯ ಎಂಬುದು ಸಾಹಿತ್ಯದ ಮೊದಲ ಮೆಟ್ಟಿಲು. ಇದರಲ್ಲಿ ಅನುಭವ ಬೆರೆತಾಗ ಉತ್ತಮ ಕವಿತೆ ಹೊರಬರುತ್ತದೆ. ಸಾಧಕರು, ಮೇಧಾವಿಗಳು, ಪಂಡಿತರು ,ಪಾಂಡಿತ್ಯವನ್ನು ಹೊತ್ತುಕೊಂಡು ಹುಟ್ಟಿದವರಲ್ಲ. ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯಬೇಕಾದರೆ ನಿರಂತರ ಪರಿಶ್ರಮ ಅಗತ್ಯ.ನಾವು ನಮ್ಮವರನ್ನು ಪ್ರೀತಿಸುವುದರ ಜತೆಗೆ ನಮ್ಮ ಭಾಷೆಯನ್ನು ಗೌರವಿಸಿ ನಿತ್ಯ ಬಳಕೆಮಾಡಬೇಕು ಎಂದು ಹೇಳಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಜಿ. ನಾಗರಾಜ ದ್ವಾರಗಳನ್ನು ಉದ್ಘಾಟಿಸಿದರು. ನಿವೃತ್ತ ಉಪನ್ಯಾಸಕ ಕೆ. ಎ. ಭಟ್ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಆರ್. ಕೆ. ಹೊನ್ನೆಗುಂಡಿ ಧ್ವಜ ಹಸ್ತಾಂತರಿಸಿದರು.
ಬೆಳಿಗ್ಗೆ ಪಟ್ಟಣದ ಜೋಗ ವೃತ್ತದಿಂದ ಆರಂಭಗೊಂಡ ಸಾಂಸ್ಕೃತಿಕ ಮೆರವಣಿಗೆಗೆ ತಾಪಂ ಇಒ ದೇವರಾಜ ಹಿತ್ಲಕೊಪ್ಪ ಚಾಲನೆ ನೀಡಿದರು. ಟಿಎಂಎಸ್ ಅಧ್ಯಕ್ಷ ಆರ್. ಎಂ. ಹೆಗಡೆ ಬಾಳೇಸರ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ.ಶಶಿಭೂಷಣ ಹೆಗಡೆ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ವಿಜೇಂದ್ರ ಗೌಡರ್, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಗೌಡರ್, ಬಿಒಒ ಎಂ. ಎಚ್ .ನಾಯ್ಕ, ಸುರೇಂದ್ರ ದಫೇದಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಶಿರಸಿ ತಾಲೂಕು ಕಸಾಪ ಅಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಇತರರಿದ್ದರು.
ತಹಸೀಲ್ದಾರ ಎಂ. ಆರ್. ಕುಲಕರ್ಣಿ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಪ್ರಾಸ್ತಾವಿಕ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್ .ವಾಸರೆ ಆಶಯ ನುಡಿಗಳನ್ನಾಡಿದರು.
ಶಿಕ್ಷಕ ಎಂ. ಆರ್. ಭಟ್ಟ ಮತ್ತು ಉಷಾ ಪ್ರಶಾಂತ ನಾಯ್ಕ ನಿರ್ವಹಿಸಿದರು.